ನವದೆಹಲಿ: ಮುಂದಿನ ವರ್ಷದ ಐಪಿಎಲ್ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 13ರಿಂದ 15ರ ನಡುವೆ ಹರಾಜು ನಿಗದಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಐಪಿಎಲ್ ಆಡಳಿತ ಮಂಡಳಿ ಹರಾಜು ಪ್ರಕ್ರಿಯೆಯ ದಿನವನ್ನು ಇನ್ನೂ ಅಂತಿಮಗೊಳಿಸಿಲ್ಲ. ಅದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಾರಿ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಆಯೋಜಿಸುವ ಸೂಚನೆಗಳು ಹೆಚ್ಚಿವೆ. ಕಳೆದ ಎರಡು ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಹರಾಜು ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. 2023ರಲ್ಲಿ ಯುಎಇಯ ದುಬೈನಲ್ಲಿ ಮತ್ತು 2024ರಲ್ಲಿ ಸೌದಿ ಅರೇಬಿಯದ ಜಿದ್ದಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿತ್ತು. ಈ ಬಾರಿ ಭಾರತದಲ್ಲೇ ಹರಾಜು ಪ್ರಕ್ರಿಯೆಯನ್ನು ನಡೆಸಲು ಫ್ರಾಂಚೈಸಿಗಳೂ ಸಹಮತ ವ್ಯಕ್ತಪಡಿಸಿವೆ ಎನ್ನಲಾಗಿದೆ.
ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 15ರ ಗಡುವನ್ನು ಬಿಸಿಸಿಐ ನಿಗದಿಪಡಿಸಿದೆ. ಯಾವೆಲ್ಲ ಆಟಗಾರರನ್ನು ರಿಲೀಸ್ ಮಾಡಲಾಗುವುದು ಎಂದು ಫ್ರಾಂಚೈಸಿಗಳು ವಿವರಣೆ ಸಲ್ಲಿಸಬೇಕು.
ಕಳೆದ ಆವೃತ್ತಿಯಲ್ಲಿ ಕೊನೇ 2 ಸ್ಥಾನಗಳನ್ನು ಪಡೆದ ಚೆನ್ನೈ ಸೂಪರ್ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೆ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿವೆ ಎನ್ನಲಾಗಿದೆ. ಸಿಎಸ್ಕೆ ತಂಡ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್ ಮತ್ತು ಡೆವೋನ್ ಕಾನ್ವೇ ಅವರನ್ನು ರಿಲೀಸ್ ಮಾಡಲು ಈಗಾಗಲೆ ನಿರ್ಧರಿಸಿವೆ ಎನ್ನಲಾಗಿದೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಐಪಿಎಲ್ನಿಂದ ನಿವೃತ್ತಿ ಹೊಂದಿರುವುದರಿಂದ ಸಿಎಸ್ಕೆ ತಂಡ ಅವರ ಸಂಭಾವನೆಯ 9.75 ಕೋಟಿ ರೂ. ಅನ್ನು ಹರಾಜಿನಲ್ಲಿ ಬಳಸಿಕೊಳ್ಳುವ ಅನುಕೂಲವನ್ನೂ ಹೊಂದಿದೆ.
ರಾಜಸ್ಥಾನ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ರನ್ನು ರಿಲೀಸ್ ಮಾಡುವುದು ಅಥವಾ ಅದಕ್ಕೆ ಮೊದಲೇ ಬೇರೆ ತಂಡಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜತೆಗೆ ಶ್ರೀಲಂಕಾದ ಸ್ಪಿನ್ನರ್ಗಳಾದ ವಾನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣರನ್ನೂ ಬಿಡುಗಡೆ ಮಾಡಲು ಬಯಸಿದೆ. ಆದರೆ ಅದಕ್ಕೆ ಮುನ್ನ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ತಂಡದ ಮುಖ್ಯ ಕೋಚ್ ಆಗಿ ಮರಳಿದರೆ ಆಗ ಯೋಜನೆ ಬದಲಾಗಬಹುದು ಎನ್ನಲಾಗುತ್ತಿದೆ.
ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ ರೂ.), ರಸಿಕ್ ಸಲಾಂ ದಾರ್ (6 ಕೋಟಿ ರೂ.), ಟಿಮ್ ಸೀರ್ಟ್ (2 ಕೋಟಿ ರೂ.), ನುವಾನ್ ತುಷಾರ (1.60 ಕೋಟಿ ರೂ.), ಸ್ವಪ್ನಿಲ್ ಸಿಂಗ್ (50 ಲಕ್ಷ ರೂ.), ಲುಂಗಿ ಎನ್ಗಿಡಿ (1 ಕೋಟಿ ರೂ.), ಮೋಹಿತ್ ರಾಥಿ (30 ಲಕ್ಷ ರೂ.) ಮತ್ತು ಅಭಿನಂದನ್ ಸಿಂಗ್ರನ್ನು (30 ಲಕ್ಷ ರೂ.) ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸ್ಟಾರ್ಕ್, ವೆಂಕಿ ರಿಲೀಸ್?
ಐಪಿಎಲ್ನ ಕೆಲ ಪ್ರಮುಖ ಆಟಗಾರರಾದ ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್ (ಡೆಲ್ಲಿ), ವೇಗಿ ಮಯಾಂಕ್ ಯಾದವ್, ಡೇವಿಡ್ ಮಿಲ್ಲರ್ (ಲಖನೌ) ಹೊಸ ತಂಡಗಳಿಗೆ ಹೋಗಲು ಬಯಸಿದ್ದಾರೆ ಎನ್ನಲಾಗಿದೆ. ಇನ್ನು, ಕೆಕೆಆರ್ ತಂಡ ಕಳೆದ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂ.ಗೆ ಮರಳಿ ಪಡೆದುಕೊಂಡ ಆಲ್ರೌಂಡರ್ ವೆಂಕಟೇಶ್ ಅಯ್ಯರ್ರನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ವೆಂಕಿ ಟೂರ್ನಿ ಇತಿಹಾಸದ 3ನೇ ಗರಿಷ್ಠ ಮೊತ್ತಕ್ಕೆ ಬಿಕರಿಯಾಗಿದ್ದರು. ಆದರೆ ಸಮರ್ಥ ನಿರ್ವಹಣೆ ತೋರದೆ ನಿರಾಸೆ ಮೂಡಿಸಿದ್ದರು. ಇನ್ನು ಗಾಯದ ಸಮಸ್ಯೆಯಿಂದಾಗಿ ಕಳೆದ ಐಪಿಎಲ್ನಿಂದ ಹೊರಗುಳಿದಿದ್ದ ಆಸ್ಟ್ರೆಲಿಯಾದ ಯುವ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಈ ಬಾರಿ ಹರಾಜಿಗೆ ಮರಳಲಿದ್ದಾರೆ ಎನ್ನಲಾಗಿದೆ.