ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಬ್ರಾಂಡ್ ಮೌಲ್ಯ 10 ಬಿಲಿಯನ್ ಡಾಲರ್ ಮೈಲಿಗಲ್ಲು ದಾಟುವುದರೊಂದಿಗೆ "ಡೆಕಾಕಾರ್ನ್' ಮಾನ್ಯತೆ ಪಡೆದುಕೊಂಡಿದೆ. 2023ರಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ ಶೇ. 28 ಪ್ರಗತಿ ಕಂಡಿದ್ದು, 89,263 ಕೋಟಿ ರೂಪಾಯಿ (10.7 ಬಿಲಿಯನ್ ಡಾಲರ್) ಬ್ರಾಂಡ್ ಮೌಲ್ಯ ಪಡೆದುಕೊಂಡಿದೆ.
ಬ್ರಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ "ಬ್ರಾಂಡ್ ಫಿನಾನ್ಸ್ ರಿವೀಲ್ಸ್' ಸಿದ್ಧಪಡಿಸಿರುವ ವರದಿಯ ಪ್ರಕಾರ, ಐಪಿಎಲ್ ಬ್ರಾಂಡ್ ಮೌಲ್ಯ 2008ರ ಆರಂಭಿಕ ವರ್ಷದಿಂದ ಈಗ ಶೇ. 433ರಷ್ಟು ಪ್ರಗತಿ ಕಂಡಿದೆ. 2022ರಲ್ಲಿ ಐಪಿಎಲ್ 70,070 ಕೋಟಿ ರೂ. (8.4 ಬಿಲಿಯನ್ ಡಾಲರ್) ಬ್ರಾಂಡ್ ಮೌಲ್ಯ ಹೊಂದಿತ್ತು. ನಂತರದಲ್ಲಿ 48,390 ಕೋಟಿ ರೂ. ಮೊತ್ತದ ಪ್ರಸಾರ ಹಕ್ಕು ಒಪ್ಪಂದ ಪಡೆದುಕೊಂಡಿರುವುದರಿಂದ, ಎರಡು ಹೊಸ ತಂಡಗಳ ಸೇರ್ಪಡೆಯಿಂದ ಮತ್ತು ಕೋವಿಡ್-19 ಭೀತಿ ಕಳೆದು ಕ್ರೀಡಾಂಗಣಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಪ್ರವೇಶ ಪಡೆದಿರುವುದರಿಂದ ಐಪಿಎಲ್ ಬ್ರಾಂಡ್ ಮೌಲ್ಯ ಭಾರಿ ಏರಿಕೆ ಕಂಡಿದೆ.
ಏನಿದು ಡೆಕಾಕಾರ್ನ್?
10 ಶತಕೋಟಿ ಡಾಲರ್ಗಿಂತ ಹೆಚ್ಚಿನ ಬ್ರಾಂಡ್ ಮೌಲ್ಯ ಹೊಂದಿರುವ ಖಾಸಗಿ ಕಂಪನಿಯನ್ನು ಡೆಕಾಕಾರ್ನ್ ಎಂದು ಬಣ್ಣಿಸಲಾಗುತ್ತದೆ. ಐಪಿಎಲ್ ಕೂಡ ಈಗ ಉದ್ಯಮ ವಲಯದ ಈ ಮೌಲ್ಯವನ್ನು ಪಡೆದುಕೊಂಡಿದೆ.