ಲಖನೌ-ಪಂಜಾಬ್ ಪಂದ್ಯದ ವೇಳೆ ಚಿಯರ್‌ಲೀಡರ್ಸ್ ಜತೆ ಕೆಲ ಪ್ರೇಕ್ಷಕರ ಅಸಭ್ಯ ವರ್ತನೆ: ವಿಡಿಯೋ ವೈರಲ್... Cheerleaders
- ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ
- 2026ರ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡ ಶ್ರೇಯಸ್ ಅಯ್ಯರ್ ಪಡೆ
- ನಿನ್ನೆ ಪಂದ್ಯದ ವೇಳೆ ಚಿಯರ್‌ಲೀಡರ್ಸ್ ಜೊತೆ ಗ್ಯಾಲರಿಯಲ್ಲಿದ್ದ ಕೆಲ ಪ್ರೇಕ್ಷಕರಿಂದ ಅಸಭ್ಯ ವರ್ತನೆ
- ಪಂದ್ಯದ ನಡುವೆ ನಡೆದ ಈ ಒಂದು ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ
Cheerleaders : ಉತ್ತರ ಪ್ರದೇಶ ರಾಜಧಾನಿ ಲಖನೌದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ (ಮೇ 23) ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಐಪಿಎಲ್ 2026ರ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ಇದೇ ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಕೆಲ ಪ್ರೇಕ್ಷಕರು ಚಿಯರ್‌ಲೀಡರ್ಸ್ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆಯೂ ನಡೆದಿದೆ.
ಕೆಲ ಪ್ರೇಕ್ಷಕರು ಚಿಯರ್ಸ್ಲೀಡರ್ಸ್ ಕಡೆ ನೋಡಿ ಏನೇನೋ ಕಾಮೆಂಟ್ಗಳನ್ನು ಮಾಡುತ್ತಾ ಅಸಭ್ಯವಾಗಿ ವರ್ತಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಮಹಿಳಾ ಸಿಬ್ಬಂದಿ ಒಳಗೊಂಡ ಪೊಲೀಸ್ ಪಡೆ, ಅಸಭ್ಯವಾಗಿ ವರ್ತಿಸುತ್ತಿದ್ದ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಂದ್ಯದ ಗೆಲುವಿನ ನಡುವೆಯೂ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚಿಯರ್ಸ್ಲೀಡರ್ಗಳನ್ನು ಆ ರೀತಿ ನಡೆಸಿಕೊಳ್ಳಬಾರದು, ಅದು ಅವರ ವೃತ್ತಿ, ಅವರಿಗೂ ಗೌರವ ನೀಡಬೇಕಿದೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಸೋಲನ್ನು ಅನುಭವಿಸಿದ ನಂತರ, ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಈ ಬಾರಿಯ ಐಪಿಎಲ್ 2026ರ ಸೀಸನ್ ತಮ್ಮ ತಂಡಕ್ಕೆ ಅತ್ಯಂತ ಸವಾಲಿನದ್ದಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಪಂದ್ಯದ ಮುಕ್ತಾಯದ ನಂತರ ಸೋಲಿನ ಬಗ್ಗೆ ಮಾತನಾಡಿದ ಅವರು, ಫಲಿತಾಂಶವನ್ನು ಒಪ್ಪಿಕೊಂಡು ಭವಿಷ್ಯದತ್ತ ಗಮನ ಹರಿಸುವುದು ಮತ್ತು ಮುಂದಿನ ದಿನಗಳಲ್ಲಿ ತಂಡವನ್ನು ಬಲಿಷ್ಠವಾಗಿ ಮರುಸಂಘಟಿಸುವುದು ನಮ್ಮ ಮುಂದಿರುವ ಗುರಿ ಎಂದು ಹೇಳಿದ್ದಾರೆ.
ಇದೊಂದು ಕಠಿಣ ಪರಿಸ್ಥಿತಿ, ನಾವು ಈ ಕಹಿ ಸತ್ಯವನ್ನು ನುಂಗಲೇಬೇಕಾಗಿದೆ. ಆದರೆ, ನಮ್ಮ ತಲೆಯನ್ನು ನಾವು ಯಾವಾಗಲೂ ಎತ್ತಿ ಹಿಡಿಯಬೇಕು. ಈ ಸೀಸನ್ ನಮಗೆ ಖಂಡಿತವಾಗಿಯೂ ಕಠಿಣವಾಗಿತ್ತು ಮತ್ತು ಇದರಿಂದ ನಾವು ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ ಎಂದು ನಾಯಕ ಪಂತ್ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದೇ ವೇಳೆ ತಮ್ಮ ತಂಡದ ಮೊತ್ತದ ಬಗ್ಗೆ ಮಾತನಾಡಿದ ಅವರು, ನಾವು ಕ್ರೀಡಾಂಗಣದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನೇ ಕಲೆಹಾಕಿದ್ದೆವು. ಆದರೆ, ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದ ಈ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಚೇಸ್ ಮಾಡುವುದು ಸುಲಭವಾಗುತ್ತದೆ. ಇದೇ ಕಾರಣಕ್ಕೆ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಮಾಡಲು ಬಯಸುತ್ತಾರೆ ಎಂದು ಪಿಚ್ ವರ್ತನೆಯನ್ನು ಪಂತ್ ವಿಶ್ಲೇಷಿಸಿದ್ದಾರೆ.
ಈ ಸೀಸನ್‌ನಲ್ಲಿ ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್ ಮತ್ತು ಪ್ರಿನ್ಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಹಾಗೂ ಗಾಯದಿಂದ ಚೇತರಿಸಿಕೊಂಡು ಬಂದ ಮೊಹ್ಸಿನ್ ಮತ್ತು ಶಮಿ ಭಾಯ್ ಅವರ ಆಟ ತಂಡಕ್ಕೆ ಧನಾತ್ಮಕ ಅಂಶಗಳಾಗಿವೆ ಎಂದು ಪಂತ್ ಅವರು ತಿಳಿಸಿದರು, (ಏಜೆನ್ಸೀಸ್).