ಗುಜರಾತ್​ ಟೈಟನ್ಸ್​ ವಿರುದ್ಧದ ಭರ್ಜರಿ ಗೆಲುವಿನ ಹಿಂದಿದ್ದ ಮಾಸ್ಟರ್​ ಪ್ಲ್ಯಾನ್​​ ಬಿಚ್ಚಿಟ್ಟ ನಾಯಕ ರಜತ್​ ಪಾಟೀದಾರ್​! Rajat Patidar  
ಐಪಿಎಲ್

ಗುಜರಾತ್​ ಟೈಟನ್ಸ್​ ವಿರುದ್ಧದ ಭರ್ಜರಿ ಗೆಲುವಿನ ಹಿಂದಿದ್ದ ಮಾಸ್ಟರ್​ ಪ್ಲ್ಯಾನ್​​ ಬಿಚ್ಚಿಟ್ಟ ನಾಯಕ ರಜತ್​ ಪಾಟೀದಾರ್​! Rajat Patidar

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ
  • ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಬೆಂಗಳೂರು ತಂಡ ಫೈನಲ್​ಗೆ ಲಗ್ಗೆ
  • ಗುಜರಾತ್ ವಿರುದ್ಧ ಗೆದ್ದು ಫೈನಲ್​ ತಲುಪಿದ್ದಕ್ಕೆ ಸಂತೋಷವಾಗಿದೆ ಎಂದ ಆರ್​ಸಿಬಿ ನಾಯಕ ಪಾಟೀದಾರ್​
Rajat Patidar : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ. ನಿನ್ನೆ (ಮೇ 26) ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ರಜತ್​ ಪಾಟೀದಾರ್​, ಗುಜರಾತ್ ವಿರುದ್ಧ ಗೆದ್ದಿದ್ದಕ್ಕೆ ಸಂತೋಷವಾಗಿದೆ ಮತ್ತು ಸ್ಪಷ್ಟ ಯೋಜನೆಗಳೊಂದಿಗೆ ಫೈನಲ್ ತಲುಪಿದ್ದೇವೆ ಎಂದು ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರ್‌ಸಿಬಿ ಪರ ನಾಯಕನ ಆಟ ಪ್ರದರ್ಶಿಸಿದ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಬ್ಬರದ 93 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ (25 ಎಸೆತಗಳಲ್ಲಿ 43 ರನ್, 5 ಬೌಂಡರಿ, 1 ಸಿಕ್ಸರ್) ಮತ್ತು ಕೃಣಾಲ್ ಪಾಂಡ್ಯ (28 ಎಸೆತಗಳಲ್ಲಿ 43 ರನ್, 5 ಬೌಂಡರಿ, 2 ಸಿಕ್ಸರ್) ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ಟೈಟನ್ಸ್ ತಂಡದ ಬೌಲರ್‌ಗಳಲ್ಲಿ ಕಗಿಸೊ ರಬಾಡ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಉರುಳಿಸಿದರು.
255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ (68 ರನ್​, 43 ಎಸೆತ, 8 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ತೆವಾಟಿಯಾ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ದಾಖಲಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಜೇಕಬ್​ ಡಫಿ 3 ವಿಕೆಟ್ ಕಸಿದು ಎದುರಾಳಿಗಳಿಗೆ ಆಘಾತ ನೀಡಿದರು. ಇವರಿಗೆ ಸೂಕ್ತ ಬೆಂಬಲ ನೀಡಿದ ಹಿರಿಯ ವೇಗಿ ಭುವನೇಶ್ವರ್ ಕುಮಾರ್, ರಸಿಖ್ ಸಲಾಮ್ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಜೋಶ್ ಹ್ಯಾಜಲ್‌ವುಡ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಭರ್ಜರಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ತಂಡ ಕ್ವಾಲಿಫೈಯರ್-1 ಪಂದ್ಯದಲ್ಲಿ 92 ರನ್‌ಗಳ ಬೃಹತ್ ಜಯ ಸಾಧಿಸಿತು.
ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ತಮ್ಮ ತಂಡ ಫೈನಲ್‌ಗೆ ಪ್ರವೇಶಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಗುಜರಾತ್‌ ತಂಡದಲ್ಲಿರುವ ಅಗ್ರ-3 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರೆ ನಾವು ಪಂದ್ಯವನ್ನು ಗೆಲ್ಲಬಹುದು ಎಂದು ನಮಗೆ ಮೊದಲೇ ತಿಳಿದಿತ್ತು. ಹೀಗಾಗಿ, ನಾವು ಸರಿಯಾದ ಯೋಜನೆಯೊಂದಿಗೆ ಕಣಕ್ಕೆ ಇಳಿದೆವು ಮತ್ತು ಅಂತಿಮವಾಗಿ ಗೆಲುವು ಕೂಡ ಸಾಧಿಸಿದೆವು ಎಂದು ಪಾಟೀದಾರ್​ ಹೇಳಿದರು.
ಈ ಪಂದ್ಯ ನಮಗೆ ಅತ್ಯದ್ಭುತವಾಗಿ ಮೂಡಿಬಂದಿದೆ. ನಮ್ಮ ಬ್ಯಾಟರ್‌ಗಳು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು ಮತ್ತು ಪ್ರತಿಯೊಬ್ಬ ಬ್ಯಾಟರ್ ಕೂಡ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದ ನಮಗೆ ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ಒದಗಿಬಂತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಗುಜರಾತ್ ಬೌಲರ್‌ಗಳ ವಿರುದ್ಧ ಪ್ರತಿದಾಳಿ ನಡೆಸಲು ನಮ್ಮ ಬಳಿ ಯಾವುದೇ ಪೂರ್ವನಿರ್ಧರಿತ ನಿರ್ದಿಷ್ಟ ಯೋಜನೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಎದುರಾಳಿ ತಂಡದ ಯಾವುದೇ ಬೌಲರ್ ಎದುರಾದರೂ ಆಕ್ರಮಣಕಾರಿ ಆಟ ಆಡಲು ನಾವು ಸಿದ್ಧರಾಗಿದ್ದೆವು ಮತ್ತು ಪಂದ್ಯಕ್ಕೂ ಮುನ್ನ ನಡೆದ ತಂಡದ ಸಭೆಯಲ್ಲೇ ಈ ಕುರಿತು ಅತ್ಯಂತ ಸ್ಪಷ್ಟವಾಗಿ ಚರ್ಚಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಕ್ವಾಲಿಫೈಯರ್-1ರಂತಹ ದೊಡ್ಡ ಪಂದ್ಯದಲ್ಲಿ ತಂಡ ತೋರಿದ ಅದ್ಭುತ ಪ್ರದರ್ಶನ ಹಾಗೂ ಪೂರ್ಣ ಹಿಡಿತದ ಬಗ್ಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ಫೋಟಕ ಇನ್ನಿಂಗ್ಸ್ ಕುರಿತು ಮಾತನಾಡಿದ ಅವರು, "ನನ್ನ ಬ್ಯಾಟಿಂಗ್ ಶೈಲಿಯೇ ಹೀಗೆ, ನಾನು ಕ್ರೀಸ್‌ಗೆ ಹೋದ ತಕ್ಷಣ ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರಿಯಲು ಕನಿಷ್ಠ 8 ರಿಂದ 10 ಎಸೆತಗಳನ್ನು ತೆಗೆದುಕೊಳ್ಳುತ್ತೇನೆ. ಇದು ನನಗೆ ವಿಕೆಟ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮತ್ತು ಮುಂದೆ ಹೇಗೆ ಆಡಬೇಕು ಎಂಬ ಸ್ಪಷ್ಟ ಲೆಕ್ಕಾಚಾರವನ್ನು ನೀಡುತ್ತದೆ ಎಂದು ವಿವರಿಸಿದ್ದಾರೆ.
ಪಿಚ್‌ನ ವರ್ತನೆಯ ಬಗ್ಗೆ ತಮಗೆ ಯಾವುದೇ ಆತಂಕವಿರಲಿಲ್ಲ ಎಂದ ಪಾಟೀದಾರ್, ತಾವು ಯಾವಾಗಲೂ ಬೌಲರ್‌ಗಳ ಮೇಲೆ ಒತ್ತಡ ಹೇರಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಇದ್ದಿದ್ದರಿಂದ ಫ್ರಂಟ್ ಫುಟ್‌ನಲ್ಲಿ ಸಿಕ್ಸರ್‌ಗಳನ್ನು ಬಾರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ, ನಮ್ಮ ಬೌಲರ್‌ಗಳು ತಮ್ಮ ಯೋಜನೆಗಳನ್ನು ಅತ್ಯದ್ಭುತವಾಗಿ ಮೈದಾನದಲ್ಲಿ ಕಾರ್ಯಗತಗೊಳಿಸಿದರು. ಟೂರ್ನಿಯಲ್ಲಿ ಗುಜರಾತ್ ತಂಡ ಇದುವರೆಗೆ ಆಡಿರುವ ಶೈಲಿಯನ್ನು ಗಮನಿಸಿ, ಪವರ್ ಪ್ಲೇನಲ್ಲೇ ಅವರ ಟಾಪ್-3 ಬ್ಯಾಟರ್‌ಗಳನ್ನು ಔಟ್ ಮಾಡುವುದು ನಮ್ಮ ಮುಖ್ಯ ಗುರಿಯಾಗಿತ್ತು, ಅದರಂತೆಯೇ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದು ಖುಷಿ ನೀಡಿದೆ ಎಂದಿದ್ದಾರೆ.
ಇನ್ನಿಂಗ್ಸ್ ವೇಳೆ ರೋಮಾರಿಯೋ ಶೆಫರ್ಡ್ ಅವರನ್ನು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಮೈದಾನಕ್ಕಿಳಿಸಿದ ತಂತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಾಯಕ, ಒಂದು ವೇಳೆ ಫೈನಲ್ ಪಂದ್ಯದಲ್ಲಿ ರೋಮಾರಿಯೋ ಅವರ ಕೈಯಲ್ಲಿ ಬೌಲಿಂಗ್ ಮಾಡಿಸಬೇಕಾಗಿ ಬಂದರೆ, ಅವರು ಮಿಡಲ್ ಓವರ್‌ಗಳಲ್ಲಿ ಹೇಗೆ ಬೌಲ್ ಮಾಡಬಲ್ಲರು ಎಂಬುದನ್ನು ಮುಂಚಿತವಾಗಿಯೇ ಪರೀಕ್ಷಿಸಲು ಈ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿದೆವು ಎಂದು ಸ್ಪಷ್ಟಪಡಿಸಿದ್ದಾರೆ. ಕ್ವಾಲಿಫೈಯರ್-1 ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಬೀಗಿರುವ ಆರ್‌ಸಿಬಿ, ಈಗ ನೇರವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದು, ನಾವು ಸದ್ಯ ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ ಎಂದು ಪಾಟಿದಾರ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ, (ಏಜೆನ್ಸೀಸ್​).