ಕ್ರೀಡೆ

ಕರೊನಾ ಕಾಲದಲ್ಲೂ ಭರ್ಜರಿ ಡೀಲ್!

ನವದೆಹಲಿ: ಕರೊನಾ ವೈರಸ್ ಹಾವಳಿಯ ನಡುವೆ ಕ್ರೀಡಾ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿರುವ ನಡುವೆ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಕೂಡ ಕ್ರೀಡಾಲೋಕಕ್ಕೆ ಹೊಸ ಸವಾಲು ಎದುರಾಗುವಂತೆ ಮಾಡಿದೆ. ಐಪಿಎಲ್ 13ನೇ ಆವೃತ್ತಿಗೆ ಯುಎಇಯಲ್ಲಿ ವೇದಿಕೆ ಸಜ್ಜಾಗುತ್ತಿರುವ ವೇಳೆ ಕೆಲ ತಂಡಗಳು ಕೊನೇಕ್ಷಣದಲ್ಲಿ ಹಿಂದಿನ ಕೆಲ ಪ್ರಾಯೋಜಕರನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದರೆ, ಇನ್ನು ಕೆಲ ತಂಡಗಳು ಹೊಸ ಪ್ರಾಯೋಜಕರನ್ನು ಪಡೆದುಕೊಂಡಿವೆ. ಒಟ್ಟಾರೆ ಪ್ರಾಯೋಜಕತ್ವ ಒಪ್ಪಂದಗಳಿಂದ ತಂಡಗಳಿಗೆ 10ರಿಂದ 15 ಕೋಟಿ ರೂ. ಆದಾಯ ಖಚಿತಗೊಂಡಿದೆ.

ಮಾರ್ಕೆಟಿಂಗ್ ತಜ್ಞರ ಅಂದಾಜಿನ ಪ್ರಕಾರ ಈ ಬಾರಿ ತಂಡಗಳ ಪ್ರಾಯೋಜಕತ್ವ ಆದಾಯದ ಲೆಕ್ಕಾಚಾರ ಹಾಕಲಾಗಿದೆ. ಐಪಿಎಲ್ ತಂಡಗಳು ಜೆರ್ಸಿಯ ಎದುರು ಭಾಗದ ಪ್ರಾಯೋಜಕತ್ವಕ್ಕಾಗಿ ಸರಾಸರಿ 7 ಕೋಟಿ ರೂ. ದರ ನಿಗದಿ ಮಾಡಿದ್ದರೆ, ಜೆರ್ಸಿಯ ಹಿಂಭಾಗದ ಪ್ರಾಯೋಜಕತ್ವಕ್ಕಾಗಿ ಸರಾಸರಿ 4-5 ಕೋಟಿ ರೂ. ದರ ನಿಗದಿ ಮಾಡಿವೆ. ಹೆಲ್ಮೆಟ್​ನಲ್ಲಿ ಬಲ-ಎಡ ಬದಿಯ ಪ್ರಾಯೋಜಕತ್ವಕ್ಕೆ 3.5 ಕೋಟಿ ರೂ. ಮತ್ತು ಹಿಂಬದಿಯ ಪ್ರಾಯೋಜಕತ್ವಕ್ಕಾಗಿ 1 ಕೋಟಿ ರೂ. ನಿಗದಿಪಡಿಸಿವೆ. ಇದು ಕಳೆದ ವರ್ಷಕ್ಕಿಂತ ಶೇ. 25-50ರಷ್ಟು ಕಡಿಮೆ ದರವಾಗಿದೆ. ಕೊನೇಕ್ಷಣದಲ್ಲಿ ಪ್ರಾಯೋಜಕರನ್ನು ಸೆಳೆದುಕೊಳ್ಳುವ ಪೈಪೋಟಿಯಲ್ಲಿ ಕೆಲ ತಂಡಗಳು ಪ್ರಾಯೋಜಕತ್ವದಲ್ಲಿ ರಿಯಾಯಿತಿ ದರವನ್ನು ನೀಡಿವೆ.

ಈ ಮುನ್ನ ಮಾರ್ಚ್​ನಿಂದ ಮೇವರೆಗೆ ನಿಗದಿಯಾಗಿದ್ದ ಟೂರ್ನಿಗೆ ತಂಡಗಳು ಪ್ರಾಯೋಜಕತ್ವ ಪ್ರಕ್ರಿಯೆ ಮುಗಿಸಿದ್ದವು. ಆದರೆ ಟೂರ್ನಿ ಮುಂದೂಡಿಕೆಯಿಂದಾಗಿ ಆಗಿನ ಒಪ್ಪಂದಗಳು ರದ್ದುಗೊಂಡಿದ್ದವು. ಇದೀಗ ಟೂರ್ನಿ ಮರುನಿಗದಿಯಾದ ಸಮಯದಲ್ಲಿ ಕೆಲ ತಂಡಗಳು ಹಿಂದಿನ ಪ್ರಾಯೋಜಕರನ್ನೇ ಉಳಿಸಿಕೊಂಡಿವೆ.

ಟಿಕೆಟ್ ಆದಾಯಕ್ಕೆ ಹೊಡೆತ: ಈ ಬಾರಿ ಎಲ್ಲ ತಂಡಗಳಿಗೆ ಟಿಕೆಟ್ ಆದಾಯವಿಲ್ಲದೆ ಹೊಡೆತ ಬೀಳಲಿದೆ. ಮುಂಬೈ, ಚೆನ್ನೈ, ಡೆಲ್ಲಿಯಂಥ ತಂಡಗಳು ತವರಿನ 7 ಪಂದ್ಯಗಳ ಟಿಕೆಟ್ ಮಾರಾಟದಿಂದಲೇ 20-25 ಕೋಟಿ ರೂ. ಆದಾಯ ಗಳಿಸುತ್ತಿದ್ದರೆ, ಇತರ ತಂಡಗಳಿಗೆ 15-20 ಕೋಟಿ ರೂ. ಆದಾಯ ಸಿಗುತ್ತಿತ್ತು. ಪಂದ್ಯದ ವೇಳೆ ಕ್ರೀಡಾಂಗಣದೊಳಗಿನ ಪ್ರಾಯೋಜಕತ್ವದಿಂದಲೂ ತಂಡಗಳಿಗೆ ಆದಾಯ ಸಿಗುತಿತ್ತು.

ಬಿಸಿಸಿಐನಿಂದಲೂ ಪಾಲು ಸಿಗಲಿದೆ: ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವದ ಮೊತ್ತವೂ ಈ ಬಾರಿ 222 ಕೋಟಿ ರೂ.ಗೆ ಅಂದರೆ ಹಿಂದಿಗಿಂತ ಸುಮಾರು ಅರ್ಧಮೊತ್ತಕ್ಕೆ ಇಳಿಕೆಯಾಗಿದೆ. ಈ ಪೈಕಿ ಅರ್ಧದಷ್ಟು ಮೊತ್ತ 8 ತಂಡಗಳಿಗೆ ಹಂಚಿಕೆಯಾಗಲಿದೆ. ಪ್ರಸಾರ ಹಕ್ಕು ಸೇರಿ ಬಿಸಿಸಿಐ, ಐಪಿಎಲ್​ನಿಂದ ಗಳಿಸುವ ಒಟ್ಟಾರೆ ಆದಾಯದಲ್ಲಿ ಶೇ. 50 ಭಾಗ ತಂಡಗಳಿಗೆ ಹಂಚಿಕೆಯಾಗಲಿದೆ. ಎಲ್ಲ ರೀತಿಯ ಲೆಕ್ಕಾಚಾರ ಹಾಕಿದರೂ ಈ ಬಾರಿ ತಂಡಗಳು ಲಾಭ ಗಳಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ದುಬೈನಲ್ಲಿ ಗಂಗೂಲಿ ಪರಿಶೀಲನೆ

ನವದೆಹಲಿ: ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯ ಸಿದ್ಧತೆಗಳನ್ನು ಪರಿಶೀಲಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ದುಬೈ ತಲುಪಿದ್ದಾರೆ. ‘ಐಪಿಎಲ್​ಗಾಗಿ ದುಬೈಗೆ ತೆರಳುತ್ತಿದ್ದು, ಕಳೆದ 6 ತಿಂಗಳಲ್ಲಿ ಇದು ನನ್ನ ಮೊದಲ ವಿಮಾನಯಾನ ವಾಗಿದೆ... ಬದುಕು ಈಗ ಬದಲಾಗಿದೆ’ ಎಂದು ಸೌರವ್ ಗಂಗೂಲಿ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಧರಿಸಿ ವಿಶೇಷ ವಿಮಾನವನ್ನು ಏರುವುದಕ್ಕೆ ಮುನ್ನ ಕ್ಲಿಕ್ಕಿಸಿಕೊಂಡಿರುವ ಸೆಲ್ಪಿಯನ್ನೂ ಪೋಸ್ಟ್ ಮಾಡಿದ್ದಾರೆ. ದುಬೈನಲ್ಲಿ ಇನ್ನು ಅವರು 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಲಿದ್ದು, ಸೆ. 23ರಂದು ತವರಿಗೆ ಮರಳುವ ನಿರೀಕ್ಷೆ ಇದೆ.