ನವದೆಹಲಿ: ನಾಯಕ ಸಂಜು ಸ್ಯಾಮ್ಸನ್ (86 ರನ್, 46 ಎಸೆತ, 8 ಬೌಂಡರಿ, 6 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಹೋರಾಟದ ನಡುವೆಯೂ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್&17ರ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಎದುರು 20 ರನ್ಗಳಿಂದ ಶರಣಾಗಿದೆ. ರಾಜಸ್ಥಾನ ಸತತ 2ನೇ ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಅವಕಾಶ ಕೈಚೆಲ್ಲಿದರೆ, ಡೆಲ್ಲಿ ತಂಡ ಟೂರ್ನಿಯಲ್ಲಿ 6ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಆಸೆ ಜೀವಂತ ಉಳಿಸಿಕೊಂಡಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆತಿಥೇಯ ಡೆಲ್ಲಿ ತಂಡ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ (24ಕ್ಕೆ 3) ಬಿಗಿ ದಾಳಿಯ ನಡುವೆ ಯುವ ಆರಂಭಿಕರಾದ ಜೇಕ್ ಫ್ರೇಸರ್ ಮೆಕ್ಗುರ್ಕ್ (50 ರನ್, 20 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ಅಭಿಷೇಕ್ ಪೊರೆಲ್ (65 ರನ್, 36 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ 8 ವಿಕೆಟ್ಗೆ 221 ರನ್ ಪೇರಿಸಿತು. ಪ್ರತಿಯಾಗಿ ವೇಗಿಗಳಾದ ಖಲೀಲ್ ಅಹ್ಮದ್ (47ಕ್ಕೆ 2), ಮುಕೇಶ್ ಕುಮಾರ್ (30ಕ್ಕೆ 2) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (25ಕ್ಕೆ 2) ದಾಳಿಗೆ ಲಯ ತಪ್ಪಿದ ರಾಯಲ್ಸ್ 8 ವಿಕೆಟ್ಗೆ 201 ರನ್ ಗಳಿಸಲಷ್ಟೇ ಶಕ್ತವಾಯಿತು.
ಸ್ಯಾಮ್ಸನ್ ಹೋರಾಟ ವ್ಯರ್ಥ: ರಾಯಲ್ಸ್ ಚೇಸಿಂಗ್ಗೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಯಶಸ್ವಿ ಜೈಸ್ವಾಲ್ (4) 2ನೇ ಎಸೆತದಲ್ಲಿ ಅಕ್ಷರ್ ಪಟೇಲ್ಗೆ ಕ್ಯಾಚ್ ನೀಡಿ ಖಲೀಲ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು. ಆಗ ಇಂಪ್ಯಾಕ್ಟ್ ಪ್ಲೇಯರ್ ಜೋಸ್ ಬಟ್ಲರ್ (19) ಜತೆಗೂಡಿ 2ನೇ ವಿಕೆಟ್ಗೆ 33 ಎಸೆತಗಳಲ್ಲಿ 63 ರನ್ ಸೇರಿಸುವ ಮೂಲಕ ಸ್ಯಾಮ್ಸನ್ ಚೇತರಿಕೆ ಒದಗಿಸಿದರು. ನಂತರ ರಿಯಾನ್ ಪರಾಗ್ (25) ಜತೆಗೂಡಿ ಬಿರುಸಿನಾಟ ಮುಂದುವರಿಸಿದ ಸ್ಯಾಮ್ಸನ್ ಚೇಸಿಂಗ್ನತ್ತ ತಂಡವನ್ನು ದಿಟ್ಟವಾಗಿ ಮುನ್ನಡೆಸಿದರು. ರಿಯಾನ್ ನಿರ್ಗಮನದ ಬಳಿಕ ಶುಭಂ ದುಬೆ ಜತೆಗೂಡಿ 4ನೇ ವಿಕೆಟ್ಗೆ 29 ಎಸೆತಗಳಲ್ಲಿ 59 ರನ್ ಸೇರಿಸಿದ ಸ್ಯಾಮ್ಸನ್ ಗೆಲುವಿನಿಂದ 60 ರನ್ ದೂರವಿದ್ದಾಗ ಮುಕೇಶ್ ಕುಮಾರ್ ಎಸೆತದಲ್ಲಿ ಔಟಾದರು. ಇದರಿಂದ ಸ್ಯಾಮ್ಸನ್ ಶತಕದಿಂದಲೂ ವಂಚಿತರಾದರು. ಬಳಿಕ ಕುಲದೀಪ್ ಒಂದೇ ಓವರ್ನಲ್ಲಿ 2 ವಿಕೆಟ್ ಕಬಳಿಸಿ ರಾಯಲ್ಸ್ಗೆ ಹೊಡೆತ ನೀಡಿದರು. ಸ್ಲಾಗ್ ಓವರ್ಗಳಲ್ಲಿ ಡೆಲ್ಲಿ ಬಿಗಿ ದಾಳಿ ಎದುರು 32 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡ ರಾಯಲ್ಸ್ ಗೆಲುವಿನ ದಡ ಸೇರಲಾಗಲಿಲ್ಲ.