ಡ್ರೆಸಿಂಗ್ ರೂಮ್ನಲ್ಲಿ ವೇಪ್ ಸೇದಿದ ರಿಯಾನ್ ಪರಾಗ್
- ರಾಜಸ್ಥಾನ್ ರಾಯಲ್ಸ್ ನಾಯಕನಿಗೆ ಸಂಕಷ್ಟ
- ಡ್ರೆಸಿಂಗ್ ರೂಮ್ನಲ್ಲಿ ವೇಪ್ ಸೇದಿದ ರಿಯಾನ್ ಪರಾಗ್
- ಭಾರತದಲ್ಲಿ ನಿಷೇಧವಾಗಿರುವ ಇ-ಸಿಗರೇಟ್
- ಪಂಜಾಬ್ ವಿರುದ್ಧ ರಾಜಸ್ಥಾನ್ಗೆ ಜಯ
ಪಂಜಾಬ್: ನಿನ್ನೆ (ಮಂಗಳವಾರ,ಏ 28) ಪಂಜಾಬ್ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ 19 ನೇ ಸಾಲಿನ ಐಪಿಎಲ್ನ 40 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪಂಜಾಬ್ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.
ಆದರೆ ಇದೇ ಪಂದ್ಯಾವಳಿಯ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸಿಂಗ್ ರೂಮ್ನಲ್ಲಿ ವೇಪ್ (ಇಲೆಕ್ಟ್ರಾನಿಕ್ ಸಿಗರೇಟ್) ಸೇದುತ್ತಿರುವ ದೃಶ್ಯವೊಂದು ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ (Riyan Parag Viral Video) ಸೋಷಿಯಲ್ ಮೀಡಿಯಾನಲ್ಲಿ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.
ವಿಡಿಯೋನಲ್ಲೇನಿದೆ?
ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ರಾಜಸ್ಥಾನ ತಂಡ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಭಾರತದಲ್ಲಿ ಬ್ಯಾನ್ ಮಾಡಲಾಗಿರುವ ವೇಪ್ ಅನ್ನು ಸೇದುತ್ತಾ ಹೊಗೆ ಬಿಡುವುದನ್ನು ನೋಡಬಹುದಾಗಿದೆ.
ಭಾರತದಲ್ಲಿ ಇ-ಸಿಗರೇಟ್ ಮೇಲೆ ನಿರ್ಬಂಧ!
ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಮುಂದೇನು?
ಈ ವರ್ಷದ ಐಪಿಎಲ್ನಲ್ಲಿ ರಾಜಸ್ಥಾನ ತಂಡದ ನಾಯಕನಾಗಿರುವ ರಿಯಾನ್ ಪರಾಗ್ ಹೇಳಿಕೊಳ್ಳುವಂತ ಆಟವನ್ನೇನು ಆಡುತ್ತಿಲ್ಲ. ನಿನ್ನೆ ಪಂಜಾಬ್ ವಿರುದ್ಧ ರಾಜಸ್ಥಾನ ಗೆದಿದ್ದರೂ ತಂಡದ ನಾಯಕನಾಗಿ ಪರಾಗ್ 16 ಎಸೆತಗಳಲ್ಲಿ ಕೇವಲ 29 ರನ್ ಮಾತ್ರ ಗಳಿಸಿದ್ದರು.
ಹಾಗೆಯೇ, ಡ್ರೆಸಿಂಗ್ ರೂಮ್ನಲ್ಲಿ ತಂಬಾಕು ಪದಾರ್ಥಗಳ ಸೇವನೆಯನ್ನು ಕೂಡ ನಿಷೇಧಿಸಲಾಗಿದೆ ಮತ್ತು ಭಾರತದಲ್ಲಿ ಬ್ಯಾನ್ ಮಾಡಲಾಗಿರುವ ವೇಪ್ನ್ನು ಸೇದಿರುವ ಕಾರಣ ಪರಾಗ್ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಬಹುದು.
ರಾಜಸ್ಥಾನ Vs ಪಂಜಾಬ್
ನಿನ್ನೆ (ಏ.28) ಪಂಜಾಬ್ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡದ ಪರವಾಗಿ ಓಪನರ್ ಪ್ರತ್ಸಿಮ್ರನ್ ಸಿಂಗ್ 44 ಎಸೆತಗಳಲ್ಲಿ 59, ಕೂಪರ್ ಕೊನ್ಲಿ 14 ಎಸೆತಗಳಲ್ಲಿ 30, ನಾಯಕ ಶ್ರೇಯಸ್ ಅಯ್ಯರ್ 27 ಎಸೆತಗಲ್ಲಿ 30 ಹಾಗೂ ಮಾರ್ಕಸ್ ಸ್ಟೋಯಿನಿಸ್ 22 ಎಸೆತಗಳಲ್ಲಿ 62 ರನ್ ಗಳಿಸುವ ಮೂಲಕ ನಿಯಮಿತ ಓವರ್ಗಳಲ್ಲಿ 222 ರನ್ ಗಳಿಸಿದರು.
223 ರನ್ ಗುರಿ ಬೆನ್ನತ್ತಿದ್ದ ರಾಯಸ್ಥಾನ್ ತಂಡದ ಪರ ಓಪನರ್ಗಳಾದ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 51 ಹಾಗೂ ವೈಭವ್ ಸೂರ್ಯವಂಶಿ 16 ಎಸೆಗಳಲ್ಲಿ 44 ರನ್ಗಳಿಸುವ ಮೂಲಕ ಉತ್ತಮ ಓಪನಿಂಗ್ ನೀಡಿದರು. ನಂತರ ಡೊನಾವನ್ ಫರೇರಾ 26 ಎಸೆತಗಳಲ್ಲಿ 52 ಹಾಗೂ ಶುಭಂ ದುಬೆ 12 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ 19.2 ಓವರ್ಗಳಲ್ಲಿ ಗುರಿಯನ್ನು ತಲುಪಿದರು. ಈ ಮೂಲಕ ಐಪಿಎಲ್ನಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಅಶ್ವಮೇಧದ ಕುದುರೆಯಂತೆ ಓಡುತ್ತಿದ್ದ ಪಂಜಾಬ್ ಕಿಂಗ್ಸ್ನ ಓಟಕ್ಕೆ ರಾಜಸ್ಥಾನ್ ತಂಡ ಬ್ರೇಕ್ ಹಾಕಿತು, (ಏಜನ್ಸೀಸ್).