More

    2ನೇ ಹಂತದ ವೇಳಾಪಟ್ಟಿಗೆ ಕಠಿಣ ಸವಾಲು; ಚುನಾವಣೆಯ ಜತೆಗೆ ಈದ್​-ರಾಮನವಮಿ ಭದ್ರತಾ ತಾಪತ್ರಯ

    ಬೆಂಗಳೂರು: ಏಪ್ರಿಲ್ 8ರ ನಂತರ ನಡೆಯಲಿರುವ ಐಪಿಎಲ್ 2ನೇ ಹಂತದ ಉಳಿದ 53 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೊಳಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ ಕೆಲವು ಕಠಿಣ ಸವಾಲುಗಳಿಂದಾಗಿ ಬಿಸಿಸಿಐಗೆ ವೇಳಾಪಟ್ಟಿ ಅಂತಿಮಗೊಳಿಸುವುದು ಕಷ್ಟಕರವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿ 5 ದಿನ ಕಳೆದರೂ, ಐಪಿಎಲ್ 2ನೇ ಹಂತದ ವೇಳಾಪಟ್ಟಿ ಪ್ರಕಟವಾಗಿಲ್ಲ. ಈ ವಾರವೇ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದ್ದರೂ, ಐಪಿಎಲ್ ಪಂದ್ಯಗಳು ನಡೆಯುವ ದೇಶದ 12 ನಗರಗಳ ಚುನಾವಣೆ ದಿನಾಂಕಕ್ಕೆ ಅನುಗುಣವಾಗಿ ವೇಳಾಪಟ್ಟಿ ಅಂತಿಮಗೊಳಿಸುವುದು ಬಿಸಿಸಿಐಗೆ ತಲೆನೋವಾಗಿದೆ. ಹೀಗಾಗಿ ವೇಳಾಪಟ್ಟಿ ಪ್ರಕಟ ಇನ್ನೂ ಕೆಲ ದಿನ ತಡವಾಗಬಹುದು.

    ಸವಾಲುಗಳೇನು?: ಐಪಿಎಲ್ ಪಂದ್ಯದ ವೇಳೆ ಆಟಗಾರರು, ಕ್ರೀಡಾಂಗಣ, ಸಾರಿಗೆ ಮತ್ತು ಇತರ ಹಲವು ಭದ್ರತಾ ವ್ಯವಸ್ಥೆ ಬೇಕಾಗಿದ್ದು, ಪ್ರತಿ ಪಂದ್ಯಕ್ಕೆ ಸುಮಾರು 2 ಸಾವಿರ ಪೊಲೀಸ್ ಮತ್ತು ಇತರ ಭದ್ರತಾ ಸಿಬ್ಬಂದಿ ಅಗತ್ಯವಿರುತ್ತದೆ. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ರ್ಯಾಲಿಗಳಿಗೂ ಭದ್ರತೆ ಒದಗಿಸಲು ಹೆಚ್ಚಿನ ಪೊಲೀಸರ ಅಗತ್ಯವಿರುತ್ತದೆ ಮತ್ತು ಸ್ಥಳೀಯವಾಗಿ ಐಪಿಎಲ್ ಪಂದ್ಯಕ್ಕಿಂತ ಅದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಅದೇ ಸಮಯದಲ್ಲಿ ಐಪಿಎಲ್ ಪಂದ್ಯ ಆಯೋಜಿಸಲು ಸಾಧ್ಯವಾಗದು. ಸದ್ಯದ ಪ್ರಕಾರ, ಕೋಲ್ಕತ, ಚಂಡೀಗಢ (ಮೊಹಾಲಿ) ಮತ್ತು ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯ ಆಯೋಜನೆ ಕಷ್ಟವಲ್ಲ. ಯಾಕೆಂದರೆ ಇಲ್ಲಿ ಮತದಾನ ಜೂನ್ 1ಕ್ಕೆ ನಿಗದಿಯಾಗಿದ್ದು, ಅದಕ್ಕೆ ಮುನ್ನ ಮೇ 26ರಂದೇ ಐಪಿಎಲ್ ಮುಗಿಯುವ ನಿರೀಕ್ಷೆ ಇದೆ. ದೆಹಲಿಯಲ್ಲೂ ಬಹುತೇಕ ತಾಪತ್ರಯವಿಲ್ಲ. ಯಾಕೆಂದರೆ ಐಪಿಎಲ್ ಪ್ಲೇಆಫ್ ವೇಳೆ ಅಂದರೆ ಮೇ 25ಕ್ಕೆ ದೆಹಲಿಯಲ್ಲಿ ಮತದಾನವಿದೆ. ಆದರೆ ಸಿಕೆಎಸ್​ಕೆ, ಆರ್​ಸಿಬಿ, ಮುಂಬೈ, ರಾಜಸ್ಥಾನ, ಸನ್​ರೈಸರ್ಸ್, ಗುಜರಾತ್, ಲಖನೌ ಪಂದ್ಯಗಳಿಗೆ ಕೆಲ ಸವಾಲುಗಳಿವೆ. ಚೆನ್ನೈನಲ್ಲಿ ಏಪ್ರಿಲ್ 19ಕ್ಕೆ ಮತದಾನವಿದ್ದು, ಅಲ್ಲಿ ಏಪ್ರಿಲ್ 17ರಿಂದ 21ರವರೆಗೆ ಪಂದ್ಯ ಆಯೋಜಿಸಲು ಆಗದು. ಬೆಂಗಳೂರಿನಲ್ಲಿ ಏಪ್ರಿಲ್ 26ಕ್ಕೆ ಮತದಾನವಿದ್ದು, ಏಪ್ರಿಲ್ 24ರಿಂದ 28ರವರೆಗೆ ಆರ್​ಸಿಬಿ ತವರಿನ ಪಂದ್ಯ ಆಡಲಾಗದು. ಇದಲ್ಲದೆ ಏಪ್ರಿಲ್ 9ಕ್ಕೆ ಯುಗಾದಿ, ಏಪ್ರಿಲ್ 11ಕ್ಕೆ ಈದ್, ಏಪ್ರಿಲ್ 17ಕ್ಕೆ ರಾಮನವಮಿ ಇದ್ದು, ಈ ಸಮಯದಲ್ಲೂ ಪಂದ್ಯ ಆಯೋಜನೆ ಸವಾಲೆನಿಸಿದೆ.

    ಅಹಮದಾಬಾದ್​ನಲ್ಲಿ ಮೇ 7ಕ್ಕೆ ಮತದಾನವಿದ್ದು, ಗುಜರಾತ್ ಟೈಟಾನ್ಸ್ ಮೇ 5ರಿಂದ 9ರವರೆಗೆ ತವರಿನ ಪಂದ್ಯ ಆಡಲಾಗದು. ಮುಂಬೈನಲ್ಲಿ ಮೇ 18ರಿಂದ 22ರವರೆಗೆ ಪಂದ್ಯ ಆಯೋಜನೆ ಸಾಧ್ಯವಿಲ್ಲ. ಹೀಗಾಗಿ ಮುಂಬೈನಲ್ಲಿ ಪ್ಲೇಆಫ್ ಪಂದ್ಯ ನಿಗದಿಯಾಗದು. ಹೈದರಾಬಾದ್​ನಲ್ಲಿ ಮೇ 13ಕ್ಕೆ ಮತದಾನವಿದ್ದು, ಮೇ 11ರಿಂದ 15ರವರೆಗೆ ಅಲ್ಲಿ ಪಂದ್ಯ ನಡೆಯುವುದಿಲ್ಲ.

    ಪ್ಲೇಆಫ್ ಆತಿಥ್ಯಕ್ಕೆ ಬೆಂಗಳೂರು ಪೈಪೋಟಿ?: ಚುನಾವಣೆ ಸವಾಲಿನಿಂದ ಬಿಸಿಸಿಐ, ಪ್ಲೇಆಫ್ ಪಂದ್ಯಗಳನ್ನು ಒಂದೇ ತಾಣದಲ್ಲಿ ನಿಗದಿಪಡಿಸುವ ನಿರೀಕ್ಷೆ ಇದೆ. ಗುಜರಾತ್​ನಲ್ಲಿ ಮೇ 7ರ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯಲಿದೆ. ಹೀಗಾಗಿ ಅಹಮದಾಬಾದ್​ನಲ್ಲೇ ಪ್ಲೇಆಫ್ ನಿಗದಿಯಾಗುವ ಸಾಧ್ಯತೆ ಇದೆ. ಚೆನ್ನೈ ಮತ್ತು ಬೆಂಗಳೂರು ಕೂಡ ಫೈನಲ್ ಸಹಿತ ಪ್ಲೇಆಫ್ ಆತಿಥ್ಯದ ರೇಸ್​ನಲ್ಲಿವೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts