ಅಹಮದಾಬಾದ್: ಗಣಿತಶಾಸ್ತ್ರಕ್ಕೆ ಸವಾಲೊಡ್ಡಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಿ ಮಾಡಿ ಪ್ಲೇಆ್ ಹಂತಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲುವಿನ 17 ವರ್ಷಗಳ ಕನಸು ನನಸಾಗಿಸುವ ಮೂಲಕ ಅಭಿಮಾನಿಗಳ ಅಪಾರ ಪ್ರೀತಿಯ ಋಣ ಸಂದಾಯ ಮಾಡುವ ಸಮಯ ಬಂದಿದೆ. ಭರ್ಜರಿ ಗೆಲುವಿನ ಲಯದಲ್ಲಿರುವ ಆರ್ಸಿಬಿ ಮತ್ತು ಸತತ 4 ಸೋಲಿನ ನಡುವೆ ಪ್ಲೇಆಫ್ ಹಂತಕ್ಕೇರಿರುವ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ಐಪಿಎಲ್-17ರ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ "ಸೆಮಿಫೈನಲ್' ಮಾದರಿಯ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದ್ದರೆ, ಸೋತ ತಂಡ ಟೂರ್ನಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಡಲಿದೆ.
ಉಭಯ ತಂಡಗಳು ಟೂರ್ನಿಯಲ್ಲಿ ಸಂಪೂರ್ಣ ವ್ಯತಿರಿಕ್ತ ರೀತಿಯ ಅಭಿಯಾನದಲ್ಲಿವೆ. ಟೂರ್ನಿಯ ಅರ್ಧಹಾದಿ ಸಾಗಿದಾಗ ಆರ್ಸಿಬಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ಅಗ್ರಸ್ಥಾನದಲ್ಲಿ ಬೀಗುತ್ತಿತ್ತು. ಆದರೆ ನಂತರದಲ್ಲಿ ಆರ್ಸಿಬಿ ಪುಟಿದೆದ್ದು ಬಂದಿದ್ದರೆ, ರಾಜಸ್ಥಾನ ಸಂಪೂರ್ನವಾಗಿ ಲಯ ತಪ್ಪಿದೆ. ಹೀಗಾಗಿ ಹಾಲಿ ಫಾರ್ಮ್ನಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯೇ ಈ ಮುಖಾಮುಖಿಯ ಫೇವರಿಟ್ ತಂಡವೆನಿಸಿದೆ.
ಐಪಿಎಲ್ನಿಂದ ಇಂಗ್ಲೆಂಡ್ ಆಟಗಾರರ ನಿರ್ಗಮನ ಪ್ರಮುಖವಾಗಿ ರಾಯಲ್ಸ್ಗೆ ಹೊಡೆತ ನೀಡುವ ಸಾಧ್ಯತೆ ಇದೆ. ಆರ್ಸಿಬಿ ತಂಡ ವಿಲ್ ಜಾಕ್ಸ್ರನ್ನು ಮಿಸ್ ಮಾಡಿಕೊಂಡರೂ, ಗ್ಲೆನ್ ಮ್ಯಾಕ್ಸ್ವೆಲ್ ಆ ಸ್ಥಾನವನ್ನು ಸಮರ್ಥವಾಗಿಯೇ ತುಂಬಿದ್ದಾರೆ. ಆದರೆ ರಾಯಲ್ಸ್ ಜೋಸ್ ಬಟ್ಲರ್ ಸ್ಥಾನವನ್ನು ತುಂಬುವುದು ಅಷ್ಟು ಸುಲಭವಲ್ಲ. 2 ಶತಕ ಸಹಿತ 359 ರನ್ ಗಳಿಸಿದ್ದ ಬಟ್ಲರ್ ಉತ್ತಮ ಬುನಾದಿ ಹಾಕಿಕೊಡುತ್ತಿದ್ದರು. ಅವರ ಗೈರಿನಲ್ಲಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಬೇಕಿದೆ. ಆರ್ಸಿಬಿ ತಂಡದಲ್ಲೂ ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಪ್ಲೆಸಿಸ್, ರಜತ್ ಪಾಟೀದಾರ್ ಉತ್ತಮ ಲಯದಲ್ಲಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ರಾಜಸ್ಥಾನ ಹೆಚ್ಚು ಅನುಭವದ ಬಲ ಹೊಂದಿದೆ. ಅಶ್ವಿನ್, ಚಾಹಲ್, ಬೌಲ್ಡ್, ಸಂದೀಪ್ ಶರ್ಮರಂಥ ಅನುಭವಿ ಬೌಲರ್ಗಳು ರಾಯಲ್ಸ್ಗೆ ಶಕ್ತಿ ತುಂಬಿದ್ದರೆ, ಆರ್ಸಿಬಿ ಪರ ಯಶ್ ದಯಾಳ್, ಸಿರಾಜ್, ಕರ್ಣ್ ಶರ್ಮ ಇತ್ತೀಚೆಗಿನ ಪಂದ್ಯಗಳಲ್ಲಿ ಉತ್ತಮ ದಾಳಿಯನ್ನೇ ಸಂಟಿಸಿದ್ದಾರೆ. ಇನ್ನು ಆರ್ಸಿಬಿಯಲ್ಲಿ ದಿನೇಶ್ ಕಾರ್ತಿಕ್ ಮತ್ತು ಆರ್ಆರ್ನಲ್ಲಿ ಶಿಮ್ರೊನ್ ಹೆಟ್ಮೆಯರ್ ಫಿನಿಷರ್ ಆಗಿ ನಿರ್ವಹಿಸುವ ಪಾತ್ರವೂ ನಿರ್ಣಾಯಕವೆನಿಸಲಿದೆ.
ಲಯ ತಪ್ಪಿದ ರಾಯಲ್ಸ್
ಆರಂಭಿಕ 9 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಸೋತು ಉಳಿದ 8ರಲ್ಲೂ ಗೆದ್ದು ಬೀಗಿದ್ದ ರಾಜಸ್ಥಾನ ನಂತರ ಸತತ 4 ಸೋಲು ಕಂಡರೆ, ಕೊನೇ ಲೀಗ್ ಪಂದ್ಯ ಒಂದೂ ಎಸೆತವಿಲ್ಲದೆ ರದ್ದುಗೊಂಡಿತ್ತು. ಇದರಿಂದಾಗಿ ಸಂಜು ಸ್ಯಾಮ್ಸನ್ ಬಳಗ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಸಂಪಾದಿಸುವ ಅವಕಾಶದಿಂದಲೂ ವಂಚಿತವಾಗಿತ್ತು. ಇದೀಗ ಗೆಲುವಿನ ಹಾದಿಗೆ ಮರಳದಿದ್ದರೆ ರಾಯಲ್ಸ್ಗೆ ಉಳಿಗಾಲವಿಲ್ಲದಂತಾಗಿದೆ.
ಲೀಗ್ನಲ್ಲಿ ಏಕೈಕ ಮುಖಾಮುಖಿ...
ಉಭಯ ತಂಡಗಳು ಲೀಗ್ ಹಂತದಲ್ಲಿ ಏಪ್ರಿಲ್ 6ರಂದು ಜೈಪುರದಲ್ಲಿ ಏಕೈಕ ಬಾರಿ ಮುಖಾಮುಖಿ ಆಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ವಿರಾಟ್ ಕೊಹ್ಲಿ (113*) ಅಜೇಯ ಶತಕದ ಬಲದಿಂದ 3 ವಿಕೆಟ್ಗೆ 183 ರನ್ ಪೇರಿಸಿತ್ತು. ಪ್ರತಿಯಾಗಿ ಜೋಸ್ ಬಟ್ಲರ್ (100*) ಬಿರುಸಿನ ಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್ (69) ಅರ್ಧಶತಕದ ನೆರವಿನಿಂದ 19.1 ಓವರ್ಗಳಲ್ಲಿ 4 ವಿಕೆಟ್ಗೆ 189 ರನ್ ಗಳಿಸಿ ಜಯಿಸಿತ್ತು.
ಪಿಚ್ ರಿಪೋರ್ಟ್
ಮೋದಿ ಸ್ಟೇಡಿಯಂನಲ್ಲಿ ಲೀಗ್ ಹಂತದಲ್ಲಿನ 12 ಇನಿಂಗ್ಸ್ಗಳಲ್ಲಿ 2 ಬಾರಿ ಮಾತ್ರ 200 ಪ್ಲಸ್ ಮೊತ್ತ ದಾಖಲಾಗಿತ್ತು. ಅಂದರೆ ಇಲ್ಲಿ ಬ್ಯಾಟಿಂಗ್ಗಿಂತ ಶಿಸ್ತುಬದ್ಧ ಬೌಲಿಂಗ್ ನಿರ್ವಹಣೆಯೇ ಗೆಲುವಿಗೆ ಹೆಚ್ಚು ಸಹಕಾರಿ.
ಮುಖಾಮುಖಿ: 30
ಆರ್ಸಿಬಿ: 15
ರಾಜಸ್ಥಾನ: 13
ರದ್ದು: 2
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್