ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ 'ಐಪಿಎಲ್' ಮತ್ತೆ ಬಂದಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ಮುಖಾಮುಖಿ ಆಗುವುದರೊಂದಿಗೆ 17ನೇ ಆವೃತ್ತಿಯ ಟೂರ್ನಿಗೆ ವರ್ಣರಂಜಿತ ಚಾಲನೆ ದೊರೆಯಲಿದೆ. ಸದ್ಯಕ್ಕೆ ಟೂರ್ನಿಯ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟವಾಗಿದೆ. ಲೋಕಸಭಾ ಚುನಾವಣೆಯ ದಿನಾಂಕ ಈಗಾಗಲೆ ನಿಗದಿಯಾಗಿರುವುದರಿಂದ, ಶೀಘ್ರದಲ್ಲೇ ಇತರ ಪಂದ್ಯಗಳ ವಿವರವೂ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಚೆನ್ನೈ: ದೇಶದೆಲ್ಲೆಡೆ ಚುನಾವಣೆಯ ಕಾವು ಹರಡುತ್ತಿದೆ, ರಾಜ್ಯದಲ್ಲಿ ಬಿಸಿಲಿನ ದಗೆ ಏರುತ್ತಿದೆ, ಬೆಂಗಳೂರಿನಲ್ಲಿ ನೀರಿನ ತಾಪತ್ರಯ ಜೋರಾಗಿದೆ, ಯುವ ಜನತೆಯಲ್ಲಿ 'ಕರಿಮಣಿ ಮಾಲೀಕ'ನ ಟ್ರೆಂಡ್ ಆವರಿಸಿದೆ. ಇದೆಲ್ಲದರ ನಡುವೆ ವಾರ್ಷಿಕ ಟಿ20 ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ಗೆ ವೇದಿಕೆ ಸಜ್ಜಾಗಿದೆ. ಕ್ರಿಕೆಟ್ ಪ್ರೇಮಿಗಳು ಎಲ್ಲವನ್ನೂ ಮರೆತು, ಸಿಕ್ಸರ್-ಬೌಂಡರಿ, ರನ್ ಸುರಿಮಳೆ, ವಿಕೆಟ್ ಬೇಟೆ, ರೋಚಕ ಕಾದಾಟವನ್ನು ಸಂಭ್ರಮಿಸುವ ಸಮಯ ಮತ್ತೆ ಬಂದಿದೆ. ಲೋಕಸಭಾ ಚುನಾವಣೆಯ ನಡುವೆ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ಸಂಟಿಸುವ ಸವಾಲನ್ನು ಬಿಸಿಸಿಐ ಸ್ವೀಕರಿಸುವ ಮೂಲಕ ಆತ್ಮನಿರ್ಭರವಾಗಿದೆ.
ಈ ಬಾರಿ ಐಪಿಎಲ್ ಮುಗಿದ ಬಳಿಕವೂ ಇನ್ನೂ ಒಂದು ತಿಂಗಳ ಕಾಲ ಟಿ20 ಕ್ರಿಕೆಟ್ ಜ್ವರ ಮುಂದುವರಿಯಲಿದೆ. ಯಾಕೆಂದರೆ ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಅಮೆರಿಕ-ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಿನ್ನೂ ರಾಷ್ಟ್ರೀಯ ತಂಡಗಳು ಅಂತಿಮವಾಗಿಲ್ಲ. ಹೀಗಾಗಿ ಈ ಸಲದ ಐಪಿಎಲ್, ಭಾರತ ಮಾತ್ರವಲ್ಲದೆ ವಿದೇಶಿ ಆಟಗಾರರಿಗೂ ಟಿ20 ವಿಶ್ವಕಪ್ಗೆ ಆಯ್ಕೆ ಟ್ರಯಲ್ಸ್ ಮತ್ತು ಪೂರ್ವಾಭ್ಯಾಸವಾಗಿಯೂ ನೆರವಾಗಲಿದೆ. ಇಂಪ್ಯಾಕ್ಟ್ ಪ್ಲೇಯರ್, ಟಾಸ್ ನಂತರ ಆಡುವ 11ರ ಬಳಗದ ನಿರ್ಧಾರ ಮತ್ತು ವೈಡ್-ನೋಬಾಲ್ಗೂ ಡಿಆರ್ಎಸ್ ಬಳಸುವ ಹೊಸ ನಿಯಮಗಳಿಂದಾಗಿ ಕಳೆದ ವರ್ಷದ ಐಪಿಎಲ್ ಹೆಚ್ಚು ರೋಚಕವಾಗಿತ್ತು. ಜತೆಗೆ ರನ್ಮಳೆಯೂ ಧಾರಾಳವಾಗಿ ಹರಿದಿತ್ತು ಮತ್ತು ಟಾಸ್ ನಿರ್ಣಾಯಕ ಎನಿಸಿರಲಿಲ್ಲ. ಈ ನಿಯಮಗಳು ಹಾಲಿ ವರ್ಷವೂ ಮುಂದುವರಿಯಲಿದ್ದು, ಜತೆಗೆ ಪ್ರತಿ ಓವರ್ಗೆ 2 ಬೌನ್ಸರ್ ಎಸೆಯುವ ಅವಕಾಶವನ್ನೂ ಬೌಲರ್ಗೆ ನೀಡಲಾಗುತ್ತಿದೆ. ಇದರಿಂದ ಮತ್ತೊಮ್ಮೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಡುವ ನಿರೀಕ್ಷೆ ಇದೆ. ಆದರೆ ಕೆಲ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿರುವುದರಿಂದ ಸಂಪೂರ್ಣ ಟೂರ್ನಿ ತಪ್ಪಿಸಿಕೊಂಡಿರುವುದು ಅಥವಾ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿರುವುದು ತಂಡಗಳ ಲೆಕ್ಕಾಚಾರವನ್ನು ಸ್ವಲ್ಪಮಟ್ಟಿಗೆ ತಲೆಕೆಳಗೆ ಮಾಡಿವೆ.
*ಒಟ್ಟು ಬಹುಮಾನ ಮೊತ್ತ: 50 ಕೋಟಿ ರೂ.
*ಚಾಂಪಿಯನ್: 20 ಕೋಟಿ ರೂ.
*ರನ್ನರ್ಅಪ್: 12.5 ಕೋಟಿ ರೂ.
*3-4ನೇ ಸ್ಥಾನ: ತಲಾ 8.75 ಕೋಟಿ ರೂ.
ಐಪಿಎಲ್ ಚಾಂಪಿಯನ್ಸ್
5: ಮುಂಬೈ ಇಂಡಿಯನ್ಸ್ (2013, 2015, 2017, 2019, 2020)
5: ಚೆನ್ನೈ ಸೂಪರ್ಕಿಂಗ್ಸ್ (2010, 2011, 2018, 2021, 2023)
2: ಕೋಲ್ಕತ ನೈಟ್ರೈಡರ್ಸ್ (2012, 2014)
1: ರಾಜಸ್ಥಾನ ರಾಯಲ್ಸ್ (2008)
1: ಸನ್ರೈಸರ್ಸ್ ಹೈದರಾಬಾದ್ (2016)
1: ಡೆಕ್ಕನ್ ಚಾರ್ಜರ್ಸ್ (2009)
1: ಗುಜರಾತ್ ಟೈಟಾನ್ಸ್ (2023)
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಆದರೆ 2 ಗುಂಪುಗಳಿದ್ದರೂ ಅಂಕಪಟ್ಟಿ ಒಂದೇ ಇರಲಿದ್ದು, ಒಟ್ಟಾರೆ ಅಗ್ರ 4 ತಂಡಗಳಷ್ಟೇ ಪ್ಲೇಆಫ್ ಹಂತಕ್ಕೇರಲಿವೆ. ಹಿಂದಿನ ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಮತ್ತು ಫೈನಲ್ಗೇರಿರುವ ಲೆಕ್ಕಾಚಾರದ ಅನ್ವಯ ತಂಡಗಳಿಗೆ ಶ್ರೇಯಾಂಕವನ್ನು ನೀಡಿ 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ತಂಡ ಇನ್ನೊಂದು ಗುಂಪಿನ 5 ತಂಡಗಳ ಎದುರು ತವರು-ಎದುರಾಳಿ ನೆಲದಂತೆ ತಲಾ 2 ಪಂದ್ಯ ಆಡಲಿದ್ದರೆ, ತನ್ನದೇ ಗುಂಪಿನ ಇತರ 4 ತಂಡಗಳ ಎದುರು ತಲಾ ಪಂದ್ಯ ಮಾತ್ರ ಆಡಲಿದೆ. ಇದರಿಂದ ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 14 ಪಂದ್ಯ ಆಡಲಿವೆ.
ಟೀಮ್ ಇಂಡಿಯಾ ಸಾರಥಿಗೆ ಐಪಿಎಲ್ನಲ್ಲಿ ನಾಯಕತ್ವವಿಲ್ಲ!
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾದ ಹಾಲಿ ನಾಯಕ ಯಾವುದೇ ತಂಡದ ನಾಯಕತ್ವವಿಲ್ಲದೆ ಸಾಮಾನ್ಯ ಆಟಗಾರನಾಗಿ ಆಡಲಿದ್ದಾರೆ! ಈ ಹಿಂದೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದಾಗ, ಐಪಿಎಲ್ನಲ್ಲೂ ತಂಡಗಳ ಸಾರಥ್ಯವಿತ್ತು. ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮರನ್ನು ಕೆಳಗಿಳಿಸಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮ ಅವರೇ ಭಾರತವನ್ನು ಮುನ್ನಡೆಸಲಿದ್ದರೆ, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಐಪಿಎಲ್ನಲ್ಲಿ ಟೀಮ್ ಇಂಡಿಯಾದ ನಾಯಕ, ಉಪನಾಯಕನ ಸಾರಥ್ಯದಡಿಯಲ್ಲಿ ಕಣಕ್ಕಿಳಿಯುವಂತಾಗಿದೆ!
ಬಹುಮಾನಕ್ಕಿಂತ ಅಧಿಕ ಸಂಭಾವನೆ!
ಈ ಬಾರಿ ಐಪಿಎಲ್ನಲ್ಲಿ ಆಡುವ ಇಬ್ಬರು ಆಟಗಾರರು ಬಹುಮಾನ ಮೊತ್ತಕ್ಕಿಂತಲೂ ಅಧಿಕ ಸಂಭಾವನೆ ಪಡೆಯಲಿರುವುದು ವಿಶೇಷವಾಗಿದೆ. ಅವರೇ ಆಸ್ಟ್ರೆಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್. ಕಮ್ಮಿನ್ಸ್ ಸನ್ರೈಸರ್ಸ್ನಿಂದ 20.50 ಕೋಟಿ ರೂ. ಮತ್ತು ಸ್ಟಾರ್ಕ್ ಕೆಕೆಆರ್ನಿಂದ 24.75 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.
ಅದೃಷ್ಟ ತರುವುದೇ ಬದಲಾವಣೆ?
ಕಳೆದ 16 ಆವೃತ್ತಿಗಳಿಂದ ಪ್ರಶಸ್ತಿ ಗೆಲ್ಲದೆ ಬೇಸತ್ತಿರುವ ತಂಡಗಳು ಈ ಬಾರಿ ಪ್ರಶಸ್ತಿ ಗೆಲುವಿನ ಅದೃಷ್ಟ ನಿರೀೆಯೊಂದಿಗೆ ವಿಶೇಷ ಬದಲಾವಣೆ ಕಾಣುತ್ತಿವೆ. ಆರ್ಸಿಬಿ ತಂಡ ತನ್ನ ಹೆಸರಿನಲ್ಲಿ ಇಂಗ್ಲಿಷ್ನ "ಬ್ಯಾಂಗಲೋರ್' ತೆಗೆದು "ಬೆಂಗಳೂರು' ಮಾಡಿಕೊಂಡಿದ್ದರೆ, ಪಂಜಾಬ್ ಕಿಂಗ್ಸ್ ತಂಡ ತನ್ನ ತವರಿನ ತಾಣವನ್ನಾಗಿ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂ ಬದಲಿಗೆ ಮುಲ್ಲನ್ಪುರದ ಹೊಸ ಪಿಸಿಎ ಕ್ರೀಡಾಂಗಣವನ್ನು ಆಯ್ದುಕೊಂಡಿದೆ.