ಐಪಿಎಲ್​ ಬೆನ್ನಲ್ಲೇ ರಿಯಾನ್​ ಪರಾಗ್​ಗೆ ಏನಾಯ್ತು? ಆಸ್ಪತ್ರೆ ಬೆಡ್​ ಮೇಲೆ ರಾಜಸ್ಥಾನ ರಾಯಲ್ಸ್​ ನಾಯಕ! Riyan Parag  
ಐಪಿಎಲ್

ಐಪಿಎಲ್​ ಬೆನ್ನಲ್ಲೇ ರಿಯಾನ್​ ಪರಾಗ್​ಗೆ ಏನಾಯ್ತು? ಆಸ್ಪತ್ರೆ ಬೆಡ್​ ಮೇಲೆ ರಾಜಸ್ಥಾನ ರಾಯಲ್ಸ್​ ನಾಯಕ! Riyan Parag

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್​ಗೆ ಶಸ್ತ್ರಚಿಕಿತ್ಸೆ
  • ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಾಡುತ್ತಿದ್ದ ಭುಜದ ನೋವಿನ ಸಮಸ್ಯೆಗೆ ಕೊನೆಗೂ ಸರ್ಜರಿ
  • ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ತಮ್ಮದೊಂದು ಫೋಟೋವನ್ನು ಹಂಚಿಕೊಂಡ ರಿಯಾನ್​ ಪರಾಗ್​
  • ಎಲ್ಲರೂ ವಿಚಾರಿಸುತ್ತಿರುವುದರಿಂದ ಖುದ್ದಾಗಿ ನಾನೇ ಈ ವಿಷಯವನ್ನು ತಿಳಿಸುತ್ತಿದ್ದೇನೆಂದು ರಾಜಸ್ಥಾನ ನಾಯಕ
Riyan Parag : ಟೀಮ್​ ಇಂಡಿಯಾ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿರುವ ರಿಯಾನ್ ಪರಾಗ್ ಅವರ ಭುಜದ ಶಸ್ತ್ರಚಿಕಿತ್ಸೆ (Shoulder surgery) ಯಶಸ್ವಿಯಾಗಿ ನೆರವೇರಿದೆ.
ಕಳೆದ ಎರಡು ವರ್ಷಗಳಿಂದ ತಮಗೆ ನಿರಂತರವಾಗಿ ಕಾಡುತ್ತಿದ್ದ ಭುಜದ ನೋವಿನ ಸಮಸ್ಯೆಗೆ ಕೊನೆಗೂ ಸರ್ಜರಿ ಮಾಡಿಸಿಕೊಂಡಿರುವುದಾಗಿ ರಿಯಾನ್ ಪರಾಗ್ ಅವರೇ ಸ್ವತಃ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ, ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ತಮ್ಮದೊಂದು ಫೋಟೋವನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ರಿಯಾನ್ ಪರಾಗ್‌ ಅವರಿಗೆ ಈ ಭುಜದ ನೋವಿನ ಸಮಸ್ಯೆ ನಿನ್ನೆ ಮೊನ್ನೆಯದಲ್ಲ, 2024ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ದಿನದಿಂದಲೂ ನಿರಂತರವಾಗಿ ಕಾಡುತ್ತಲೇ ಇತ್ತು. ಆದರೆ, ಈ ತೀವ್ರವಾದ ನೋವಿನ ನಡುವೆಯೂ ಎಲ್ಲವನ್ನು ಸಹಿಸಿಕೊಂಡು ತಂಡಕ್ಕೆ ಲಭ್ಯವಿರಲು ಸದಾ ಪ್ರಯತ್ನಿಸುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ ಈ ಗಾಯದ ಸಮಸ್ಯೆಯು ತಮ್ಮ ಕ್ರಿಕೆಟ್ ವೃತ್ತಿಜೀವನದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ ಬೀರಿದೆ ಎಂದು ರಿಯಾನ್ ಪರಾಗ್ ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ಈ ನೋವಿನ ಜರ್ನಿಯ ಬಗ್ಗೆ ಮತ್ತಷ್ಟು ಹಂಚಿಕೊಂಡಿರುವ ಪರಾಗ್​, ಗಾಯದ ಸಮಸ್ಯೆಯಿಂದಾಗಿ ಕೆಲವು ದಿನಗಳು ಸಂತೋಷದಿಂದ ಕೂಡಿದ್ದರೆ, ಇನ್ನು ಕೆಲವು ದಿನಗಳು ತೀವ್ರ ನಿರಾಶೆಯನ್ನು ಉಂಟುಮಾಡುತ್ತಿದ್ದವು ಎಂದು ತಿಳಿಸಿದ್ದಾರೆ. ಕೆಲವೊಮ್ಮೆ ಕ್ರೀಡಾಂಗಣಕ್ಕೆ ಇಳಿದು ಒಂದು ಸಂಪೂರ್ಣ ಪಂದ್ಯವನ್ನು ಆಡಿ ಮುಗಿಸುವುದೇ ತಮಗೆ ಬೆಟ್ಟದಂತಹ ದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು ಎಂದು ಪರಾಗ್ ನೆನೆದಿದ್ದಾರೆ. ಆದರೆ, ಈ ಎಲ್ಲಾ ಕಷ್ಟಗಳು ಮತ್ತು ಹಿನ್ನಡೆಗಳು ಕೊನೆಗೂ ತಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಮತ್ತಷ್ಟು ಬಲಿಷ್ಠನನ್ನಾಗಿ ರೂಪಿಸಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊನೆಗೂ ನನ್ನ ಭುಜದ ಸಮಸ್ಯೆಗೆ ಮುಕ್ತಿ ಸಿಕ್ಕಿತು. ಎಲ್ಲರೂ ವಿಚಾರಿಸುತ್ತಿರುವುದರಿಂದ ಖುದ್ದಾಗಿ ನಾನೇ ಈ ವಿಷಯವನ್ನು ತಿಳಿಸುತ್ತಿದ್ದೇನೆ. ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ನೋವು ಕಳೆದ ಎರಡು ವರ್ಷಗಳಲ್ಲಿ ನಾನೆಂದೂ ಊಹಿಸದ ರೀತಿಯಲ್ಲಿ ನನ್ನನ್ನು ಪರೀಕ್ಷಿಸಿದೆ. ನಾನು ಒಳ್ಳೆಯ ದಿನಗಳನ್ನು ನೋಡಿದ್ದೇನೆ ಹಾಗೂ ನಿರಾಶಾದಾಯಕ ದಿನಗಳನ್ನು ಎದುರಿಸಿದ್ದೇನೆ ಹಾಗೂ ಪಂದ್ಯವನ್ನು ಮುಗಿಸುವುದೇ ಕಷ್ಟ ಎನಿಸುವಂತಹ ದಿನಗಳನ್ನೂ ಕಳೆದಿದ್ದೇನೆ ಎಂದು ರಿಯಾನ್ ಪರಾಗ್ ಹೇಳಿದ್ದಾರೆ. ಮುಂದುವರಿದು, ಈಗ ತಮ್ಮ ಮುಂದೆ ಚೇತರಿಕೆ, ಪುನಶ್ಚೇತನ ಮತ್ತು ತಾಳ್ಮೆಯ ಹೊಸ ಸವಾಲುಗಳಿದ್ದು, ಶೀಘ್ರದಲ್ಲೇ ಮತ್ತಷ್ಟು ಬಲಿಷ್ಠವಾಗಿ ಕ್ರಿಕೆಟ್ ಮೈದಾನಕ್ಕೆ ಮರಳುವುದಾಗಿ ಪರಾಗ್​ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಪರಾಗ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.
ಇನ್ನುಳಿದಂತೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ ಸೀಸನ್‌ನಲ್ಲಿ ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅತ್ಯಂತ ಅದ್ಭುತವಾಗಿ ಮುನ್ನಡೆಸಿದ್ದರು. ಇದೇ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಅವರು, ತಮ್ಮ ಮೊದಲ ಪ್ರಯತ್ನದಲ್ಲೇ ತಂಡವನ್ನು ಪ್ಲೇಆಫ್ಸ್ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ್ ತಂಡ ಸೋಲನ್ನು ಅನುಭವಿಸುವ ಮೂಲಕ ಅತ್ಯಂತ ಕಡಿಮೆ ಅಂತರದಲ್ಲಿ ಫೈನಲ್ ತಲುಪುವ ಅವಕಾಶವನ್ನು ಕೈಚೆಲ್ಲಿತ್ತು, (ಏಜೆನ್ಸೀಸ್​).