ಕ್ರೀಡೆ

ಹೊಸ ಆರ್​ಟಿಎಂ ನಿಯಮದ ವಿರುದ್ಧ ಐಪಿಎಲ್ ಫ್ರಾಂಚೈಸಿಗಳ ಅಸಮಾಧಾನ; ಹೀಗಿದೆ ಕಾರಣ...

ನವದೆಹಲಿ: ಬಿಸಿಸಿಐ ಈ ಬಾರಿ ಐಪಿಎಲ್​ ತಂಡಗಳಿಗೆ ಗರಿಷ್ಠ 5 ಆಟಗಾರರ ರಿಟೇನ್​ಗೆ ಅನುವು ಮಾಡಿಕೊಡುವ ಜತೆಗೆ ಮೆಗಾ ಹರಾಜಿನಲ್ಲಿ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಬಳಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಆದರೆ ಇದರೊಂದಿಗೆ ಒಂದು ಟ್ವಿಸ್ಟ್​ ಕೂಡ ಇಟ್ಟಿದೆ. ಇದರಿಂದಾಗಿ ಈಗ ಕೆಲ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಬಿಸಿಸಿಐ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆರ್​ಟಿಎಂ ನಿಯಮಾವಳಿಯನ್ನು ಪ್ರಶ್ನಿಸಿ ಕೆಲ ಫ್ರಾಂಚೈಸಿಗಳು ಬಿಸಿಸಿಐಗೆ ಪತ್ರವನ್ನೂ ಬರೆದಿವೆ ಎನ್ನಲಾಗಿದೆ.

ಆರ್​ಟಿಎಂ ಪ್ರಕಾರ, ತಂಡವೊಂದು ಹರಾಜಿನಲ್ಲಿ ತನ್ನ ಮೂಲ ಆಟಗಾರ ಬೇರೆ ತಂಡಕ್ಕೆ ಗರಿಷ್ಠ ಮೊತ್ತಕ್ಕೆ ಬಿಡ್​ ಆದಾಗ ಆತನನ್ನು ಅದೇ ಮೊತ್ತಕ್ಕೆ ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶ ಕಲ್ಪಿಸುತ್ತದೆ. ಆದರೆ ಈ ಬಾರಿ 2018ರ ಬಳಿಕ ಮತ್ತೆ ಐಪಿಎಲ್​ ಹರಾಜಿನಲ್ಲಿ ಆರ್​ಟಿಎಂ ಬಳಕೆಯಾಗುತ್ತಿದ್ದರೂ, ಈ ನಿಯಮಕ್ಕೆ ಸ್ವಲ್ಪ ತಿದ್ದುಪಡಿ ತಂದಿದೆ. ಇದರನ್ವಯ, ಹರಾಜಿನಲ್ಲಿ ಎ ತಂಡ ಆಟಗಾರನೊಬ್ಬನಿಗೆ 6 ಕೋಟಿ ರೂ. ಬಿಡ್​ ಸಲ್ಲಿಸಿದಾಗ, ಬಿ ತಂಡ ಆರ್​ಟಿಎಂ ಬಳಸಿ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾದರೆ, ಎ ತಂಡಕ್ಕೆ ಬಿಡ್​ ಮೊತ್ತ ಏರಿಸುವ ಅವಕಾಶ ನೀಡಲಾಗುತ್ತದೆ. ಆಗ ಎ ತಂಡ 12 ಕೋಟಿ ರೂ. ಬಿಡ್​ ಸಲ್ಲಿಸಿದರೆ, ಬಿ ತಂಡ ಆರ್​ಟಿಎಂನಲ್ಲಿ ಆ ಮೊತ್ತಕ್ಕೇ ಆಟಗಾರನನ್ನು ಮರಳಿ ಗಳಿಸಬಹುದಾಗಿರುತ್ತದೆ. ಎ ತಂಡ ಎಷ್ಟೇ ಮೊತ್ತದ ಬಿಡ್​ ಏರಿಕೆಯ ಮೂಲಕ ಆಟಗಾರನನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಬಿಸಿಸಿಐ ತಿಳಿಸಿದೆ.

ಆರ್​ಟಿಎಂನ ಈ ಹೊಸ ನಿಯಮಾವಳಿ ಫ್ರಾಂಚೈಸಿಗಳ ಪಾಲಿಗೆ ತಲೆನೋವಾಗಿದೆ. ಈ ಹೊಸ ನಿಯಮದಿಂದಾಗಿ ಆರ್​ಟಿಎಂ ತನ್ನ ತರ್ಕವನ್ನೇ ಕಳೆದುಕೊಂಡಿದೆ. ಹಿಂದಿನ ಆರ್​ಟಿಎಂ ಪ್ರಕಾರ ಆಟಗಾರನೊಬ್ಬ ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯದೊಂದಿಗೆ ಮೂಲ ತಂಡಕ್ಕೆ ಮರಳಬಹುದಾಗಿತ್ತು. ಆದರೆ ಈಗಿನ ಬದಲಾವಣೆಯಿಂದಾಗಿ ಆಟಗಾರನ ಮೊತ್ತ ನಿರಂಕುಶವಾಗಿ ಏರಿಕೆಯಾಗುತ್ತದೆ. ಇದು ಮೂಲ ತಂಡಕ್ಕೆ ಆತನನ್ನು ಉಳಿಸಿಕೊಳ್ಳಲು ಕಷ್ಟವಾಗಿಸುತ್ತದೆ ಎಂದು ಫ್ರಾಂಚೈಸಿಗಳ ಬೇಸರವಾಗಿದೆ.

ಆದರೆ ಬಿಸಿಸಿಐ, ಹೆಚ್ಚಿನ ಸ್ಟಾರ್​ ಆಟಗಾರರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ನಿಯಮಾವಳಿ ರೂಪಿಸಿದೆ ಎನ್ನಲಾಗುತ್ತಿದೆ.

ರಿಟೇನ್​ ಕೂಡ ಬಲು ಕಠಿಣ

ಐಪಿಎಲ್​ ರಿಟೇನ್​ ನಿಯಮಾವಳಿ ಪ್ರಕಾರ ಮೊದಲ 3 ಆಟಗಾರರ ರಿಟೇನ್​ಗೆ 18, 14, 11 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇದು ಸಾಧ್ಯವೆನಿಸಿದರೂ, ಇನ್ನಿಬ್ಬರು ಆಟಗಾರರ ರಿಟೇನ್​ಗೆ ಮತ್ತೆ 18, 14 ಕೋಟಿ ರೂ. ವ್ಯಯಿಸಬೇಕಾಗಿರುವುದು ತಾಪತ್ರಯ ತಂದಿಟ್ಟಿದೆ. 4, 5ನೇ ಆದ್ಯತೆಯ ಆಟಗಾರರನ್ನು ಹರಾಜಿಗೆ ಬಿಟ್ಟು ಆರ್​ಟಿಎಂ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸಬಹುದಾದರೂ, ಅದರ ಹೊಸ ನಿಯಮಾವಳಿಯಿಂದಾಗಿ ಅದು ಕೂಡ ಕಷ್ಟಕರವೆನಿಸಿದೆ. ಯಾಕೆಂದರೆ, ಒಂದು ವೇಳೆ 4, 5ನೇ ಆದ್ಯತೆಯ ಆಟಗಾರರನ್ನು ರಿಟೇನ್​ ಮಾಡಿಕೊಳ್ಳದಿದ್ದರೆ ಮೆಗಾ ಹರಾಜಿನಲ್ಲಿ ಅವರು ಇನ್ನಷ್ಟು ಅಧಿಕ ಮೊತ್ತದ ಬಿಡ್​ ಪಡೆದುಕೊಳ್ಳುವ ಭೀತಿಯೂ ಫ್ರಾಂಚೈಸಿಗಳಲ್ಲಿ ಮನೆಮಾಡಿದೆ.