IPL Trade News: ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಆಟಗಾರರ ವಿನಿಮಯ ನಡೆಯುವ ಸಾಧ್ಯತೆ ಇದ್ದು, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳ ನಡುವೆ ಅತ್ಯಂತ ಮಹತ್ವದ ಒಪ್ಪಂದವೊಂದು ಏರ್ಪಟ್ಟಿದೆ ಎಂದು ವರದಿಯಾಗಿದೆ. ಎಂಐ ನಾಯಕ ಹಾರ್ದಿಕ್ ಪಾಂಡ್ಯರನ್ನು ಪಂಜಾಬ್ ಕಿಂಗ್ಸ್ಗೆ ಬಿಟ್ಟುಕೊಟ್ಟು, ಅವರ ಬದಲಿಗೆ ಪಂಜಾಬ್ನ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಈ ವಿನಿಮಯ ಒಪ್ಪಂದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಂತಿಮ ಅಧಿಕೃತ ಅನುಮೋದನೆ ನೀಡುವುದು ಮಾತ್ರ ಬಾಕಿ ಇದ್ದು, ಐಪಿಎಲ್ ಮೂಲಗಳ ಪ್ರಕಾರ, ಎರಡೂ ಫ್ರಾಂಚೈಸಿಗಳು ಈಗಾಗಲೇ ಟ್ರೇಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಮುಂಬರುವ ಋತುವಿನಲ್ಲಿ ಈ ಇಬ್ಬರೂ ತಾರೆಯರು ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಅವರೇ ನಾಯಕರಾಗಿ ಮುನ್ನಡೆಸಲಿದ್ದಾರೆ. ಹೀಗಾಗಿ, ಅವರ ನಾಯಕತ್ವದ ಅಡಿಯಲ್ಲಿ ಒಬ್ಬ ಸಾಮಾನ್ಯ ಆಟಗಾರನಾಗಿ ಆಡಲು ಹಾರ್ದಿಕ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪಂಜಾಬ್ ಫ್ರಾಂಚೈಸಿಯು ಹಾರ್ದಿಕ್ ಆಲ್ರೌಂಡರ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಿದಂತಿದೆ.
ತಂಡದ ಮುಖ್ಯ ಆಧಾರಸ್ತಂಭವಾಗಿದ್ದ ಅರ್ಶ್ದೀಪ್ ಸಿಂಗ್ರನ್ನು ಬಿಟ್ಟುಕೊಡಲು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಹೆಡ್ ಕೋಚ್ ಜಂಟಿಯಾಗಿ ತೆಗೆದುಕೊಂಡಿದ್ದಾರೆ. ಅರ್ಶ್ದೀಪ್ ಸುದೀರ್ಘ ಕಾಲದಿಂದ ಪಂಜಾಬ್ ತಂಡದಲ್ಲಿದ್ದು, ಈ ಫ್ರಾಂಚೈಸಿಯ ಮೂಲಕವೇ ದೊಡ್ಡ ಮಟ್ಟಕ್ಕೆ ಬೆಳೆದವರು. ಹೀಗಾಗಿ ಅವರನ್ನು ಬಿಟ್ಟುಕೊಡುವುದು ತಂಡದ ಮಾಲೀಕರಿಗೆ ಸುಲಭದ ನಿರ್ಧಾರವಾಗಿರಲಿಲ್ಲ. ಆದರೂ ತಂಡದ ಭವಿಷ್ಯದ ಯೋಜನೆಗೆ ಬೆಂಬಲವಾಗಿ ನಿಂತ ಮಾಲೀಕರು ಈ ಟ್ರೇಡ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
2024ರ ಐಪಿಎಲ್ ಋತುವಿನಲ್ಲಿ ಮುಂಬೈ ನಾಯಕರಾಗಿದ್ದ ರೋಹಿತ್ ಶರ್ಮಾ ಅವರನ್ನು ಬದಲಾಯಿಸಿ, ಹಾರ್ದಿಕ್ ಪಾಂಡ್ಯರಿಗೆ ಜವಾಬ್ದಾರಿ ನೀಡಲಾಯಿತು. ಆದರೆ, ಹಾರ್ದಿಕ್ ನಾಯಕತ್ವದ ಈ ಸೆಕೆಂಡ್ ಇನಿಂಗ್ಸ್ ಮುಂಬೈಗೆ ಅಂದುಕೊಂಡಷ್ಟು ಯಶಸ್ಸು ನೀಡಲಿಲ್ಲ. ಅವರ ತಂಡವನ್ನು ಮುನ್ನಡೆಸಿದ ಯಾವ ಸೀಸನ್ನಲ್ಲೂ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಕಾರಣಗಳಿಂದಾಗಿ ಮುಂಬೈ ಫ್ರಾಂಚೈಸಿ ಹಾರ್ದಿಕ್ರನ್ನು ಬಿಟ್ಟುಕೊಡಲು ಎಂಐ ಮುಂದಾಗಿದೆ.
ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಮೂಲಕವೇ ತಮ್ಮ ಕ್ರಿಕೆಟ್ ಜೀವನದ ಉನ್ನತ ಹಂತಕ್ಕೇರಿ, ಭಾರತೀಯ ಚುಟುಕು ಕ್ರಿಕೆಟ್ ಮಾದರಿಯ ಪ್ರಮುಖ ವಿಕೆಟ್ ಟೇಕರ್ ಆಗಿ ಬೆಳೆದಿರುವ ಅರ್ಶ್ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗಕ್ಕೆ ಬಹುದೊಡ್ಡ ಬಲ ತುಂಬಲಿದ್ದಾರೆ ಎನ್ನುವುದರಲ್ಲಿ ಎರಡನೆ ಮಾತಿಲ್ಲ.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಕಳೆದ ಋತುವಿನ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿತ್ತಾದರೂ, ದ್ವಿತೀಯಾರ್ಧದಲ್ಲಿ ಉಂಟಾದ ಹಿನ್ನಡೆಯಿಂದಾಗಿ ಪ್ಲೇ-ಆಫ್ನಿಂದ ಹೊರಬಿದ್ದಿತ್ತು. ಇತ್ತೀಚಿನ ದಿನಗಳಲ್ಲಿ ಗಾಯದ ಸಮಸ್ಯೆಯಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವಿದ್ದ ಹಾರ್ದಿಕ್ ಪಾಂಡ್ಯ, ಪಂಜಾಬ್ ತಂಡದ ಆಲ್ರೌಂಡ್ ವಿಭಾಗವನ್ನು ಮತ್ತಷ್ಟು ಬಲಪಡಿಸಲಿದ್ದಾರೆ ಎಂಬ ಭರವಸೆಯಲ್ಲಿ ಫ್ರಾಂಚೈಸಿ ಇದೆ.
ಈ ದೊಡ್ಡ ಮಟ್ಟದ ಟ್ರೇಡಿಂಗ್ ನಡುವೆಯೇ ಬಿಸಿಸಿಐ ಆಟಗಾರರ ರಿಟೇನ್ ಗಡುವನ್ನು ನವೆಂಬರ್ 17ರವರೆಗೆ ವಿಸ್ತರಿಸಿದೆ. ಇದರಿಂದಾಗಿ ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಎರಡೂ ತಂಡಗಳಿಗೆ ಸಾಕಷ್ಟು ಸಮಯ ಸಿಕ್ಕಂತಾಗಿದೆ. ಇದೇ ವೇಳೆ, ಮಿನಿ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಮ್ಮ ವಿದೇಶಿ ಆಟಗಾರ ಮಾರ್ಕಸ್ ಸ್ಟೋಯಿನಿಸ್ ಹಾಗೂ ಯುವ ಬ್ಯಾಟರ್ ನೇಹಾಲ್ ವಧೇರಾ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ(ಏಜೆನ್ಸೀಸ್).