ಕ್ರೀಡೆ

ಧೋನಿಗಾಗಿಯೇ IPL ನಿಯಮವನ್ನು ಬದಲಾಯಿಸಲಾಗಿದೆ; ಅನ್​ಕ್ಯಾಪ್ಡ್​ ರೂಲ್​​ ಕುರಿತು ಮಾಜಿ ಆಟಗಾರನ ಹೇಳಿಕೆ ವೈರಲ್

ನವದೆಹಲಿ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ (IPL) ಸಂಬಂಧಿಸಿದ ಕೆಲಸಗಳು ಈಗಾಗಲೇ ಆರಂಭಗೊಂಡಿದ್ದು, ಈ ತಿಂಗಳಾಂತ್ಯದಲ್ಲಿ ಫ್ರಾಂಚೈಸಿಗಳು ರಿಟೇನ್ (Retain)​ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಇದಾದ ಬಳಿಕ ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಗಾ ಹರಾಜು (Mega Auction) ಪ್ರಕ್ರಿಯೆ ಬಳಿಕ ಟೂರ್ನಿಗೆ ಸಂಬಂಧಿಸಿದ ಸಿದ್ಧತೆಗಳು ಮತ್ತಷ್ಟು ಭರದಿಂದ ಸಾಗಲಿದ್ದು, ಟೂರ್ನಿ ಶುರುವಾಗುವುದಕ್ಕೆ ಐದು ತಿಂಗಳು ಬಾಕಿ ಇರುವ ಸಮಯದಲ್ಲೇ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ.

ರಿಟೇನ್​ ವಿಚಾರಕ್ಕೆ ಬರುವುದಾದರೆ ಈ ಬಾರಿ ಫ್ರಾಂಚೈಸಿಗಳು 5+1 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಇದರಲ್ಲಿ ಅನ್​ಕ್ಯಾಪ್ಡ್​ ಪ್ಲೇಯರ್​ ನಿಯಮ ಕೂಡ ಒಳಗೊಂಡಿದೆ. ಅನ್​​ಕ್ಯಾಪ್ಡ್​ ನಿಯಮಕ್ಕೆ ಬರುವುದಾದರೆ ಟೀಮ್​ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಅನ್​ಕ್ಯಾಪ್ಡ್​ ಪ್ಲೇಯರ್ (Uncapped Player)​ ನಿಯಮ ಧೋನಿಗಾಗಿಯೇ ಜಾರಿ ಮಾಡಲಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟೀಮ್​ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್​ ಕೈಫ್ (Mohammed Kaif)​ ಹೇಳಿಕೆಯನ್ನ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಕೈಫ್​, ಧೋನಿಯನ್ನು ಮತ್ತೊಮ್ಮೆ ನೋಡುವ ಅವಕಾಶವನ್ನು ನಾವೆಲ್ಲರೂ ಪಡೆಯಲಿದ್ದೇವೆ. ಅವರು ಫಿಟ್​ ಆಗಿದ್ದು, ಉತ್ತಮವಾಗಿ ಬ್ಯಾಟಿಂಗ್​ ಹಾಗೂ ಕೀಪಿಂಗ್​ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಆಡಲು ಬಯಸುವವರೆಗೂ ನಿಯಮಗಳು ಬದಲಾಗುತ್ತಲೇ ಇರುತ್ತವೆ ಎಂದು ನಾನು ನಂಬುತ್ತೇನೆ. ಆತ ಅಂತಹ ದೊಡ್ಡ ಆಟಗಾರನಾಗಿದ್ದು ಸಿಎಸ್​ಕೆ (CSK) ಪಾಲಿಗೆ ಮ್ಯಾಚ್​ ವಿನ್ನರ್​ ಆಗಿದ್ದಾರೆ.

ನನ್ನ ಪ್ರಕಾರ ಅನ್​ಕ್ಯಾಪ್ಡ್​ ನಿಯಮವನ್ನು ಸರಿಯಾಗಿ ಬದಲಾಯಿಸಲಾಗಿದೆ ಎಂದು ನಾನು ನಂಬುತ್ತೇನೆ. ಧೋನಿಗಾಗಿ ಈ ನಿಯಮ ಬದಲಾಯಿಸಲಾಗಿದೆ ಎಂಬುದು ಎಲ್ಲರಿಗೆ ತಿಳಿದಿದೆ. ಆತ ಆಡಲು ಬಯಸುವವರೆಗೂ ಈ ನಿಯಮವನ್ನು ಬದಲಾಯಿಸಲಾಗುತ್ತಿರುತ್ತದೆ ಎಂದು ಖಾಸಗಿ ಸುದ್ಗಿ ವಾಹಿನಗೆ ನೀಡಿದ ಸಂದರ್ಶನದಲ್ಲಿ ಮಾಜಿ ಆಟಗಾರ ಮೊಹಮ್ಮದ್​ ಕೈಫ್​ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ ನಿಯಮ ಹೇಳುವುದೇನು?

ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದಾಗಿತ್ತು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಈ ನಿಯಮವನ್ನು ಮತ್ತೆ ಜಾರಿಗೊಳಿಸುವಂತೆ ಸಿಎಸ್​ಕೆ ಫ್ರಾಂಚೈಸಿ ಧೋನಿ ಸಲುವಾಗಿ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗುತ್ತ ಬಂದಿದ್ದು, ಹೀಗಾಗಿ ಅವರನ್ನು ಅನ್​ಕ್ಯಾಪ್ಡ್​ ಪ್ಲೇಯರ್ಸ್​​ ಎಂದು ಪರಿಗಣಿಸಲಾಗುತ್ತದೆ.