ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್
- ಅಬುಧಾಬಿಯಲ್ಲಿ ನಡೆದ ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜು 2026
- ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೋನ್ ಗ್ರೀನ್ ಕೆಕೆಆರ್ ಪಾಲು
- 25.20 ಕೋಟಿ ರೂ.ಗೆ ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಬಿಕರಿ
- ಮಿನಿ ಹರಾಜಿನಲ್ಲಿ 25 ಕೋಟಿ ರೂ. ಗಳಿಸಿದ್ರೂ ಗ್ರೀನ್ಗೆ ಸಿಗೋದು 18 ಕೋಟಿ ಮಾತ್ರ
ಅಬುಧಾಬಿ: ಎಲ್ಲರ ನಿರೀಕ್ಷೆಯಂತೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ( Cameron Green ) ಇಂದು ( ಡಿ.16) ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಕೋಲ್ಕತ ನೈಟ್ ರೈಡರ್ಸ್ (KKR) ತಂಡ ಗ್ರೀನ್ ಅವರನ್ನು 25.20 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಸ್ಟಾರ್ಕ್ ಅವರನ್ನು ಕೂಡ ಮೀರಿಸಿದರು. ಐಪಿಎಲ್ 2024 ಮಿನಿ ಹರಾಜಿನಲ್ಲಿ ಕೆಕೆಆರ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತು.
ಅಂದಹಾಗೆ, ಇಂದು ನಡೆದ ಮಿನಿ ಹರಾಜಿನಲ್ಲಿ 25.20 ಕೋಟಿ ರೂ.ಗೆ ಮಾರಾಟವಾದ ನಂತರವೂ ಕ್ಯಾಮರೂನ್ ಗ್ರೀನ್ ಕೇವಲ 18 ಕೋಟಿ ರೂ. ಮಾತ್ರ ಪಡೆಯಲಿದ್ದಾರೆ. ಹಾಗಾದರೆ, ಉಳಿದ 7.20 ಕೋಟಿ ರೂ. ಏನಾಗುತ್ತದೆ ಅನ್ನೋ ನಿಮ್ಮ ಪ್ರಶ್ನೆ ಉತ್ತರ ಏನೆಂದರೆ, ಉಳಿದ ಹಣ ಬಿಸಿಸಿಐಗೆ ಹೋಗುತ್ತದೆ.
ಕಾರಣ ಏನು?
ಕೆಲವು ವಿದೇಶಿ ಆಟಗಾರರು ಮೆಗಾ ಹರಾಜಿನಲ್ಲಿ ಭಾಗವಹಿಸುತ್ತಿಲ್ಲ. ಬದಲಾಗಿ ತಮ್ಮ ಬುದ್ಧಿವಂತಿಕೆಯಿಂದ ಮಿನಿ ಹರಾಜಿನಲ್ಲಿ ಭಾಗವಹಿಸಿ ಗರಿಷ್ಠ ಮೊತ್ತವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳು ಬಿಸಿಸಿಐಗೆ ದೂರು ನೀಡಿವೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಒಂದು ನಿಯಮವನ್ನು ಜಾರಿಗೆ ತಂದಿದೆ. ಅದೇನೆಂದರೆ, ಮೆಗಾ ಹರಾಜಿನಲ್ಲಿ ನಿಗದಿಯಾಗಿರುವ ಗರಿಷ್ಠ ರಿಟೇನ್ ಮೌಲ್ಯವನ್ನು ಮಾತ್ರ ನೀಡಲಾಗುತ್ತದೆ. ಹೀಗಾಗಿ, ಗ್ರೀನ್ ಅವರಿಗೆ ಕೇವಲ 18 ಕೋಟಿ ರೂ. ಮಾತ್ರ ಸಿಗಲಿದೆ.
ಸಿಎಸ್‌ಕೆ-ಕೆಕೆಆರ್ ನಡುವೆ ತೀವ್ರ ಪೈಪೋಟಿ
ಗ್ರೀನ್ಗಾಗಿ ಮುಂಬೈ ಇಂಡಿಯನ್ಸ್ ತಂಡವು 2 ಕೋಟಿ ರೂಪಾಯಿಗಳಿಂದ ಬಿಡ್ಡಿಂಗ್ ಆರಂಭಿಸಿತು. ತಮಾಷೆಯ ಸಂಗತಿ ಏನೆಂದರೆ, ಮುಂಬೈ ಇಂಡಿಯನ್ಸ್ ತಂಡದ ಪರ್ಸ್‌ನಲ್ಲಿ ಕೇವಲ 2.75 ಕೋಟಿ ರೂಪಾಯಿ ಮಾತ್ರ ಇತ್ತು. ಹೀಗಾಗಿ ಗ್ರೀನ್, ಮುಂಬೈ ಇಂಡಿಯನ್ಸ್ ತೆಕ್ಕೆಯಿಂದ ಜಾರಿದರು. ಬಳಿಕ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡಗಳು ಬಿಡ್ಡಿಂಗ್ ಪೈಪೋಟಿ ನಡೆಸಿದವು. ಈ ಹಂತದಲ್ಲಿ ಈ ಎರಡು ತಂಡಗಳನ್ನು ಬಿಟ್ಟರೆ ಬೇರೆ ಯಾವ ತಂಡವು ಗ್ರೀನ್ ಬಗ್ಗೆ ಆಸಕ್ತಿ ತೊರಲಿಲ್ಲ. 2 ಕೋಟಿಯಿಂದ ತಕ್ಷಣ 7 ಕೋಟಿ ಬಿಡ್ಡಿಂಗ್ ಮೊತ್ತ ಏರಿತು. ಅಲ್ಲದೆ, ಈ ಹರಾಜಿನಲ್ಲಿ 10+ ಕೋಟಿ ಮೊತ್ತ ದಾಟಿದ ಮೊದಲ ಆಟಗಾರ ಎನಿಸಿಕೊಂಡರು. ತಮ್ಮ ಬಳಿ ಇದ್ದ 16 ಕೋಟಿ ರೂ. ಪರ್ಸ್‌ನಲ್ಲಿ 13.40 ಕೋಟಿ ರೂ.ಗಳವರೆಗೆ ಗ್ರೀನ್ಗೆ ನೀಡಲು ಆರ್ಆರ್ ತಂಡ ಸಿದ್ಧವಿತ್ತು. ಆದರೆ, ಬಿಡ್ಡಿಂಗ್ ಮುಂದುವರಿದಿದ್ದರಿಂದ ಆರ್ಆರ್ ಹಿಂದೆ ಸರಿಯಿತು. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13.80 ಕೋಟಿ ರೂ.ಗೆ ಬಿಡ್ಡಿಂಗ್ ಯುದ್ಧಕ್ಕೆ ಪ್ರವೇಶಿಸಿತು. ಇದೇ ವೇಳೆ ಕೆಕೆಆರ್ ಬಿಡ್ಡಿಂಗ್ ಮೊತ್ತವನ್ನು 18 ಕೋಟಿ ರೂ.ಗೆ ಏರಿಸಿತು. ಈ ಹಂತದಲ್ಲಿ ಬಿಡ್ಡಿಂಗ್ ಕೊಂಚ ನಿಧಾನವಾಯಿತು. ಆದರೆ, ಎರಡೂ ತಂಡದಲ್ಲಿ ಯಾವುದೇ ತಂಡ ಹಿಂದೆ ಸರಿಯಲಿಲ್ಲ. ಬಳಿಕ ಸಿಎಸ್‌ಕೆ ಮತ್ತು ಕೆಕೆಆರ್ ಬಿಡ್‌ಗಳು 20 ಕೋಟಿ ದಾಟಿತು. ಬಳಿಕ ಮತ್ತೊಮ್ಮೆ 21.60 ಕೋಟಿ ರೂ.ಗೆ ಏರಿತು. ಅಂತಿಮವಾಗಿ ಗ್ರೀನ್ ಅವರು 25.20 ಕೋಟಿ ರೂ.ಗೆ ಕೆಕೆಆರ್ ತಂಡದ ಪಾಲಾದರು.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು
* ರಿಷಭ್ ಪಂತ್ - 27 ಕೋಟಿ (LSG)
* ಶ್ರೇಯಸ್ ಅಯ್ಯರ್ - 26.75 ಕೋಟಿ (PBKS)
* ಕ್ಯಾಮರೂನ್ ಗ್ರೀನ್ - 25.20 ಕೋಟಿ (KKR)
* ಮಿಚೆಲ್ ಸ್ಟಾರ್ಕ್ - 24.75 ಕೋಟಿ (KKR)
* ವೆಂಕಟೇಶ್ ಅಯ್ಯರ್ - 23.75 ಕೋಟಿ (KKR)
ಅಬುಧಾಬಿಯಲ್ಲಿ ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾದ ಮಿನಿ ಹರಾಜು ಪ್ರಮುಖ ಆಟಗಾರರಿಗೆ ಅನಿರೀಕ್ಷಿತ ಹೊಡೆತ ನೀಡಿತು. ಬಹುತೇಕ ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪೃಥ್ವಿ ಶಾ, ಜ್ಯಾಕ್ ಪ್ರೆಸ್ಸರ್ ಮತ್ತು ಡೆವೊನ್ ಕಾನ್ವೇ ಮಾರಾಟವಾಗದೆ ಉಳಿದರು. ಈ ಮೂವರು ಆಟಗಾರರು ಹರಾಜಿನಲ್ಲಿ ಮೊದಲು ಬಂದರು ಆದರೆ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಮುಂದೆ ಬರಲಿಲ್ಲ. ಇದು ಪೃಥ್ವಿ ಶಾ ಸೇರಿದಂತೆ ಮೂವರು ಆಟಗಾರರನ್ನು ಆಘಾತಗೊಳಿಸಿತು. ನಂತರ ಡೇವಿಡ್ ಮಿಲ್ಲರ್ ಎರಡು ಕೋಟಿ ಬಿಡ್ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದರು. ಮಿಲ್ಲರ್ ಈ ಹಿಂದೆ ಗುಜರಾತ್ ಟೈಟಾನ್ಸ್ ಪರ ಆಡಿದ್ದರು, (ಏಜೆನ್ಸೀಸ್).