Vaibhav suryavanshi : ಪ್ರಸಕ್ತ ಐಪಿಎಲ್ ಟೂರ್ನಿಯ ಭಾಗವಾಗಿ ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಇತಿಹಾಸ ಬರೆದಿದ್ದಾರೆ.
ತಮ್ಮ ಅದ್ಭುತ ಹೊಡೆತಗಳಿಂದ ಇಡೀ ಕ್ರೀಡಾಂಗಣದಲ್ಲಿ ತುಂಬಿದ್ದ ಜನರನ್ನು ವೈಭವ್ ರಂಜಿಸಿದರು. ಇದು ಐಪಿಎಲ್ ಇತಿಹಾಸದಲ್ಲೇ ಎರಡನೇ ವೇಗದ ಶತಕವಾಗಿದೆ. ಈ ಮೊದಲು ಕ್ರಿಸ್ ಗೇಲ್ ಅವರು ಕೇವಲ 30 ಎಸೆತದಲ್ಲಿ ಶತಕ ಬಾರಿಸಿದ್ದಾರೆ. ಇದೀಗ ವೈಭವ್ 35 ಎಸೆತಗಳಲ್ಲಿ ಶತಕ ಬಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ನಂತರ ತಮ್ಮ ಮೊದಲ ಶತಕದ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ, ಈ ಶತಕ ಗಳಿಸಿದ್ದರಿಂದ ನನಗೆ ವಿಶೇಷ ಅನುಭವ ಸಿಕ್ಕಿದೆ ಎಂದು ವೈಭವ್ ಹೇಳಿದರು. ಇದು ಐಪಿಎಲ್‌ನಲ್ಲಿ ನನ್ನ ಮೊದಲ ಶತಕ ಮತ್ತು ಮೂರನೇ ಇನ್ನಿಂಗ್ಸ್ ಎಂದು ಹೇಳಿದರು. ಐಪಿಎಲ್ಗೂ ಮುನ್ನ ಸಾಕಷ್ಟು ಅಭ್ಯಾಸ ಮಾಡಿದ್ದೆ ಮತ್ತು ಈಗ ಫಲಿತಾಂಶಗಳು ಕಾಣುತ್ತಿವೆ ಎಂದರು.
ಈ ಪಂದ್ಯದಲ್ಲಿ ಜೈಸ್ವಾಲ್ ಕ್ರೀಸ್‌ನಲ್ಲಿದ್ದಾಗ ಬ್ಯಾಟಿಂಗ್ ಮಾಡಿದೆ ಮತ್ತು ಏನು ಮಾಡಬೇಕೆಂದು ಅವರನ್ನು ಕೇಳುತ್ತಿದ್ದೆ. ಜೈಸ್ವಾಲ್ ಅವರು ನನ್ನಲ್ಲಿ ಸಕಾರಾತ್ಮಕತೆಯನ್ನು ತುಂಬಿದರು. ಐಪಿಎಲ್‌ನಲ್ಲಿ ಶತಕ ಗಳಿಸುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ ಎಂದು ಹೇಳಿದರು. ಆಟದ ಮೇಲೆ ಸಂಪೂರ್ಣವಾಗಿ ಗಮನ ಹರಿಸುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಪಂದ್ಯದ ವಿಚಾರಕ್ಕೆ ಬಂದರೆ, ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ನಾಯಕ ಶುಭಮಾನ್ ಗಿಲ್ (84 ರನ್, 50 ಎಸೆತ, 5 ಬೌಂಡರಿ, 4 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ಸ್ಲಾಗ್ ಓವರ್‌ಗಳಲ್ಲಿ ಜೋಸ್ ಬಟ್ಲರ್ (50* ರನ್, 26 ಎಸೆತ, 3 ಬೌಂಡರಿ, 4 ಸಿಕ್ಸರ್) ಬಿರುಸಿನಾಟದ ಬಲದಿಂದ 4 ವಿಕೆಟ್‌ಗೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಬಿಹಾರದ 14 ವರ್ಷದ ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ (70* ರನ್, 40 ಎಸೆತ, 9 ಬೌಂಡರಿ, 2 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ ರಾಜಸ್ಥಾನ ತಂಡ 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್‌ಗಳಿಸಿ ಗೆದ್ದು ಬೀಗಿತು. 3 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಪರಾಗ್ 25 ಎಸೆತ ಇರುವಂತೆಯೇ ಗೆಲುವು ಸಾರಿದರು. (ಏಜೆನ್ಸೀಸ್)