ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಬೆನ್ನಲ್ಲೇ ಇಡೀ ಸಿಎಸ್​ಕೆ ತಂಡಕ್ಕೆ ಶಾಕ್​ ಕೊಟ್ಟ ಐಪಿಎಲ್ ಗವರ್ನಿಂಗ್ ಕೌನ್ಸಿಲ್! CSK  
ಐಪಿಎಲ್

ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಬೆನ್ನಲ್ಲೇ ಇಡೀ ಸಿಎಸ್​ಕೆ ತಂಡಕ್ಕೆ ಶಾಕ್​ ಕೊಟ್ಟ ಐಪಿಎಲ್ ಗವರ್ನಿಂಗ್ ಕೌನ್ಸಿಲ್! CSK

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಬಿದ್ದ ಸಿಎಸ್​ಕೆ
  • ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ರುತುರಾಜ್ ಗಾಯಕ್ವಾಡ್ ಪಡೆ
  • ಹೀನಾಯ ಸೋಲಿನ ಬೆನ್ನಲ್ಲೇ ಸಿಎಸ್​ಕೆ ತಂಡಕ್ಕೆ ಬಿಗ್​ ಶಾಕ್​ ನೀಡಿದ ಐಪಿಎಲ್ ಗವರ್ನಿಂಗ್ ಕೌನ್ಸಿಲ್
  • ನಾಯಕ ಮಾತ್ರವಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಒಳಗೊಂಡಂತೆ ಇಡೀ ತಂಡಕ್ಕೆ ದಂಡ ವಿಧಿಸಿದ ಐಪಿಎಲ್​ ಕೌನ್ಸಿಲ್
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 89 ರನ್‌ಗಳ ಹೀನಾಯ ಸೋಲು ಕಂಡು ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮತ್ತೊಂದು ಬಿಗ್ ಶಾಕ್ ನೀಡಿದೆ.
ನಿಗದಿತ ಸಮಯಕ್ಕೆ ಓವರ್‌ಗಳನ್ನು ಮುಗಿಸದ (Slow Over-rate) ಹಿನ್ನೆಲೆಯಲ್ಲಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ ಬರೋಬ್ಬರಿ 24 ಲಕ್ಷ ರೂಪಾಯಿ ಭಾರಿ ದಂಡ ವಿಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಿಎಸ್‌ಕೆ ತಂಡ ಮಾಡಿದ ಎರಡನೇ ತಪ್ಪು ಇದಾದ್ದರಿಂದ, ಐಪಿಎಲ್ ನಿಯಮಾವಳಿಗಳ ಪ್ರಕಾರ ನಾಯಕನಿಗೆ ಮಾತ್ರವಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಒಳಗೊಂಡಂತೆ ಇಡೀ ಪ್ಲೇಯಿಂಗ್ ಇಲೆವೆನ್‌ನ ಎಲ್ಲಾ ಆಟಗಾರರಿಗೂ ತಲಾ 6 ಲಕ್ಷ ರೂ. ಅಥವಾ 25% ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಿ ಕಠಿಣ ಶಿಕ್ಷೆ ನೀಡಲಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ 66ನೇ ಲೀಗ್ ಪಂದ್ಯದಲ್ಲಿ ಸ್ಲೋ ಓವರ್-ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ ಸಿಎಸ್‌ಕೆ ತಂಡ ಪ್ರಸಕ್ತ ಸೀಸನ್‌ನಲ್ಲಿ ಮಾಡಿದ ಎರಡನೇ ತಪ್ಪು ಇದಾಗಿದ್ದರಿಂದ (ಮೊದಲ ತಪ್ಪು 18ನೇ ಪಂದ್ಯದಲ್ಲಿ ನಡೆದಿತ್ತು), ನಾಯಕನಿಗೆ ಭಾರಿ ದಂಡದ ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್‌ನ ಉಳಿದ ಎಲ್ಲಾ ಆಟಗಾರರಿಗೂ ತಲಾ 6 ಲಕ್ಷ ರೂಪಾಯಿ ಅಥವಾ ಅವರ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಗುಜರಾತ್ ಟೈಟಾನ್ಸ್ ನೀಡಿದ್ದ 230 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ತೀವ್ರ ಆಘಾತ ಎದುರಿಸಿತು. ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಪಂದ್ಯದ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಕೇವಲ 17 ಎಸೆತಗಳಲ್ಲಿ 47 ರನ್ ಚಚ್ಚಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರಾದರೂ, ಅವರಿಗೆ ಇತರ ಯಾವುದೇ ಆಟಗಾರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಸಿಎಸ್‌ಕೆ ತಂಡ 89 ರನ್‌ಗಳ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಬೇಕಾಯಿತು.
ಟೂರ್ನಿಯಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮುಂಬರುವ ದಿನಗಳಲ್ಲಿ ಹಲವು ಸವಾಲುಗಳು ಎದುರಾಗಲಿವೆ. ಒಂದೆಡೆ ದಿಗ್ಗಜ ಆಟಗಾರ ಎಂ.ಎಸ್. ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರಿದಿದ್ದರೆ, ಮತ್ತೊಂದೆಡೆ ತಂಡದ ಪ್ರಮುಖ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಂದಿನ ಐಪಿಎಲ್ ಸೀಸನ್‌ಗೂ ಮುನ್ನ ಸಿಎಸ್‌ಕೆ ಫ್ರಾಂಚೈಸಿಯು ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಮತ್ತು ಹೊಸ ಆಟಗಾರರನ್ನು ಖರೀದಿಸಲು ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ, (ಏಜೆನ್ಸೀಸ್​).