ಕ್ರೀಡೆ

ಚುನಾವಣೆಯಿಂದಾಗಿ ಐಪಿಎಲ್​ 2ನೇ ಚರಣ ಯುಎಇಗೆ ಸ್ಥಳಾಂತರವಾಗುವುದೇ? ಬಿಸಿಸಿಐ ನೀಡಿದ ಸ್ಪಷ್ಟನೆ ಹೀಗಿದೆ...

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐಪಿಎಲ್​ 17ನೇ ಆವೃತ್ತಿಯ 2ನೇ ಚರಣದ ಪಂದ್ಯಗಳು ಅರಬ್ಬರ ನಾಡು ಯುಎಇಗೆ ಸ್ಥಳಾಂತರಗೊಳ್ಳಲಿದೆ ಎಂದು ಶನಿವಾರ ಬೆಳಗ್ಗೆ ವರದಿಗಳು ಹರಡಿದವು. ಆದರೆ ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಬಿಸಿಸಿಐ, ಯುಎಇ ಅಥವಾ ಬೇರೆ ಯಾವುದೇ ದೇಶಕ್ಕೆ ಐಪಿಎಲ್​ ಟೂರ್ನಿಯನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಚುನಾವಣೆಯ ನಡುವೆಯೂ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ಸದ್ಯ ಮಾರ್ಚ್​ 22ರಿಂದ ಏಪ್ರಿಲ್​ 7ರವರೆಗೆ ನಡೆಯಲಿರುವ ಐಪಿಎಲ್​ನ ಮೊದಲ ಚರಣದ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಗೊಂಡಿವೆ. ಪ್ಲೇಆಫ್​-ಫೈನಲ್​ ಸಹಿತ ಇನ್ನುಳಿದ 53 ಪಂದ್ಯಗಳ ವೇಳಾಪಟ್ಟಿಯನ್ನು ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪ್ರಕಟಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಈ ನಡುವೆ ಐಪಿಎಲ್​ನಲ್ಲಿ ಆಡುವ ಎಲ್ಲ ಆಟಗಾರರ ಪಾಸ್​ ಪೋರ್ಟ್​ ಸಲ್ಲಿಸುವಂತೆ ತಂಡಗಳು ಬೇಡಿಕೆ ಇಟ್ಟಿವೆ ಮತ್ತು ಬಿಸಿಸಿಐ ಅಧಿಕಾರಿಗಳು ಯುಎಇಗೆ ಭೇಟಿ ನೀಡಿ ಕ್ರೀಡಾಂಗಣ ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಇದು ಐಪಿಎಲ್​ ಸ್ಥಳಾಂತರದ ಮುನ್ಸೂಚನೆ ಎಂದೂ ಹೇಳಲಾಗಿದೆ. ಆದರೆ ಐಪಿಎಲ್​ ಚೇರ್ಮನ್​ ಅರುಣ್​ ಧುಮಾನ್​ ಇದನ್ನು ನಿರಾಕರಿಸಿದ್ದಾರೆ.

"ನಾವು ಸರ್ಕಾರಿ ಸಂಸ್ಥೆಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದೇವೆ. ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ನಾವು ಐಪಿಎಲ್​ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಳಿಸುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಟೂರ್ನಿಯ 2ನೇ ಚರಣವೂ ಸಂಪೂರ್ಣವಾಗಿ ಭಾಋತದಲ್ಲೇ ನಡೆಯಲಿದೆ. ವಿದೇಶಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ' ಎಂದು ಅರುಣ್​ ಧುಮಾನ್​ ಸ್ಪಷ್ಟಪಡಿಸಿದ್ದಾರೆ.

ಈ ಮುನ್ನ 2009ರ ಸಾರ್ವತ್ರಿಕ ಚುನಾವಣೆಯ ವೇಳೆ ಸಂಪೂರ್ಣ ಐಪಿಎಲ್​ ದಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದರೆ, 2014ರಲ್ಲಿ ಮೊದಲ ಚರಣದ ಪಂದ್ಯಗಳು ಯುಎಇಯಲ್ಲಿ ನಡೆದಿತ್ತು. 2019ರಲ್ಲಿ ಚುನಾವಣೆಯ ನಡುವೆಯೂ ಸಂಪೂರ್ಣ ಐಪಿಎಲ್​ ಟೂರ್ನಿ ಭಾರತದಲ್ಲೇ ಯಶಸ್ವಿಯಾಗಿ ಆಯೋಜನೆಗೊಂಡಿತ್ತು.