ನವದೆಹಲಿ: 18ನೇ ಆವೃತ್ತಿಯ ಐಪಿಎಲ್ಗೆ (IPl) ಸಂಬಂಧಿಸಿದ ಕೆಲಸಗಳು ಈಗಾಗಲೇ ಆರಂಭಗೊಂಡಿದ್ದು, ಮುನ್ನುಡಿ ಎಂಬಂತೆ ನವೆಂಬರ್ 24-25ರಂದು ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹಣದ ಹೊಳೆಯೇ ಹರಿದಿದೆ. 574 ಆಟಗಾರರ ಪೈಕಿ ಮುಖ್ಯವಾಗಿ ಎಲ್ಲರ ಗಮನ ಸೆಳೆದಿದ್ದು, 13 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಎಂದರೆ ತಪ್ಪಾಗಲಾರದು. ಮೊದಲಿಗೆ ಐಪಿಎಲ್ ಹರಾಜು ಪ್ರಕ್ರಿಯೆಗೆ ಬಾಲಕ ನೋಂದಾಯಿಸಿದ ಸುದ್ದಿ ಹೊರಬಿದ್ದಾಗ ಈತನನ್ನು ಯಾರು ಖರೀದಿಸುವುದಿಲ್ಲ ಎಂದು ಊಹಿಸಲಾಗಿತ್ತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ನಡುವೆ ನಡೆದ ಪೈಫೋಟಿಯಲ್ಲಿ ಈತನನ್ನು ಆರ್ಆರ್ (RR) ಫ್ರಾಂಚೈಸಿ 1.10 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.
ಐಪಿಎಲ್ (IPL) ಇತಿಹಾಸದಲ್ಲೇ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನ್ನುವ ಸಾಧನೆ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್‌ಗೆ (Rajasthan Royals) ಮುಖ್ಯ ತರಬೇತುದಾರರಾಗಿ ಹಿಂದಿರುಗಿದ ರಾಹುಲ್ ದ್ರಾವಿಡ್ (Rahul Dravid) ವೈಭವ್ ಸೂರ್ಯವಂಶಿ (Vaibhav Suryavanshi) ಖರೀದಿಸಲು ಆಸಕ್ತಿ ತೋರಿದ್ದರಿಂದ ಅವರನ್ನು ರಾಜಸ್ಥಾನ ರಾಯಲ್ಸ್ 1.10 ಕೋಟಿ ರೂ. ಹಣ ನೀಡಿ ಖರೀದಿ ಮಾಡಿದೆ.
ಬಿಹಾರದ ಸಮಸ್ತಿಪುರದವನಾದ ಈ ಬಾಲಕ ಈಗಾಗಲೇ ಭಾರತ ಅಂಡರ್-19 ಪರ 2 ಯೂತ್ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾನೆ. ಇನ್ನೂ ಮೊದಲನೆಯ ಐಪಿಎಲ್ ಹರಾಜಿನಲ್ಲಿ (IPL Auction) ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ಬಾಲಕನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ವೈಭವ್ (Vaibhav) ತಂದೆ ಸಂಜೀವ್ ಸೂರ್ಯವಂಶಿ (Sanjay Suryavanshi) ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸಂಜೀವ್, ಅವನು ಈಗ ನನ್ನ ಮಗನಲ್ಲ, ಇಡೀ ಬಿಹಾರದ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆತ 8 ವರ್ಷದವನಿದ್ದಾಗಿನಿಂದಲೇ ಕ್ರಿಕೆಟ್ ಆಡುತ್ತಿದ್ದಾನೆ. ಇದಕ್ಕಾಗಿ ನಾನು ನನ್ನ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಿದ್ದೇನೆ.
ಇನ್ನೂ ವೈಭವ್ ವಿರುದ್ಧ ವಯಸ್ಸು ವಂಚನೆ ಆರೋಪ ಕುರಿತು ಪ್ರತಿಕ್ರಿಯಿಸಿ, ಆತ 8 ವರ್ಷದವನಿದ್ದಾಗ ಮೊದಲಿಗೆ ಬಿಸಿಸಿಐ ನಡೆಸಿದ ಬೋನ್ ಪರೀಕ್ಷೆಯಲ್ಲಿ ಕಾಣಿಸಿಕೊಂಡನು. ಆತ ಭಾರತ ಅಂಡರ್-19 ಪರ ಆಡಿದ್ದಾನೆ. ಆತನನ್ನು ಮತ್ತೊಮ್ಮೆ ವಯಸ್ಸಿನ ಪರೀಕ್ಷೆಗೆ ಒಳಪಡಿಸಬಹುದು. ನಾವು ಯಾವುದಕ್ಕೂ ಹೆದರುವುದಿಲ್ಲ. ನಾವು ಯಾವುದೇ ವಂಚನೆ ಎಸಗಿಲ್ಲ ಎಂದು ವೈಭವ್ ತಂದೆ ಸಂಜೀವ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ರಾಜಸ್ಥಾನ ರಾಯಲ್ಸ್‌ಗೆ ವೈಭವ್ ಆಯ್ಕೆಯಾದ ಕುರಿತು ಮಾತನಾಡಿ, ನಾಗ್ಪುರದಲ್ಲಿ ರಾಜಸ್ಥಾನ ಫ್ರಾಂಚೈಸಿ ನಡೆಸಿದ ಟ್ರಯಲ್ಸ್ನಲ್ಲಿ ವೈಭವ್ ಭಾಗಿಯಾಗಿದ್ದ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಆತನಿಗೆ ಪರಿಸ್ಥಿತಿಯನ್ನು ಹೇಳಿದರು. ನನ್ನ ಮಗ ಒಂದು ಓವರ್ನಲ್ಲಿ 3 ಬೌಂಡರಿ ಒಳಗೊಂಡಂತೆ 17 ರನ್ ಬಾರಿಸಿದ. ಒಟ್ಟಾರೆ ಆತ ಟ್ರಯಲ್ಸ್ನಲ್ಲಿ ಎಂಟು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳನ್ನು ಬಾರಿಸಿದ ಇದು ಒಟ್ಟಾರೆಯಾಗಿ ಆತನಿಗೆ ಸಹಕಾರಿಯಾಯಿತು. ವಯಸ್ಸಿಗೆ ಸಂಬಂಧಿಸಿದಂತೆ ನಾವು ಯಾವುದೇ ಅಕ್ರಮ ಎಸಗಿಲ್ಲ. ಈ ಬಗ್ಗೆ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿರುತ್ತೇವೆ ಎಂದು ವೈಭವ್ ತಂದೆ ಸಂಜೀವ್ ಸೂರ್ಯವಂಶಿ ಸ್ಪಷ್ಟನೆ ನೀಡಿದ್ದಾರೆ.