ಬೆಂಗಳೂರು: ಐಪಿಎಲ್ ಯಾವಾಗಲೂ ಹೊಸ ಹೊಸ ತಾರೆಯರ ಉದಯ ಸ್ಥಾನ. ಈ ಸಲವೂ ಐಪಿಎಲ್ನಲ್ಲಿ ಹೊಸ ತಾರೆಯೊಂದು ಉದಯಿಸಿದೆ. ಇದು ಈಗಾಗಲೆ ಟೂರ್ನಿಯಲ್ಲಿ ಆಡುತ್ತಿರುವ ಎಲ್ಲ ಆಟಗಾರರ ಗಮನಸೆಳೆದಿದೆ ಮತ್ತು ತಂಡಬೇಧವಿಲ್ಲದೆ ಎಲ್ಲರ ಮನಗೆದ್ದಿದೆ. ಅದುವೇ ರೋಬಾಟಿಕ್ ಕ್ಯಾಮರಾ ಡಾಗ್. ಟೂರ್ನಿಯ ನೇರಪ್ರಸಾರ ವಾಹಿನಿಗೆ ಮೈದಾನದಲ್ಲಿ ಆಟಗಾರರ ಚಲನೆಯ ಚಿತ್ರಣವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸೆರೆ ಹಿಡಿಯುವಲ್ಲಿ ನೆರವಾಗುತ್ತಿರುವ ಈ ರೋಬಾಟ್, ಶ್ವಾನದಂತೆಯೇ 4 ಕಾಲುಗಳಲ್ಲಿ ಚಲಿಸುವ ವಿಶೇಷತೆ ಮತ್ತು ತನ್ನ ತುಂಟತನಗಳಿಂದ ಎಲ್ಲರನ್ನು ಆಕರ್ಷಿಸುತ್ತಿದೆ.
ಈ ರೋಬಾಟಿಕ್ ಡಾಗ್ ನಡೆದಾಡಬಲ್ಲುದು. ಓಡಬಲ್ಲುದು ಮತ್ತು ಹಸ್ತಲಾವ ನೀಡಿ ಶುಭಾಶಯ ತಿಳಿಸಬಲ್ಲುದು. ಸಾಕು ಪ್ರಾಣಿಯಂತೆ ಆತ್ಮೀಯತೆಯಿಂದ ವರ್ತಿಸುವುದು. ಜತೆಗೆ ಮೈದಾನದೆಲ್ಲೆಡೆ ಆಟಗಾರರ ಚಲನೆ ಮತ್ತು ಆಟಕ್ಕೆ ಅಡ್ಡಿಯಾಗದಂತೆ ಓಡಾಡುತ್ತ ಅಪೂರ್ವವಾದ ದೃಶ್ಯಗಳನ್ನು ಸೆರೆಹಿಡಿಯಲ್ಲುದು. ಏಪ್ರಿಲ್ 13ರಂದು ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದೊಂದಿಗೆ ಇದು ಐಪಿಎಲ್ಗೆ ಪದಾರ್ಪಣೆ ಮಾಡಿತ್ತು. ನ್ಯೂಜಿಲೆಂಡ್ ಮೂಲದ ವೀಕ್ಷಕವಿವರಣೆಕಾರ ಡ್ಯಾನಿ ಮೋರಿಸನ್ ಇದನ್ನು ಐಪಿಎಲ್ಗೆ ಪರಿಚಯಿಸಿದ್ದರು.
ಈಗಾಗಲೆ ಟೂರ್ನಿಯ ಅವಿಭಾಜ್ಯ ಅಂಗದಂತೆ ಪಂದ್ಯಗಳ ವೇಳೆ ಕಾಣಿಸಿಕೊಂಡು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ.
ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಸಹಿತ ಬಹುತೇಕ ಎಲ್ಲ ಸ್ಟಾರ್ ಆಟಗಾರರೂ ಈ ರೋಬಾಟಿಕ್ ಕ್ಯಾಮರಾದ ಶ್ವಾನದಂಥ ಚಲನೆ, ವರ್ತನೆಗಳಿಗೆ ಫಿದಾ ಆಗಿದ್ದಾರೆ. ಧೋನಿ ಅಭ್ಯಾಸದ ವೇಳೆ ಇದರೊಂದಿಗೆ ತುಂಟಾಟವಾಡುತ್ತ ನೋಡುಗರನ್ನೂ ರಂಜಿಸಿದ್ದಾರೆ.
ರೋಬೋ ಡಾಗ್ ಅನ್ನು ಅಮೆರಿಕದ ಮ್ಯಾಸಚೂಸೆಟ್ಸ್ ಮೂಲದ ರೋಬಾಟಿಕ್ಸ್ ಕಂಪನಿ ಬೋಸ್ಟನ್ ಡೈನಾಮಿಕ್ಸ್ ಮೊದಲಿಗೆ ವಿನ್ಯಾಸಗೊಳಿಸಿತ್ತು. ಪ್ರಮುಖವಾಗಿ ಮಾನವರಿಗೆ ಅಪಾಯಕಾರಿ ಎನಿಸಿದ ಪ್ರದೇಶಗಳಿಗೆ ಹೋಗಿ ಪರಿಶೀಲನೆ ನಡೆಸಲು ಮಿಲಿಟರಿಗೆ ನೆರವಾಗುವುದು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಇದನ್ನು ರೂಪಿಸಲಾಗಿತ್ತು.
ಚಂಪಕ್ ಎಂದು ನಾಮಕರಣ
ರೋಬಾಟಿಕ್ ಕ್ಯಾಮರಾ ಡಾಗ್ ಈಗಾಗಲೆ ಐಪಿಎಲ್ಗೆ ಹೊಸ ಸದಸ್ಯನಾಗಿ ಸೇರ್ಪಡೆಯಾಗಿರುವ ನಡುವೆ ಅದಕ್ಕೊಂದು ವಿಶೇಷವಾದ ಹೆಸರಿಡಲು ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ರೋಬಾಟಿಕ್ ಡಾಗ್ಗೆ ಅತ್ಯುತ್ತಮವಾದ ಹೆಸರನ್ನು ಸೂಚಿಸಿ ಎಂದು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಕೇಳಿಕೊಂಡಿತ್ತು. ಅದರನ್ವಯ ಮುಂಬೈ-ಸಿಎಸ್ಕೆ ನಡುವಿನ ಪಂದ್ಯದ ವೇಳೆ "ಚಂಪಕ್' ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆ.