ಕ್ರೀಡೆ

ಅಬ್ಬಬ್ಬಾ... ತಮ್ಮ ಪ್ರೇಯಸಿಗೆ ರೊನಾಲ್ಡೊ ತೊಡಿಸಿದ ವಜ್ರದುಂಗುರದ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ! Cristiano Ronaldo

Cristiano Ronaldo : ಪೋರ್ಚುಗಲ್​ ಮೂಲದ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೆಲವು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದ ಜೋಡಿ ಕೊನೆಗೂ ಮದುವೆಯಾಗಲು ನಿರ್ಧರಿಸಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಜೋಡಿಗೆ ಈಗಾಗಲೇ ಐವರು ಮಕ್ಕಳಿದ್ದಾರೆ.

ರೊನಾಲ್ಡೊ ಅವರು ಪ್ರಪೋಸ್ ಮಾಡುವಾಗ ನೀಡಿದ ದುಬಾರಿ ಉಂಗುರದ ಫೋಟೋವನ್ನು ಜಾರ್ಜಿನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಇಬ್ಬರು ಕೈ ಕೈ ಹಿಡಿದಿರುವ ಫೋಟೋ ಹಂಚಿಕೊಂಡು ಹೌದು, ನಾನು ನಿನ್ನನ್ನೂ ಪ್ರೀತಿ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರ ಕಣ್ಣು ಉಂಗುರದ ಮೇಲೆ ಬಿದ್ದಿದ್ದು, ಅದರ ಬೆಲೆ ಎಷ್ಟು ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.

ಐದು ಸೆಂಟಿಮೀಟರ್‌ಗಳಿಗಿಂತ ಹೆಚ್ಚು ಉದ್ದವಿರುವ ಈ ಉಂಗುರವು ದೊಡ್ಡ ಅಂಡಾಕಾರದ ವಜ್ರ ಮತ್ತು ಅದರ ಎರಡೂ ಬದಿಗಳಲ್ಲಿ ಎರಡು ವಜ್ರದ ಹರಳುಗಳನ್ನು ಹೊಂದಿದೆ. ನ್ಯೂಯಾರ್ಕ್‌ನ ಪ್ರಸಿದ್ಧ ಆಭರಣ ವ್ಯಾಪಾರಿ ಬ್ರಯೋನಿ ರೇಮಂಡ್ ಪ್ರಕಾರ, ಈ ದೊಡ್ಡ ವಜ್ರವು 25 ರಿಂದ 30 ಕ್ಯಾರೆಟ್‌ಗಳಷ್ಟು ತೂಗುತ್ತದೆ. ಪ್ರಮುಖ ಆಭರಣ ಬ್ರ್ಯಾಂಡ್ ಫ್ರಾಂಕ್ ಡಾರ್ಲಿಂಗ್‌ನ ಸಂಸ್ಥಾಪಕ ಕೀಗನ್ ಫಿಶರ್ ಪ್ರಕಾರ, ಬದಿಗಳಲ್ಲಿರುವ ಎರಡು ವಜ್ರಗಳು ಸುಮಾರು ಒಂದು ಕ್ಯಾರೆಟ್ ತೂಗುತ್ತವೆ. ಆದ್ದರಿಂದ, ಇದು ಪ್ರೀಮಿಯಂ ಉಂಗುರವಾಗಿದೆ.

ತಜ್ಞರ ಪ್ರಕಾರ, ಇದು ಸುಮಾರು ಎರಡರಿಂದ ಐದು ಮಿಲಿಯನ್ ಮೌಲ್ಯದ್ದಾಗಿದೆ. ಅಂದರೆ, ಸುಮಾರು 16.8 ಕೋಟಿಯಿಂದ 42 ಕೋಟಿಯವರೆಗೆ ಬೆಲೆ ಬಾಳುತ್ತದೆ. ಇದರ ಬೆಲೆ ಕೇಳಿ ಅನೇಕ ಮಂದಿ ಕಣ್​ ಕಣ್​ ಬಿಡುತ್ತಿದ್ದಾರೆ. ಬೆರಳಿಗೆ ಧರಿಸಿದ ಉಂಗುರದ ಬೆಲೆಯೇ ಇಷ್ಟಿರುವಾಗ ಇಬ್ಬರು ಮದುವೆಯಾದರೆ ಇನ್ನೆಷ್ಟು ಖರ್ಚು ಮಾಡಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅಂದಹಾಗೆ, ರೊನಾಲ್ಡೊ ಮತ್ತು ಜಾರ್ಜಿನಾ ಸುಮಾರು 9 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ ಸಂಬಂಧವನ್ನು 2017 ರಲ್ಲಿ ಎಲ್ಲರ ಮುಂದೆ ತೆರೆದಿಟ್ಟರು. ಅಂದರೆ, ಅಧಿಕೃತವಾಗಿ ಬಹಿರಂಗಪಡಿಸಿದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡು ಶೀಘ್ರದಲ್ಲೇ ವೈವಾಹಿಕ ಜೀವನ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ. ಅವರಿಬ್ಬರು ಮೊದಲು 2015 ರಲ್ಲಿ ಸ್ಪೇನ್‌ನಲ್ಲಿ ಭೇಟಿಯಾದರು. ಆ ಸಮಯದಲ್ಲಿ ಜಾರ್ಜಿನಾ ಮ್ಯಾಡ್ರಿಡ್‌ನ ಗುಸ್ಸಿ ಚಿಲ್ಲರೆ ಅಂಗಡಿಯಲ್ಲಿ ಮಾರಾಟ ಸಹಾಯಕಳಾಗಿ ಕೆಲಸ ಮಾಡುತ್ತಿದ್ದರು. ಕ್ರಮೇಣ, ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು.

ಗಮನಾರ್ಹ ಸಂಗತಿ ಏನೆಂದರೆ, ರೊನಾಲ್ಡೊ ಮತ್ತು ಜಾರ್ಜಿನಾಗೆ ಈಗಾಗಲೇ ಐವರು ಮಕ್ಕಳಿದ್ದಾರೆ. ಕ್ರಿಸ್ಟಿಯಾನೋ ಜೂನಿಯರ್​, ಅವಳಿ ಇವಾ ಮತ್ತು ಮೇಟಿಯೊ, ಅಲಾನಾ ಮತ್ತು ಬೆಲ್​ ಹೆಸರಿನ ಮಕ್ಕಳಿದ್ದಾರೆ. ಏಂಜೆಲ್​ ಹೆಸರಿನ ಮತ್ತೊಂದು ಮಗು ಬೆಲ್ಲಾ ಜೊತೆ ಹುಟ್ಟುವಾಗ ಸಾವಿಗೀಡಾಯಿತು.

ಕ್ರಿಸ್ಟಿಯಾನೋ ಜೂನಿಯರ್​ 2010ರಲ್ಲಿ ಜನಿಸಿದರು. ಈಗ 15 ವರ್ಷ ವಯಸ್ಸು. ಬಾಲ್ಯದಿಂದಲೂ ಕ್ರಸ್ಟಿಯಾನೋ ಜೂನಿಯರ್ ಆಗಾಗ ಕಾಣಿಸಿಕೊಳ್ಳುತ್ತಿದ್ದಾನೆ. ಈತನ ತಾಯಿ ಯಾರೆಂಬುದು ಇಂದಿಗೂ ರಹಸ್ಯವಾಗೇ ಇದೆ. ರೊನಾಲ್ಡೋ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಅವಳಿ ಮಕ್ಕಳಾದ ಇವಾ ಮಾರಿಯಾ ಡಾಸ್ ಸ್ಯಾಂಟೋಸ್ ಮತ್ತು ಮಾಟಿಯೊ ರೊನಾಲ್ಡೊ 2017, ಜೂನ್ 8ರಂದು ಬಾಡಿಗೆ ತಾಯ್ತಾನದ ಮೂಲಕ ಅಮೆರಿಕದಲ್ಲಿ ಜನಿಸಿದರು. ಈಗ ಇಬ್ಬರಿಗೂ ಎಂಟು ವರ್ಷ ವಯಸ್ಸು. ನಿಯಮಿತವಾಗಿ ತಮ್ಮ ಒಡಹುಟ್ಟಿದವರೊಂದಿಗೆ ಹಾಸ್ಯಭರಿತ ವಿಡಿಯೋ ಕ್ಲಿಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಲಾನಾ ಮಾರ್ಟಿನಾ 2017, ನವೆಂಬರ್ 12ರಂದು ಜನಿಸಿದಳು. ಆಕೆಗೆ ಈ ವರ್ಷ ಎಂಟು ವರ್ಷ ತುಂಬುತ್ತದೆ. ಅಲಾನಾ ಜನಿಸಿದ ಸ್ವಲ್ಪ ಸಮಯದ ನಂತರ ಜಾರ್ಜಿನಾ ಅವರು ಸಾರ್ವಜನಿಕರಿಗೆ ಆಕೆಯನ್ನು ಪರಿಚಯಿಸಿದರು. ಆಕೆಯ ಹುಟ್ಟುಹಬ್ಬದ ಆಚರಣೆಗಳಿಂದ ಹಿಡಿದು ಶಾಲಾ ಕ್ಷಣಗಳವರೆಗೆ ಆಕೆಯ ಬೆಳವಣಿಗೆಯ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಬೆಲ್ಲಾ ಎಸ್ಮೆರಾಲ್ಡಾ 2022 ಏಪ್ರಿಲ್ 18 ರಂದು ಜನಿಸಿದಳು. ಈಗ ಆಕೆಗೆ ಮೂರು ವರ್ಷ. ಬೆಲ್ಲಾ ತನ್ನ ಅವಳಿ ಸಹೋದರ ಏಂಜೆಲ್‌ನ ಸಾವಿನ ನಷ್ಟದ ನಂತರ, ಹುಟ್ಟಿದಾಗಿನಿಂದ ಆಕೆ ಇಡೀ ಕುಟುಂಬದ ಹೃದಯಭಾಗವಾಗಿದ್ದಾಳೆ. (ಏಜೆನ್ಸೀಸ್​)