ಬೆಂಗಳೂರು: ಚೊಚ್ಚಲ ಆವೃತ್ತಿಯಿಂದಲೂ ಹಲವಾರು ಹೊಸತನ, ವಿಶೇಷತೆಗಳಿಂದ ಗಮನಸೆಳೆದ ಟೂರ್ನಿ ಐಪಿಎಲ್. ವಿಶ್ವದ ಇತರೆಲ್ಲ ಟಿ20 ಲೀಗ್ಗಳಿಂದಲೂ ಭಿನ್ನತೆಯನ್ನೂ ಕಾಯ್ದುಕೊಳ್ಳುತ್ತ ಬಂದಿದೆ. ಇದೇ ಐಪಿಎಲ್ಅನ್ನು ಉಳಿದೆಲ್ಲ ಟೂರ್ನಿಗಳಿಗಿಂತ ವಿಶೇಷವಾಗಿಸಿದೆ. ಈ ಸಲ 18ನೇ ಆವೃತ್ತಿಯಲ್ಲೂ ಕೆಲ ವಿಶಿಷ್ಟತೆ, ಹೊಸತನ, ಹೊಸ ನಿಯಮಾವಳಿಗಳಿಂದ ಕೂಡಿದೆ. ಅಂಥ ಕೆಲ ಪ್ರಮುಖಾಂಶಗಳ ಸಂಕ್ಷಿಪ್ತ ವಿವರ ಇಲ್ಲಿದೆ...
ಒಂದಾದ ಗೆಳೆಯರು ಮತ್ತು ವೈರಿಗಳು!
ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಕಿರಿಯರ ಕ್ರಿಕೆಟ್ನಿಂದಲೂ ಜತೆಯಾಗಿ ಆಡುತ್ತ ಬಂದವರು. ಕರ್ನಾಟಕ ಮತ್ತು ಭಾರತ ತಂಡದಲ್ಲೂ ಜತೆಯಾಗಿ ಆಡಿದ್ದರು. ಐಪಿಎಲ್ನಲ್ಲೂ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಜತೆಯಾಗಿ ಆಡಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿರುವುದರಿಂದ, ಮತ್ತೊಮ್ಮೆ ಜತೆಯಾಗಿ ಆಡುವ ಅವಕಾಶ ಪಡೆದಿದ್ದಾರೆ. ಇನ್ನು ಬರೋಡ ತಂಡದಲ್ಲಿ ಈ ಹಿಂದೆ ಜತೆಯಾಗಿ ಆಡಿದ್ದ ಕೃನಾಲ್ ಪಾಂಡ್ಯ ಮತ್ತು ಸ್ವಪ್ನಿಲ್ ಸಿಂಗ್ ನಂತರ ವೈರಿಗಳಾಗಿದ್ದರು. ಇದಕ್ಕೆ ಕಾರಣ, ಕೃನಾಲ್ ಬರೋಡ ನಾಯಕರಾದಾಗ ಸ್ವಪ್ನಿಲ್ಗೆ ಆಡುವ ಅವಕಾಶ ತಪ್ಪಿಸಿದ್ದು. ಇದರಿಂದ ಸ್ವಪ್ನಿಲ್ ದೇಶೀಯ ಕ್ರಿಕೆಟ್ನಲ್ಲಿ ಉತ್ತರಾಖಂಡಕ್ಕೆ ವಲಸೆ ಹೋಗಿ ಮರುಹುಟ್ಟು ಪಡೆದುಕೊಳ್ಳುವ ಮೂಲಕ ಆರ್ಸಿಬಿ ಪರ ಆಡುವ ಅವಕಾಶ ಪಡೆದಿದ್ದರು. ಕಳೆದ ಆವೃತ್ತಿಯ ಅತ್ಯುತ್ತಮ ನಿರ್ವಹಣೆಯಿಂದ ತಂಡದಲ್ಲಿ ರಿಟೇನ್ ಆಗಿದ್ದರು. ಈ ನಡುವೆ ಮೆಗಾ ಹರಾಜಿನಲ್ಲಿ ಕೃನಾಲ್ ಕೂಡ ಆರ್ಸಿಬಿಗೆ ಬಂದಿದ್ದಾರೆ. ಇದರಿಂದಾಗಿ ಇವರಿಬ್ಬರು ಈ ಬಾರಿ ತಮ್ಮ ವೈರ ಮರೆತು ಆರ್ಸಿಬಿ ಗೆಲುವಿಗಾಗಿ ಒಂದಾಗಬೇಕಿದೆ.
ಸ್ಥಳಿಯರ ಕಡೆಗಣನೆ
ಇತ್ತೀಚೆಗಿನ ವರ್ಷಗಳಲ್ಲಿ ಆರ್ಸಿಬಿ ತಂಡದಲ್ಲಿ ಕನ್ನಡಿಗರ ಕಡೆಗಣನೆಯಾಗುತ್ತಿರುವ ಬಗ್ಗೆ ಅಭಿಮಾನಿಗಳು ದೂರುತ್ತಲೇ ಇರುತ್ತಾರೆ. ಈ ಸಲವೂ ಇಬ್ಬರು (ಪಡಿಕ್ಕಲ್, ಭಾಂಡಗೆ) ಕನ್ನಡಿಗರು ತಂಡದಲ್ಲಿದ್ದರೂ ಅವರಿಗೆ ಅಡುವ 11ರ ಬಳಗದಲ್ಲಿ ಸ್ಥಾನ ಖಾತ್ರಿ ಇಲ್ಲ. ಆದರೆ ಐಪಿಎಲ್ನಲ್ಲಿ ಸ್ಥಳಿಯರ ಕಡೆಗಣನೆಯ ಕೂಗು ಆರ್ಸಿಬಿಗೆ ಸೀಮಿತವಲ್ಲ. ಈ ಬಾರಿ ಕೆಕೆಆರ್, ಗುಜರಾತ್ ಮತ್ತು ಡೆಲ್ಲಿ ತಂಡಗಳಲ್ಲಿ ತವರು ರಾಜ್ಯದ ಒಬ್ಬ ಆಟಗಾರ ಕೂಡ ಇಲ್ಲ! ಸನ್ರೈಸರ್ಸ್ (ನಿತೀಶ್ ರೆಡ್ಡಿ), ರಾಜಸ್ಥಾನ (ಕುನಾಲ್ ಸಿಂಗ್) ತಂಡಗಳಲ್ಲಿ ಒಬ್ಬರಷ್ಟೇ ತವರು ರಾಜ್ಯದ ಕ್ರಿಕೆಟಿಗರಿದ್ದಾರೆ. ಪಂಜಾಬ್ ತಂಡ ಗರಿಷ್ಠ ಐವರು (ಅರ್ಷದೀಪ್, ಪ್ರಭ್ಸಿಮ್ರನ್, ಹರ್ನೂರ್, ನೇಹಲ್, ಹರ್ಪ್ರೀತ್) ತವರು ರಾಜ್ಯದ ಆಟಗಾರರನ್ನು ಹೊಂದಿದೆ. ಸಿಎಸ್ಕೆ ತಂಡದಲ್ಲಿ ನಾಲ್ವರು (ಅಶ್ವಿನ್, ವಿಜಯ್ ಶಂಕರ್, ಸಿದ್ಧಾರ್ಥ್, ಗುರುಜಪ್) ತಮಿಳುನಾಡಿನ ಕ್ರಿಕಟಿಗರಿದ್ದರೆ, ಮುಂಬೈ ತಂಡದಲ್ಲಿ ಮೂವರು (ರೋಹಿತ್, ಸೂರ್ಯಕುಮಾರ್, ಅರ್ಜುನ್) ಮಹಾರಾಷ್ಟ್ರ ಆಟಗಾರರಿದ್ದಾರೆ. ಲಖನೌ ತಂಡದಲ್ಲಿ ಇಬ್ಬರಷ್ಟೇ (ಮೊಹ್ಸಿನ್, ಜುಯಲ್) ಯುಪಿಯ ದೇಶೀಯ ಕ್ರಿಕೆಟಿಗರಿದ್ದಾರೆ.
ಹೋಮ್ ಕಮಿಂಗ್
ಈ ಸಲ ಮೆಗಾ ಹರಾಜಿನ ಬಳಿಕ ಕೆಲ ಆಟಗಾರರು ಐಪಿಎಲ್ನಲ್ಲಿ ತಮ್ಮ ಮೂಲತಂಡ ಅಥವಾ ತಮ್ಮ ವೃತ್ತೀಜಿವನಕ್ಕೆ ಹೊಸ ತಿರುವು ನೀಡಿದ ತಂಡಕ್ಕೆ ಮರಳಿದ್ದಾರೆ. ಅವರಲ್ಲಿ ಆರ್. ಅಶ್ವಿನ್ ಪ್ರಮುಖರು. ಸಿಎಸ್ಕೆ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿ ವೃತ್ತೀಜಿವನದ ಉತ್ತುಂಗಕ್ಕೆ ಏರಿದ ಅಶ್ವಿನ್ ಇದೀಗ 10 ವರ್ಷಗಳ ಬಳಿಕ ಅದೇ ತಂಡಕ್ಕೆ ಮರಳಿದ್ದಾರೆ. ಐಪಿಎಲ್ನಲ್ಲಿ 2014ರಿಂದ 2020ರವರೆಗೆ ಪಂಜಾಬ್ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಇದೀಗ 5 ವರ್ಷಗಳ ಬಳಿಕ ಮತ್ತೆ ಅದೇ ತಂಡ ಸೇರಿದ್ದಾರೆ. 2020ರಲ್ಲಿ ಮುಂಬೈ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ವೇಗಿ ಟ್ರೆಂಟ್ ಬೌಲ್ಟ್, 4 ವರ್ಷಗಳ ಬಳಿಕ ಮತ್ತೆ ಅದೇ ತಂಡಕ್ಕೆ ಮರಳಿದ್ದಾರೆ. 2018ರಲ್ಲಿ ರಾಜಸ್ಥಾನ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿ ಮಿಂಚಿದ್ದ ಜೋಫ್ರಾ ಆರ್ಚರ್, 5 ವರ್ಷಗಳ ಬಳಿಕ ಮತ್ತೆ ಅದೇ ತಂಡಕ್ಕೆ ಮರಳಿ ವೃತ್ತೀಜಿವನದ ಏಳ್ಗೆಯ ನಿರೀಕ್ಷೆಯಲ್ಲಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ 2020, 2021ರ ಐಪಿಎಲ್ನಲ್ಲಿ ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರ ಹೊರತಾಗಿಯೂ ತಂಡದಿಂದ ರಿಲೀಸ್ ಆಗಿದ್ದ ಪಡಿಕ್ಕಲ್ ಇದೀಗ 3 ವರ್ಷಗಳ ಬಳಿಕ ಮತ್ತೆ ಮೂಲತಂಡಕ್ಕೆ ಮರಳಿದ್ದಾರೆ. 2020-21ರ ಐಪಿಎಲ್ನಲ್ಲಿ ಸಿಎಸ್ಕೆ ಪರ ಎಂಎಸ್ ಧೋನಿ ಗರಡಿಯಲ್ಲಿ ಉತ್ತಮ ಯಶಸ್ಸು ಕಂಡಿದ್ದ ಸ್ಯಾಮ್ ಕರ್ರನ್, ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಗೆಲುವಿನ ರೂವಾರಿಯಾಗಿ ಮಿಂಚಿದ್ದರು. ಆದರೆ ಇತ್ತೀಚೆಗೆ ಫಾಮ್ರ್ ಕೊರತೆಯಿಂದ ಇಂಗ್ಲೆಂಡ್ನ ಮೂರೂ ಪ್ರಕಾರದ ತಂಡದಿಂದ ಹೊರಗಿರುವ ಕರ್ರನ್, 4 ವರ್ಷಗಳ ಬಳಿಕ ಮತ್ತೆ ಸಿಎಸ್ಕೆ ಪರ ಆಡುವ ಮೂಲಕ ವೃತ್ತೀಜಿವನದ ಮರುಹುಟ್ಟಿನ ನಿರೀಕ್ಷೆಯಲ್ಲಿದ್ದಾರೆ.
ಅತಿ ಹಿರಿಯ, ಕಿರಿಯ
43 ವರ್ಷದ ಎಂಎಸ್ ಧೋನಿ ಈ ಸಲ ಐಪಿಎಲ್ನಲ್ಲಿ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರರೆನಿಸಿದ್ದಾರೆ. ಇದೇ ವೇಳೆ ರಾಜಸ್ಥಾನ ತಂಡದಲ್ಲಿರುವ 12 ವರ್ಷದ ವೈಭವ್ ಸೂರ್ಯವಂಶಿ ಅತಿ ಕಿರಿಯ ಆಟಗಾರರೆನಿಸಿದ್ದಾರೆ. ಈ ಸಲಯ ಐಪಿಎಲ್ ಶುರುವಾದ ಐದೇ ದಿನಗಳಲ್ಲಿ ಅವರು 14ನೇ ವಯಸ್ಸಿಗೂ ಕಾಲಿಡಲಿದ್ದಾರೆ. ಟೂರ್ನಿಯಲ್ಲಿ ಯಾವ ಪಂದ್ಯ ಆಡುವ ಅವಕಾಶ ಪಡೆದರೂ ಅವರು ಐಪಿಎಲ್ನಲ್ಲಿ ಆಡಿದ ಅತಿ ಕಿರಯ ಎನಿಸಿರುವ ಪ್ರಯಾಸ್ ರಾಯ್ ಬರ್ಮನ್ (16 ವರ್ಷ) ದಾಖಲೆ ಮುರಿಯಲಿದ್ದಾರೆ.
ದ್ರಾವಿಡ್ ಮತ್ತೆ ಐಪಿಎಲ್ ಕೋಚ್
2024ರಿಂದ 2015ರವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಐಪಿಎಲ್ನಿಂದಲೇ ಕೋಚಿಂಗ್ ಆರಂಭಿಸಿದವರು ರಾಹುಲ್ ದ್ರಾವಿಡ್. ನಂತರ ಭಾರತ ಎ, ಕಿರಿಯರ ತಂಡ, ಟೀಮ್ ಇಂಡಿಯಾಗೆ ಕೋಚ್ ಆಗಿ ಅಪಾರ ಯಶಸ್ಸು ಕಂಡರು. ಕಿರಿಯರ-ಸೀನಿಯರ್ ತಂಡಗಳ ಕೋಚ್ ಆಗಿ ಐಸಿಸಿ ಟ್ರೋಫಿಯನ್ನೂ ಗೆದ್ದ ಅವರು ಈ ಬಾರಿ ಮತ್ತೆ ಕೋಚ್ ಆಗಿ ಐಪಿಎಲ್ಗೆ ಮರಳಿದ್ದಾರೆ. ಕಾಲಿನ ಗಾಯದ ನಡುವೆಯೂ ಗಾಲಿಕುರ್ಚಿಯನ್ನು ಬಳಸಿ ರಾಜಸ್ಥನ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಐಪಿಎಲ್ ಟ್ರೋಫಿಯನ್ನೂ ಗೆದ್ದರೆ ಅವರ ಕೋಚಿಂಗ್ ವೃತ್ತೀಜಿವನ ಪರಿಪೂರ್ಣವೆನಿಸಲಿದೆ.
ಐಸಿಸಿ ನೀತಿಸಂಹಿತೆ
ಐಪಿಎಲ್ನಲ್ಲಿ ಈ ಬಾರಿ ಆಟಗಾರರ ಶಿಸ್ತು-ನಿಯಮ ಪಾಲನೆಗಳಿಗೆ ಸಂಬಂಧಿಸಿದಂತೆ ಐಸಿಸಿ ನೀತಿಸಂಹಿತೆಯೇ ಬಳಕೆಯಾಗಲಿದೆ. ಬಿಸಿಸಿಐ ಈ ಹಿಂದಿನ 17 ಆವೃತ್ತಿಗಳಲ್ಲೂ ಐಪಿಎಲ್ಗೆ ಅದರದೇ ಆದ ಪ್ರತ್ಯೇಕ ನೀತಿಸಂಹಿತೆಯನ್ನು ಅನುಸರಿಸಿತ್ತು. ಆದರೆ ಈ ಸಲದಿಂದ ಐಪಿಎಲ್ನಲ್ಲೂ ಐಸಿಸಿ ನೀತಿಸಂಹಿತೆಗಳೇ ಜಾರಿಯಾಗಲಿವೆ.
ಬಾಂಗ್ಲಾ ಕ್ರಿಕೆಟಿಗರಿಲ್ಲ
ಈ ಬಾರಿ ಐಪಿಎಲ್ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರಿಲ್ಲ. 10ಕ್ಕೂ ಅಧಿಕ ಬಾಂಗ್ಲಾ ಕ್ರಿಕೆಟಿಗರು ಮೆಗಾ ಹರಾಜಿಗೆ ಬಂದಿದ್ದರೂ ಯಾರೊಬ್ಬರೂ ಬಿಕರಿಯಾಗಲಿಲ್ಲ. ಪಾಕಿಸ್ತಾನದ ನಂತರ ಐಪಿಎಲ್ನಿಂದ ಹೊರಗುಳಿರುವ 2ನೇ ಟೆಸ್ಟ್ ಮಾನ್ಯತೆಯ ದೇಶವೆನಿಸಿದೆ ಬಾಂಗ್ಲಾ. ಇತ್ತೀಚೆಗೆ ಭಾರತ-ಬಾಂಗ್ಲಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿರುವುದು ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಆಗಿರುವ ದೌರ್ಜನ್ಯ, ಐಪಿಎಲ್ನಿಂದ ಪರೋಕ್ಷ ನಿಷೇಧಕ್ಕೊಳಗಾಗಲು ಪ್ರಮುಖ ಕಾರಣವೆನಿಸಿದೆ.
ಪ್ರತಿ ಪಂದ್ಯಕ್ಕೆ ಪ್ರತ್ಯೇಕ ಸಂಭಾವನೆ
ಈ ಸಲದ ಐಪಿಎಲ್ನಲ್ಲಿ ಪ್ರತಿ ಪಂದ್ಯಕ್ಕೆ ಆಟಗಾರರು, ರಿಟೇನ್ ಅಥವಾ ಹರಾಜಿನಲ್ಲಿ ನಿಗದಿಯಾಗಿರುವ ಮೊತ್ತವಲ್ಲದೆ, ಪ್ರತ್ಯೇಕವಾಗಿ ಪಂದ್ಯ ಸಂಭಾವನೆಯನ್ನೂ ಪಡೆಯಲಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಸಹಿತ ಪಂದ್ಯ ಆಡುವ ತಂಡವೊಂದರ ಎಲ್ಲ 12 ಆಟಗಾರರೂ ತಲಾ 7.5 ಲಕ್ಷ ರೂ. ಪಂದ್ಯ ಸಂಭಾವನೆ ಪಡೆಯಲಿದ್ದಾರೆ. ಇದರಿಂದ ಬಿಸಿಸಿಐ ಪ್ರತಿ ಪಂದ್ಯಕ್ಕೆ ತಂಡವೊಂದರ ಆಟಗಾರರಿಗೆ ಒಟ್ಟು 90 ಲಕ್ಷ ರೂ. ವೇತನ ನೀಡಲಿದೆ. 14 ಲೀಗ್ ಪಂದ್ಯಗಳಿಗೆ ಒಟ್ಟು 12.6 ಕೋಟಿ ರೂ. ವೇತನ ವಿತರಿಸಲಿದೆ. ಈ ಸಲ ಎಲ್ಲ 14 ಲೀಗ್ ಪಂದ್ಯಗಳಲ್ಲಿ ಆಡುವ ಆಟಗಾರ ಒಟ್ಟು 1.05 ಕೋಟಿ ರೂ. ಹೆಚ್ಚುವರಿ ಸಂಭಾವನೆ ಗಳಿಸಲಿದ್ದಾನೆ.
6 ಕ್ರಿಕೆಟಿಗರಿಗೆ 20 ಪ್ಲಸ್ ಸಂಭಾವನೆ
ಈ ಸಲದ ಐಪಿಎಲ್ನಲ್ಲಿ ದಾಖಲೆಯ 6 ಕ್ರಿಕೆಟಿಗರು ಟೂರ್ನಿಯ ಬಹುಮಾನ ಮೊತ್ತಕ್ಕಿಂತಲೂ (20 ಕೋಟಿ ರೂ) ಅಧಿಕ ಮೊತ್ತದ ಸಂಭಾವನೆ ಪಡೆಯಲಿದ್ದಾರೆ. ಅವರೆಂದರೆ ರಿಷಭ್ ಪಂತ್ (27 ಕೋಟಿ ರೂ), ಶ್ರೇಯಸ್ ಅಯ್ಯರ್ (26.75 ಕೋಟಿ ರೂ), ವೆಂಕಟೇಶ್ ಅಯ್ಯರ್ (23.75 ಕೋಟಿ ರೂ), ಹೆನ್ರಿಕ್ ಕ್ಲಾಸೆನ್ (23 ಕೋಟಿ ರೂ), ವಿರಾಟ್ ಕೊಹ್ಲಿ (21 ಕೋಟಿ ರೂ), ನಿಕೋಲಸ್ ಪೂರನ್ (21 ಕೋಟಿ ರೂ). ಇನ್ನು 9 ಆಟಗಾರರು ತಲಾ 18 ಕೋಟಿ ರೂ. (ಕಮ್ಮಿನ್ಸ್, ರಶೀದ್, ಜೈಸ್ವಾಲ್, ಸ್ಯಾಮ್ಸನ್, ಜಡೇಜಾ, ಋತುರಾಜ್, ಬುಮ್ರಾ, ಚಾಹಲ್, ಅರ್ಷದೀಪ್) ಸಂಭಾವನೆ ಪಡೆಯಲಿದ್ದಾರೆ.
ವೇಗಿಗಳ ಆವರ್ತನ
ಭಾರತ ಪರ ಆಡಿರುವ ಮೂವರು ಪ್ರಮುಖ ವೇಗಿಗಳಾದ ಮೊಹಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಮೊಹಮದ್ ಸಿರಾಜ್ ಈ ಬಾರಿ ಐಪಿಎಲ್ನಲ್ಲಿ ತಮ್ಮ ತಂಡಗಳ ಆವರ್ತನ ಮಾಡಿಕೊಂಡಿದ್ದಾರೆ. ಗುಜರಾತ್ ತಂಡದಲ್ಲಿದ್ದ ಶಮಿ ಸನ್ರೈಸರ್ಸ್ಗೆ ಹೋಗಿದ್ದರೆ, ಸನ್ರೈಸರ್ಸ್ನಲ್ಲಿದ್ದ ಭುವನೇಶ್ವರ್ ಆರ್ಸಿಬಿ ಸೇರಿದ್ದಾರೆ. ಆರ್ಸಿಬಿ ತಂಡದಲ್ಲಿದ್ದ ಸಿರಾಜ್, ಗುಜರಾತ್ಗೆ ತೆರಳಿದ್ದಾರೆ. ಇದರಲ್ಲಿ ಯಾರ ಬದಲಾವಣೆ ಲಾಭದಾಯಕ ಎಂದು ಕಾದುನೋಡಬೇಕಿದೆ.