ಅಬುಧಾಬಿ: ವೇಗಿಗಳ ಭರ್ಜರಿ ನಿರ್ವಹಣೆಯ ಬಲದಿಂದ ಐರ್ಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೂರೇ ದಿನಗಳಲ್ಲಿ 6 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್ ಮಾನ್ಯತೆ ಪಡೆದ 6 ವರ್ಷಗಳಲ್ಲಿ ಸತತ 7 ಪಂದ್ಯಗಳಲ್ಲಿ ಸೋತ ಬಳಿಕ ಕೊನೆಗೂ ಚೊಚ್ಚಲ ಗೆಲುವಿನ ಸಂಭ್ರಮ ಕಂಡಿದೆ.
ಶುಕ್ರವಾರ ಅಫ್ಘಾನಿಸ್ತಾನ ತಂಡದ 2ನೇ ಇನಿಂಗ್ಸ್ಅನ್ನು 218 ರನ್ಗಳಿಗೆ ನಿಯಂತ್ರಿಸಿದ ಐರ್ಲೆಂಡ್, 111 ರನ್ ಗುರಿ ಪಡೆಯಿತು. ನಾಯಕ ಆಂಡಿ ಬಲ್ಬಿರ್ನಿ (58*) ಅರ್ಧಶತಕದಾಸರೆಯಲ್ಲಿ ಐರ್ಲೆಂಡ್ 31.3 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಇದರೊಂದಿಗೆ ಟೆಸ್ಟ್ ಮಾನ್ಯತೆ ಹೊಂದಿರುವ ಎಲ್ಲ 12 ತಂಡಗಳೂ ಗೆಲುವಿನ ರುಚಿ ಕಂಡಂತಾಗಿದೆ.
ಐರ್ಲೆಂಡ್ ತಾನಾಡಿದ 8ನೇ ಟೆಸ್ಟ್ನಲ್ಲಿ ಗೆಲುವಿನ ಖಾತೆ ತೆರೆದಿದ್ದು, ಇದು 4ನೇ ಅತಿವೇಗದ ಸಾಧನೆ ಎನಿಸಿದೆ. ಆಸ್ಟ್ರೆಲಿಯಾ ಮೊಟ್ಟಮೊದಲ ಟೆಸ್ಟ್ನಲ್ಲೇ ಗೆದ್ದಿದ್ದರೆ, ಇಂಗ್ಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ 2ನೇ ಟೆಸ್ಟ್ನಲ್ಲಿ ಗೆದ್ದಿದ್ದವು. ವೆಸ್ಟ್ ಇಂಡೀಸ್ ತನ್ನ 6ನೇ ಟೆಸ್ಟ್ನಲ್ಲಿ ಗೆದ್ದಿತ್ತು. ಭಾರತ ತಂಡ ಮೊದಲ ಟೆಸ್ಟ್ ಗೆಲುವಿಗೆ 25ನೇ ಟೆಸ್ಟ್ ಪಂದ್ಯದವರೆಗೆ ಕಾದಿತ್ತು. ನ್ಯೂಜಿಲೆಂಡ್ ಮೊದಲ ಗೆಲುವಿಗಾಗಿ ಸರ್ವಾಧಿಕ 45ನೇ ಟೆಸ್ಟ್ವರೆಗೆ ಕಾದಿತ್ತು.
ಅಫ್ಘಾನಿಸ್ತಾನ: 155 ಮತ್ತು 218, ಐರ್ಲೆಂಡ್: 263 ಮತ್ತು 4 ವಿಕೆಟ್ಗೆ 111.