ಮುಂಬೈ: ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಟಗಾರರ ರಿಟೇನ್ ನಿಯಮಾವಳಿಯನ್ನು ಬಿಸಿಸಿಐ ಮಾಸಾಂತ್ಯದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿ ಪ್ರಕಟಿಸಲು ನವೆಂಬರ್ 15ರವರೆಗೆ ಸಮಯಾವಕಾಶ ಕಲ್ಪಿಸುವ ಸಾಧ್ಯತೆ ಇದ್ದು, ಡಿಸೆಂಬರ್ನಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಕೆಗೂ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.
ಈ ಹಿಂದಿನ ಯೋಜನೆಯ ಅನ್ವಯ ಆಗಸ್ಟ್ ಅಂತ್ಯದಲ್ಲೇ ಆಟಗಾರರ ರಿಟೇನ್ ನಿಯಮಾವಳಿ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಈ ನಿಯಮಾವಳಿ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಗಿದ್ದು, ಇನ್ನೂ ಎರಡು ವಾರ ಬೇಕಾಗಬಹುದು. ಹೀಗಾಗಿ ಸೆಪ್ಟೆಂಬರ್ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ಸಮಯದಲ್ಲೇ ರಿಟೇನ್ ನಿಯಮಾವಳಿ ಪ್ರಕಟವಾಗುವ ಸಾಧ್ಯತೆ ಇದೆ.
ಬಿಸಿಸಿಐ ಪ್ರತಿ ತಂಡಕ್ಕೆ ಗರಿಷ್ಠ 4 ಆಟಗಾರರ ರಿಟೇನ್ಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ 5 ವರ್ಷ ಕಳೆದಿರುವ ಆಟಗಾರರನ್ನು "ಅನ್ಕ್ಯಾಪ್ಡ್' (ಅಂತಾರಾಷ್ಟ್ರೀಯ ಪಂದ್ಯ ಆಡದ ಆಟಗಾರರು) ಎಂದು ಪರಿಗಣಿಸಿ, ಕಡಿಮೆ ಮೊತ್ತಕ್ಕೆ ರಿಟೇನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಇದು ಚೆನ್ನೈ ಸೂಪರ್ಕಿಂಗ್ಸ್ಗೆ ಎಂಎಸ್ ಧೋನಿ ಮತ್ತು ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ಗೆ ಸುನೀಲ್ ನಾರಾಯಣ್ರನ್ನು ರಿಟೇನ್ ಮಾಡಿಕೊಳ್ಳಲು ನೆರವಾಗಲಿದೆ.