ಕೊಹ್ಲಿ ಅಲ್ಲವೇ ಅಲ್ಲ... ರಜತ್​ ಪಾಟೀದಾರ್​ ಪ್ರಕಾರ ತಂಡದ ಈ ಮಹಾನ್ ಗೆಲುವಿಗೆ ಈ ಆಟಗಾರರೇ ಕಾರಣವಂತೆ! Rajat Patidar  
ಐಪಿಎಲ್

ಕೊಹ್ಲಿ ಅಲ್ಲವೇ ಅಲ್ಲ... ರಜತ್​ ಪಾಟೀದಾರ್​ ಪ್ರಕಾರ ತಂಡದ ಈ ಮಹಾನ್ ಗೆಲುವಿಗೆ ಈ ಆಟಗಾರರೇ ಕಾರಣವಂತೆ! Rajat Patidar

ಪ್ರಮುಖ ಮುಖ್ಯಾಂಶಗಳು

  • ಸುಮಾರು 2 ತಿಂಗಳ ಕಾಲ ಭರ್ಜರಿ ಮನರಂಜನೆ ನೀಡಿದ ಐಪಿಎಲ್​ ಎಂಬ ಮಹಾ ಉತ್ಸವಕ್ಕೆ ನಿನ್ನೆವಿದ್ಯುಕ್ತ ತೆರೆ
  • ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸತತ 2ನೇ ಬಾರಿ ಟ್ರೋಫಿ ಗೆದ್ದ ಆರ್​ಸಿಬಿ
  • ತಮ್ಮ ನಾಯಕತ್ವದಲ್ಲಿ ಆರ್​ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆದ್ದಿದ್ದಕ್ಕೆ ಸಂತಸ ಹಂಚಿಕೊಂಡ ನಾಯಕ ರಜತ್ ಪಾಟೀದಾರ್
  • ಆರ್‌ಸಿಬಿ ತಂಡದ ನಾಯಕನಾಗಿ ಐಪಿಎಲ್ ಟ್ರೋಫಿ ಗೆಲ್ಲುತ್ತೇನೆಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ರಜತ್​
Rajat Patidar : ಸುಮಾರು 2 ತಿಂಗಳ ಕಾಲ ಭರ್ಜರಿ ಮನರಂಜನೆ ನೀಡಿದ ಇಂಡಿಯನ್​ ಪ್ರೀಮಿಯರ್​ ಲೀಗ್​ ( IPL ) ಎಂಬ ಮಹಾ ಉತ್ಸವಕ್ಕೆ ನಿನ್ನೆ (ಮೇ 31) ವಿದ್ಯುಕ್ತ ತೆರೆಬಿದ್ದಿದೆ. ಪ್ರಸ್ತುತ ನಡೆದ 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ, ಸತತ ಎರಡನೇ ಬಾರಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅದರಲ್ಲೂ ತಮ್ಮ ನಾಯಕತ್ವದಲ್ಲಿ ಆರ್​ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆದ್ದಿದ್ದಕ್ಕೆ ನಾಯಕ ರಜತ್ ಪಾಟೀದಾರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ಐತಿಹಾಸಿಕ ಗೆಲುವಿನ ಬಳಿಕ ಭಾವುಕರಾಗಿ ಮಾತನಾಡಿದ ರಜತ್​ ಪಾಟೀದಾರ್​, ಆರ್‌ಸಿಬಿ ತಂಡದ ನಾಯಕನಾಗಿ ಐಪಿಎಲ್ ಟ್ರೋಫಿ ಗೆಲ್ಲುತ್ತೇನೆಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಇದೆಲ್ಲವೂ ಹಣೆಬರಹದ ಆಟವಷ್ಟೇ ಎಂದು ಹೇಳಿದರು. ಅಹಮದಾಬಾದ್‌ಗೆ ಬಂದಾಗ ಕಳೆದ ಸೀಸನ್‌ನ ಗೆಲುವಿನ ನೆನಪುಗಳು ಮರುಕಳಿಸಿದವು ಎಂದು ನೆನೆದ ಪಾಟೀದಾರ್, ಆದರೆ ತಾವು ಆ ನೆನಪುಗಳಲ್ಲೇ ಮುಳುಗದೆ ಪ್ರಸ್ತುತ ಪಂದ್ಯದ ಮೇಲಷ್ಟೇ ಸಂಪೂರ್ಣ ಗಮನ ಹರಿಸಿದೆವು ಮತ್ತು ಅದೇ ನಮಗೆ ಮತ್ತೊಮ್ಮೆ ಗೆಲುವು ತಂದುಕೊಟ್ಟಿತು ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ತಿಳಿಸಿದರು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹಿಂದೆ ಸ್ಪಷ್ಟ ತಂತ್ರವಿತ್ತು ಎಂದ ಅವರು, ಪವರ್ ಪ್ಲೇನಲ್ಲೇ ಗುಜರಾತ್ ಟೈಟನ್ಸ್ ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ನಮ್ಮ ಪ್ರಮುಖ ಯೋಜನೆಯಾಗಿತ್ತು, ಇದರಿಂದ ರನ್ ಬೆನ್ನಟ್ಟುವುದು ಸುಲಭವಾಗುತ್ತದೆ ಎಂದು ಭಾವಿಸಿದ್ದೆವು ಎಂದು ತಿಳಿಸಿದರು. ಅಲ್ಲದೆ, ನಮ್ಮ ಬೌಲರ್‌ಗಳು ಈ ಪಂದ್ಯದಲ್ಲಿ ಮಾತ್ರವಲ್ಲದೆ ಇಡೀ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಶ್ಲಾಘಿಸಿದ ಪಾಟೀದಾರ್, ತಂಡದ ಈ ಮಹಾನ್ ಗೆಲುವಿನಲ್ಲಿ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್, ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಮತ್ತು ರೊಮಾರಿಯೋ ಶೆಫರ್ಡ್ ಸೇರಿದಂತೆ ಪ್ರತಿಯೊಬ್ಬ ಬೌಲರ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
2022ರಲ್ಲಿ ಆರ್‌ಸಿಬಿ ಪರ ಪದಾರ್ಪಣೆ ಮಾಡಿದ್ದ ರಜತ್ ಪಾಟೀದಾರ್, ತಾವು ಎಂದಾದರೂ ಒಂದು ದಿನ ಈ ತಂಡವನ್ನು ಮುನ್ನಡೆಸಿ ಸತತ ಎರಡು ಬಾರಿ ಟ್ರೋಫಿ ಗೆದ್ದುಕೊಡುತ್ತೇನೆ ಎಂದು ಊಹಿಸಿಯೂ ಇರಲಿಲ್ಲ ಎಂದು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆರ್‌ಸಿಬಿ ನಾಯಕನಾಗಿ ಟ್ರೋಫಿ ಗೆಲ್ಲುವ ಕನಸನ್ನು ಕೂಡ ನಾನು ಕಂಡಿರಲಿಲ್ಲ, ಇದೆಲ್ಲವೂ ವಿಧಿಯ ಆಟದಂತೆ ಅನಿಸುತ್ತಿದೆ ಮತ್ತು ಈ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಕಳೆದ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಬೇಕೆಂಬ ಒತ್ತಡ ತುಂಬಾ ಇತ್ತು, ಆದರೆ ಈ ಬಾರಿ ನಾವು ಇಡೀ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದ್ದೇವೆ. ತಂಡದಲ್ಲಿ ಪ್ರತಿಯೊಬ್ಬರೂ ಉತ್ತಮ ಮೂಡ್‌ನಲ್ಲಿದ್ದರು ಹಾಗೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕಿಳಿದಿದ್ದೆವು ಎಂದು ಪಾಟೀದಾರ್ ತಿಳಿಸಿದರು.
ತಮ್ಮ ಬ್ಯಾಟಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ (ಡಿಕೆ) ಅವರಂತಹ ಹಿರಿಯ ಆಟಗಾರರ ಸಲಹೆಗಳು ತಮಗೆ ತುಂಬಾ ಸಹಕಾರಿಯಾದವು ಎಂದು ರಜತ್ ಪಾಟೀದಾರ್ ಬಹಿರಂಗಪಡಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ನನ್ನ ಸಿದ್ಧತೆಗಳು ತುಂಬಾ ಚೆನ್ನಾಗಿದ್ದವು, ವೇಗದ ಬೌಲರ್‌ಗಳ ವಿರುದ್ಧ ಇನ್ನಷ್ಟು ಉತ್ತಮವಾಗಿ ಆಡಲು ನಾನು ಯಾವ ರೀತಿಯ ಶಾಟ್‌ಗಳನ್ನು ಕರಗತ ಮಾಡಿಕೊಳ್ಳಬೇಕು ಎಂಬುದನ್ನು ವಿಶ್ಲೇಷಿಸಿದ್ದೆ. ಟೂರ್ನಿಯುದ್ದಕ್ಕೂ ಡಿಕೆ ಮತ್ತು ಕೊಹ್ಲಿ ಭಾಯ್ ಸೇರಿದಂತೆ ಹಲವು ಆಟಗಾರರಿಂದ ಅಮೂಲ್ಯವಾದ ಸಲಹೆಗಳನ್ನು ಪಡೆದುಕೊಂಡೆ, ಇವೆಲ್ಲವೂ ನನಗೆ ತುಂಬಾ ಸಹಾಯ ಮಾಡಿದವು ಎಂದ ಪಾಟೀದಾರ್, ಕೊಹ್ಲಿ ಅವರು ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಯಾವಾಗಲೂ ತಂಡದ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಶ್ಲಾಘಿಸಿದರು. ಅದರಲ್ಲೂ ವಿಶೇಷವಾಗಿ ಹೊಸ ಆಟಗಾರರು ಮಾತನಾಡಲು ಹಿಂಜರಿಯುವಾಗ, ಕೊಹ್ಲಿ ಅವರೇ ಖುದ್ದಾಗಿ ಹೋಗಿ ಮಾತನಾಡಿ ಅವರಲ್ಲಿ ಧೈರ್ಯ ತುಂಬುತ್ತಾರೆ ಮತ್ತು ಅವರ ಇಂತಹ ನಾಯಕತ್ವದ ಗುಣಗಳು ನಿಜಕ್ಕೂ ಅದ್ಭುತ ಎಂದು ಅವರು ಕೊಂಡಾಡಿದ್ದಾರೆ.
ಕೊನೆಯದಾಗಿ, ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ ನಾಯಕ ರಜತ್ ಪಾಟೀದಾರ್, ತಂಡ ಎಲ್ಲೇ ಆಡಿದರೂ ಅಭಿಮಾನಿಗಳು ಅಲ್ಲಿಗೆ ಬಂದು ಬೆಂಬಲ ನೀಡಿದ್ದನ್ನು ನೆನಪಿಸಿಕೊಂಡರು. ನಾವು ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅದು ನಮ್ಮ ತವರು ಮೈದಾನದಂತೆಯೇ ಭಾಸವಾಗುತ್ತಿತ್ತು, ಅಭಿಮಾನಿಗಳು ತೋರಿಸಿದ ಪ್ರೀತಿ ಮತ್ತು ಬೆಂಬಲ ನಿಜಕ್ಕೂ ಅದ್ಭುತವಾಗಿದ್ದು, ಈ ಗೆಲುವು ಸಂಪೂರ್ಣವಾಗಿ ಅವರಿಗೆ ಸಮರ್ಪಿತ ಎಂದು ಅವರು ಹೇಳಿದರು. ಇದೇ ವೇಳೆ ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ಪಾಟೀದಾರ್, ಆರ್‌ಸಿಬಿ ಅಭಿಮಾನಿಗಳಿಗೆ ಎಂದಿನ ಅದೇ ಜೋಶ್‌ನಲ್ಲಿ "ಈ ಬಾರಿಯೂ ಕಪ್ ನಮ್ಮದೇ" ಎಂಬ ವಿಶೇಷ ಸಂದೇಶವನ್ನು ರವಾನಿಸಿದರು, (ಏಜೆನ್ಸೀಸ್​).