ಕ್ರೀಡೆ

ಕದನ ವಿರಾಮದಿಂದ ಐಪಿಎಲ್​ ಪುನರಾರಂಭ ಸುಗಮ? ಇಂದು ಮಹತ್ವದ ಸಭೆ...

ನವದೆಹಲಿ: ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯಿಂದ ಒಂದು ವಾರ ಕಾಲ ಸ್ಥಗಿತಗೊಂಡಿರುವ ಐಪಿಎಲ್​ 18ನೇ ಆವೃತ್ತಿ, ಕದನ ವಿರಾಮದ ಹಿನ್ನೆಲೆಯಲ್ಲಿ ಮುಂದಿನ ವಾರವೇ ಪುನರಾರಂಭಗೊಳ್ಳುವ ಸಾಧ್ಯತೆ ಕಾಣಿಸಿದೆ. ಮುಂದಿನ ಗುರುವಾರ ಅಥವಾ ಶುಕ್ರವಾರವೇ ಟೂರ್ನಿಯ ಬಾಕಿ ಉಳಿದಿರುವ 16-17 ಪಂದ್ಯಗಳು ಧರ್ಮಶಾಲಾ ಹೊರತಾಗಿ "ಪ್ಯಾನ್​ ಇಂಡಿಯಾ'ದಲ್ಲಿ ನಡೆಯಲಿವೆ ಎನ್ನಲಾಗಿದೆ. ಆದರೆ ಐಪಿಎಲ್​ ಪುನರಾರಂಭಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದು ಅಗತ್ಯವೆನಿಸಿದೆ. ಭಾನುವಾರ ಬಿಸಿಸಿಐ ಪದಾಧಿಕಾರಿಗಳು ಮತ್ತು ಐಪಿಎಲ್​ ಆಡಳಿತ ಮಂಡಳಿ ಸದಸ್ಯರ ನಡುವೆ ಮಹತ್ವದ ಸಭೆ ನಡೆಯಲಿದ್ದು, ಮುಂದಿನ ಯೋಜನೆ ಅಂತಿಮವಾಗುವ ನಿರೀಕ್ಷೆ ಇದೆ.

"ಕದನ ವಿರಾಮದ ಬೆನ್ನಲ್ಲೇ ನಾವು ಐಪಿಎಲ್​ ಪುನರಾರಂಭಕ್ಕೆ ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಸಾಧ್ಯವಿದ್ದರೆ ನಾವು ತಕ್ಷಣದಿಂದಲೇ ಪಂದ್ಯಗಳನ್ನು ನಡೆಸಲಿದ್ದೇವೆ. ಅದಕ್ಕೆ ಮುನ್ನ ಪಂದ್ಯಗಳ ದಿನಾಂಕ ಮತ್ತು ಸ್ಥಳಗಳನ್ನು ನಿರ್ಧರಿಸಬೇಕಾಗುತ್ತದೆ. ಫ್ರಾಂಚೈಸಿ ಮಾಲೀಕರು, ಪ್ರಸಾರ ಸಂಸ್ಥೆಯ ಜತೆಗೂ ಚರ್ಚಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಸರ್ಕಾರದ ಅನುಮತಿ ಅಗತ್ಯ' ಎಂದು ಐಪಿಎಲ್​ ಆಯುಕ್ತ ಅರುಣ್​ ಧುಮಾಲ್​ ಶನಿವಾರ ಕದನ ವಿರಾಮ ಘೋಷಣೆಯ ಬಳಿಕ ಹೇಳಿದ್ದಾರೆ.

ಫೈನಲ್​ ಸಹಿತ 4 ಪ್ಲೇಆಫ್​​ ಪಂದ್ಯಗಳಲ್ಲದೆ ಟೂರ್ನಿಯಲ್ಲಿ 12 ಲೀಗ್​ ಪಂದ್ಯಗಳೂ ಬಾಕಿ ಉಳಿದಿವೆ. ಧರ್ಮಶಾಲಾದಲ್ಲಿ ಮೊಟಕುಗೊಂಡ ಪಂಜಾಬ್​-ಡೆಲ್ಲಿ ನಡುವಿನ ಪಂದ್ಯವನ್ನೂ ಬಿಸಿಸಿಐ ಮರುನಿಗದಿಪಡಿಸುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ಈ ಪಂದ್ಯವನ್ನು ಮತ್ತೆ ಆಡಿಸುವ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಬಿಸಿಸಿಐ ಪ್ಲ್ಯಾನ್​​ ಬಿ ಸಿದ್ಧ

ಮೇ ತಿಂಗಳಿನಲ್ಲೇ ಐಪಿಎಲ್​ ಮುಗಿಸಲು ಬಿಸಿಸಿಐ ಪ್ರಮುಖ ಆದ್ಯತೆ ನೀಡಿದೆ. ಇದರನ್ವಯ ದ. ಭಾರತದ 3 ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್​ನಲ್ಲಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್​ ಬಿ ಸಿದ್ಧಪಡಿಸಿತ್ತು. ಜತೆಗೆ ಪೂರ್ವದ ವಿಶಾಖಪಟ್ಟಣ, ಕೋಲ್ಕತದಲ್ಲೂ ಪಂದ್ಯ ನಡೆಸಲು ಯೋಚಿಸಿತ್ತು. ಆದರೆ ಕದನ ವಿರಾಮದ ನಂತರ ಸೋಮವಾರ ಭಾರತ-ಪಾಕ್​ ಮಾತುಕತೆಯಲ್ಲೂ ಶಾಂತಿ ನೆಲೆಸುವ ಲಕ್ಷಣ ಕಂಡರೆ, ಐಪಿಎಲ್​ ಟೂರ್ನಿಯ ಉಳಿದ ಪಂದ್ಯಗಳು ಧರ್ಮಶಾಲಾ ಹೊರತುಪಡಿಸಿ ಇತರ ಪೂರ್ವ ನಿಗದಿತ ನಗರಗಳಲ್ಲೇ ನಡೆಯುವ ಸಾಧ್ಯತೆ ಇದೆ.

ವಿದೇಶಿ ಕ್ರಿಕೆಟಿಗರ ಲಭ್ಯತೆ ಸವಾಲು

ಐಪಿಎಲ್​ ಸ್ಥಗಿತಗೊಂಡ ಬೆನ್ನಲ್ಲೇ ಬಹುತೇಕ ಎಲ್ಲ ವಿದೇಶಿ ಕ್ರಿಕೆಟಿಗರು ತವರಿಗೆ ಮರಳಿದ್ದಾರೆ. ಟೂರ್ನಿಯಲ್ಲಿ 60ಕ್ಕೂ ಅಧಿಕ ವಿದೇಶಿ ಕ್ರಿಕೆಟಿಗರು ಆಡುತ್ತಿದ್ದರು ಮತ್ತು ಲಭ್ಯವಿದ್ದ ಮುಂದಿನ ವಿಮಾನದಲ್ಲೇ ಅವರು ತವರಿಗೆ ನಿರ್ಗಮಿಸಿದ್ದಾರೆ. ಇನ್ನೊಂದು ವಾರದಲ್ಲಿ ಐಪಿಎಲ್​ ಪುನರಾರಂಭಗೊಂಡರೂ ಅಥವಾ ಮುಂಬರುವ ದಿನಗಳಲ್ಲಿ ಟೂರ್ನಿ ನಡೆದರೂ ವಿದೇಶಿ ಕ್ರಿಕೆಟಿಗರ ಲಭ್ಯತೆಯೇ ದೊಡ್ಡ ಸವಾಲು ಎನಿಸಲಿದೆ. ಇನ್ನೊಂದು ವಾರದಲ್ಲಿ ಟೂರ್ನಿ ಪುನರಾರಂಭಗೊಂಡರೂ, ವಿದೇಶಿ ಕ್ರಿಕೆಟಿಗರು ಮರಳುವ ಖಚಿತತೆ ಇರುವುದಿಲ್ಲ. ಯಾಕೆಂದರೆ ಈ ಮೊದಲಿನ ವೇಳಾಪಟ್ಟಿ ಪ್ರಕಾರ ಅವರು ಮೇ 25ರವರೆಗೆ ಮಾತ್ರ ಐಪಿಎಲ್​ಗೆ ಲಭ್ಯರಿದ್ದರು. ಅವರ ಎನ್​ಒಸಿ (ನಿರಾಕ್ಷೇಪಣಾ ಪತ್ರ) ಅವಧಿ ಮುಂದುವರಿಸಲು ಸ್ವದೇಶದ ಕ್ರಿಕೆಟ್​ ಮಂಡಳಿ ಒಪ್ಪುವ ಬಗ್ಗೆಯೂ ಖಚಿತತೆ ಇಲ್ಲ. ಐಪಿಎಲ್​ ಮೇ 25ರ ನಂತರಕ್ಕೆ ವಿಸ್ತರಣೆಗೊಂಡರೆ, ಪ್ರಮುಖವಾಗಿ ಆಸ್ಟ್ರೆಲಿಯಾ-ದ. ಆಫ್ರಿಕಾದ ಪ್ರಮುಖ ಕ್ರಿಕೆಟಿಗರ ಲಭ್ಯತೆ ಅನುಮಾನವೆನಿಸಿದೆ. ಯಾಕೆಂದರೆ ಇವೆರಡು ತಂಡಗಳು ಜೂನ್​ 11ರಿಂದ ಲಾರ್ಡ್ಸ್​ನಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಆಡಲಿವೆ.