ಹ್ಯಾಂಡ್‌ಶೇಕ್ ವಿವಾದ: ಟಾರ್ಚರ್ ತಡೆಯದೇ ಆಸಿಸ್ ಮಾಧ್ಯಮಗಳ ಬಳಿ ಅಳಲು ತೋಡಿಕೊಂಡ ಹೆಡ್ ಪತ್ನಿ ಜೆಸ್ಸಿಕಾ! Virat Kohli
- ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ಹ್ಯಾಂಡ್‌ಶೇಕ್ ವಿವಾದ
- ಮೈದಾನದಲ್ಲಿ ಹೆಡ್ ತೋರಿದ ನಡವಳಿಕೆಗೆ ಕೊಹ್ಲಿ ತೀವ್ರ ಅಸಮಾಧಾನ
- ಪಂದ್ಯ ಮುಗಿದ ಬಳಿಕ ಹೆಡ್‌ಗೆ ಹ್ಯಾಂಡ್‌ಶೇಕ್ ನೀಡದ ವಿರಾಟ್ ಕೊಹ್ಲಿ
- ಹೆಡ್ ಮಾತ್ರವಲ್ಲದೆ ಪತ್ನಿ ಜೆಸ್ಸಿಕಾ ವಿರುದ್ಧವೂ ಟ್ರೋಲ್ ಮಾಡಿದ ಕೊಹ್ಲಿ ಫ್ಯಾನ್ಸ್
Virat Kohli : ಕಳೆದ ಶುಕ್ರವಾರ (ಮೇ 22) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಐಪಿಎಲ್ ಪಂದ್ಯ ಕೇವಲ ಔಪಚಾರಿಕ ಎನಿಸಿದರೂ, ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ವೈಯಕ್ತಿಕ ಸಮರದಿಂದಾಗಿ ಹೈ-ವೋಲ್ಟೇಜ್ ಡ್ರಾಮಾವಾಗಿ ಮಾರ್ಪಟ್ಟಿತು! ಈ ಪಂದ್ಯ ಮುಗಿದ ಬಳಿಕ ಹೆಡ್ ನೀಡಿದ ಹ್ಯಾಂಡ್‌ಶೇಕ್ ಅನ್ನು ಕೊಹ್ಲಿ ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹೊತ್ತಿಸಿತು. ಮೈದಾನದಲ್ಲಿ ಹೆಡ್ ತೋರಿದ ನಡವಳಿಕೆಗೆ ಕೊಹ್ಲಿ ತೀವ್ರ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿತ್ತು ಆದರೆ, ಈ ಜಿದ್ದಾಜಿದ್ದಿ ಅಷ್ಟಕ್ಕೇ ನಿಲ್ಲದೆ, ಆಕ್ರೋಶಗೊಂಡ ಕೊಹ್ಲಿ ಅಭಿಮಾನಿಗಳು ಟ್ರಾವಿಸ್ ಹೆಡ್ ಪತ್ನಿ ಜೆಸ್ಸಿಕಾ ಅವರನ್ನೂ ಈ ವಿವಾದದೊಳಗೆ ಎಳೆದುತಂದು ಟ್ರೋಲ್ ಮಾಡುತ್ತಿರುವುದು ಈಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಟಗಾರರು ಮೈದಾನದಲ್ಲಿ ತೋರುವ ಪ್ರದರ್ಶನ ಅಥವಾ ವರ್ತನೆಗಳಿಗೆ ಅವರ ಕುಟುಂಬದವರು ಅದರಲ್ಲೂ ಮುಖ್ಯವಾಗಿ ಪತ್ನಿಯರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ನಿರ್ಣಾಯಕ ಕ್ಯಾಚ್ ಪಡೆದಿದ್ದ ಟ್ರಾವಿಸ್ ಹೆಡ್ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಒಂದು ವರ್ಗ ತೀವ್ರ ಆಕ್ರೋಶ ಹೊರಹಾಕಿತ್ತು. ಆಗಲೂ ಹೆಡ್ ಪತ್ನಿ ಜೆಸ್ಸಿಕಾ ಇಂತಹದೇ ಕಹಿ ಅನುಭವವನ್ನು ಎದುರಿಸಬೇಕಾಗಿ ಬಂದಿತ್ತು. ಇದೀಗ ಐಪಿಎಲ್ 2026ರ ಕೊಹ್ಲಿ-ಹೆಡ್ ನಡುವಿನ ವಿವಾದದ ಬಳಿಕವೂ ಜೆಸ್ಸಿಕಾ ಮತ್ತೊಮ್ಮೆ ಅದೇ ರೀತಿಯ ಆನ್‌ಲೈನ್ ದಾಳಿಗೆ ಗುರಿಯಾಗಿದ್ದಾರೆ.
ಈ ಕುರಿತು ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ 'ದಿ ಅಡ್ವರ್ಟೈಸರ್' ಜೊತೆಗೆ ಮಾತನಾಡಿರುವ ಜೆಸ್ಸಿಕಾ, ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿಶ್ವಕಪ್ ಮುಗಿದ ನಂತರ ನಡೆದಿದ್ದ ನಿಂದನೆಗಳೇ ಈಗ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತಿದೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ನೆಗೆಟಿವ್ ಕಮೆಂಟ್‌ಗಳಿಂದ ತುಂಬಿಹೋಗಿದ್ದವು. ಸದ್ಯಕ್ಕೆ ನಾವು ಚೆನ್ನಾಗಿಯೇ ಇದ್ದೇವೆ ಆದರೆ, ಟ್ರೋಲರ್‌ಗಳು ಈಗ ನನ್ನ ಸ್ನೇಹಿತರು ಮತ್ತು ಕುಟುಂಬದವರನ್ನು ಗುರಿಯಾಗಿಸಿಕೊಂಡು ಆಟ್ಯಾಕ್ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರೀಡೆಯಲ್ಲಿ ಅಭಿಮಾನಿಗಳ ಭಾವನೆಗಳನ್ನು ಗೌರವಿಸುತ್ತಲೇ, ಇಂತಹ ಕೆಟ್ಟ ಟ್ರೆಂಡ್ಗೆ ಬ್ರೇಕ್ ಬೀಳಬೇಕಾದ ಅಗತ್ಯತೆಯನ್ನು ಜೆಸ್ಸಿಕಾ ಒತ್ತಿಹೇಳಿದ್ದಾರೆ. ಪ್ರಸ್ತುತ ಎಲ್ಲಾ ಕ್ರೀಡೆಗಳಲ್ಲೂ ಮಾನಸಿಕ ಆರೋಗ್ಯ, ಪರಸ್ಪರ ಗೌರವ ಮತ್ತು ನಾವು ಮಾತನಾಡುವ ರೀತಿಯ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದೆ. ಕ್ರೀಡೆಯಲ್ಲಿ ಆವೇಗ ಮತ್ತು ಆವೇಶ ಸಹಜ, ಆದರೆ ಆಟದ ಹಿಂದೆ ನೈಜ ವ್ಯಕ್ತಿಗಳು ಮತ್ತು ಅವರ ಕುಟುಂಬಗಳು ಇರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಈ ಘಟನೆಯಾದರೂ ಮುಂದಿನ ದಿನಗಳಲ್ಲಿ ಪರಸ್ಪರ ಕಾಳಜಿ ಮತ್ತು ದಯೆಯಿಂದ ವರ್ತಿಸಲು ಪ್ರೇರೇಪಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ಜೆಸ್ಸಿಕಾ ಹೇಳಿದ್ದಾರೆ.
ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಇರ್ಫಾನ್ ಮಾತು
ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಇಬ್ಬರ ನಡುವೆ ಮೈದಾನದಲ್ಲಿ ಸಾಕಷ್ಟು ಮಾತಿನ ಚಕಮಕಿ ನಡೆದಿತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮೈದಾನದಲ್ಲಿ ನಡೆದ ಈ ಜಿದ್ದಾಜಿದ್ದಿನಿಂದಾಗಿಯೇ ಪಂದ್ಯದ ಮುಕ್ತಾಯದ ನಂತರ ಕೊಹ್ಲಿ ಹಸ್ತಲಾಘವ ಮಾಡಲು ನಿರಾಕರಿಸಿದರು ಎಂದು ತಿಳಿಸಿರುವ ಅವರು, ಈ ಘಟನೆಯನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು, ಆ ಸಮಯದಲ್ಲಿ ನಾನು ಕಾಮೆಂಟರಿ ಬಾಕ್ಸ್‌ನಲ್ಲಿದ್ದೆ. ವಿರಾಟ್ ಕೊಹ್ಲಿ ಕೂಡ ಆಸ್ಟ್ರೇಲಿಯನ್ನರ ಶೈಲಿಯಲ್ಲೇ ಕ್ರಿಕೆಟ್ ಆಡಲು ಇಷ್ಟಪಡುತ್ತಾರೆ. ಸ್ವಲ್ಪ ಲೇವಡಿ, ತೀವ್ರ ಆಕ್ರಮಣಶೀಲತೆ ಮತ್ತು ಮೈದಾನದಲ್ಲಿ ಎದುರಾಳಿಯನ್ನು ಕೆಣಕುವುದು ಅವರಿಗೆ ಇಷ್ಟ. ಪಂದ್ಯದ ವೇಳೆ ಕೊಹ್ಲಿ, ಟ್ರಾವಿಸ್ ಹೆಡ್‌ಗೆ 'ನೀನು ಇಂಪ್ಯಾಕ್ಟ್ ಪ್ಲೇಯರ್ ಅಲ್ಲ, ಬಂದು ಬೌಲಿಂಗ್ ಮಾಡು' ಎಂದು ಸವಾಲು ಹಾಕುತ್ತಿದ್ದರು. ಸಾಮಾನ್ಯವಾಗಿ ಹೆಡ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ಬ್ಯಾಟಿಂಗ್ ಮುಗಿಸಿ ಹೊರಹೋಗುತ್ತಾರೆ. ಹೀಗಾಗಿ ಕೊಹ್ಲಿ ಅವರನ್ನು ಬೌಲಿಂಗ್ ಮಾಡಲು ಕರೆಯುತ್ತಾ ಮಾತಿನ ಚಕಮಕಿ ನಡೆಸಿದರು. ಆದರೆ, ಪಂದ್ಯದ ನಂತರ ನಡೆದ ಘಟನೆಯ (ಹಸ್ತಲಾಘವ ನಿರಾಕರಣೆ) ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಮೈದಾನದಲ್ಲಿ ಆಕ್ರಮಣಶೀಲತೆ ಮತ್ತು ಲೇವಡಿಗಳು ಸಹಜವಾಗಿ ನಡೆಯುತ್ತವೆ ಎಂದು ಇರ್ಫಾನ್ ಪಠಾಣ್ ವಿವರಿಸಿದ್ದಾರೆ.
ಐಪಿಎಲ್ 2026ರ ಲೀಗ್ ಹಂತದಲ್ಲಿ ಈ ಇಬ್ಬರು ಆಟಗಾರರ ನಡುವಿನ ವೈಯಕ್ತಿಕ ಸಮರ ಇಂಟರ್ನೆಟ್‌ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ರೋಚಕ ವಿಷಯವೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ಎರಡೂ ತಂಡಗಳು ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ. ಹೀಗಾಗಿ ಮುಂಬರುವ ಪ್ಲೇ-ಆಫ್ ಪಂದ್ಯಗಳಲ್ಲಿ ಈ ಎರಡೂ ಬಲಿಷ್ಠ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದ್ದು, ಕೊಹ್ಲಿ ಮತ್ತು ಹೆಡ್ ನಡುವಿನ ಮುಂದಿನ ಹಣಾಹಣಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ, (ಏಜೆನ್ಸೀಸ್).