ಕ್ರೀಡೆ

IPL-2025: ಈ ಸಲ ಐಪಿಎಲ್​ನಲ್ಲಿ ಬೌಲರ್​ಗಳಿಗೆ ಬಲ! ಹೊಸ ನಿಯಮಗಳಿಂದ ಹೆಚ್ಚಲಿದೆ ಸ್ಪರ್ಧಾತ್ಮಕತೆ!

ನವದೆಹಲಿ: ಐಪಿಎಲ್​ನಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಜಾರಿಯಾದ ಬಳಿಕ ಬ್ಯಾಟರ್​ಗಳ ಅಬ್ಬರ ಜೋರಾಗಿದ್ದು, ಕಳೆದ ಆವೃತ್ತಿಯಲ್ಲಿ ರನ್​ ಸುರಿಮಳೆಯೇ ಹರಿದಿತ್ತು. ಹೀಗಾಗಿ ಈ ಬಾರಿ 18ನೇ ಆವೃತ್ತಿಗೆ ಪೂರ್ವಭಾವಿಯಾಗಿ ಬಿಸಿಸಿಐ, ಬೌಲರ್​ಗಳಿಗೂ ಬಲ ತುಂಬುವಂಥ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ಮೂಲಕ ಈ ಸಲದ ಐಪಿಎಲ್​ನಲ್ಲಿ ಚೆಂಡು&ಬ್ಯಾಟ್​ ನಡುವಿನ ಸ್ಪರ್ಧಾತ್ಮಕತೆ ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದರಿಂದಾಗಿ, ಶನಿವಾರ ಶುರುವಾಗಲಿರುವ ಟೂರ್ನಿಯ ರೋಚಕತೆಯೂ ಹೆಚ್ಚಾಗಿದೆ.

ಬೌಲರ್​ಗಳು ಚೆಂಡಿನ ಮೇಲೆ ಎಂಜಲು ಹಚ್ಚಿ ಶೈನ್​ ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದನ್ನು ಕರೊನಾ ಕಾಲದಲ್ಲಿ ಐಸಿಸಿ ನಿಷೇಧಿಸಲಾಗಿತ್ತು. ಅದನ್ನು ಈ ಬಾರಿ ತೆರವುಗೊಳಿಸಲಾಗಿದೆ. ಜತೆಗೆ ಅಹರ್ನಿಶಿ ಪಂದ್ಯಗಳಲ್ಲಿ 2ನೇ ಇನಿಂಗ್ಸ್​ ವೇಳೆ ಇಬ್ಬನಿ ಕಾಡುವುದರಿಂದ ಬೌಲರ್​ಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪರದಾಡುತ್ತಿದ್ದರು ಮತ್ತು ಚೇಸಿಂಗ್​ ತಂಡಗಳಿಗೆ ಅನುಕೂಲವಾಗುತಿತ್ತು. ಇದನ್ನು ತಪ್ಪಿಸಲು ಈ ಬಾರಿ 2ನೇ ಇನಿಂಗ್ಸ್​ನಲ್ಲಿ 11ನೇ ಓವರ್​ ಬಳಿಕ 2ನೇ ಹೊಸ ಚೆಂಡು ನೀಡಲಾಗುತ್ತದೆ. ಇದರಿಂದಾಗಿ ಬೌಲರ್​ಗಳ ತಾಪತ್ರಯ ತಪ್ಪಲಿದ್ದು, ಬ್ಯಾಟರ್​ಗಳ ಮೇಲೆ ಕಡಿವಾಣ ಹಾಕಲು ಬೌಲರ್​ಗಳಿಗೆ ಹೊಸ ಬಲ ಸಿಕ್ಕಂತಾಗಿದೆ. 2ನೇ ಹೊಸ ಚೆಂಡಿನ ಬಳಕೆಯಿಂದಾಗಿ ಟಾಸ್​ ಗೆದ್ದ ತಂಡಕ್ಕೆ ಹೆಚ್ಚಿನ ಲಾಭ ಸಿಗುವುದು ಕೂಡ ತಪ್ಪಲಿದೆ.

ಐಪಿಎಲ್​ 18ನೇ ಆವೃತ್ತಿಗೆ ಪೂರ್ವಭಾವಿಯಾಗಿ ಗುರುವಾರ ಮುಂಬೈನ ಬಿಸಿಸಿಐ ಮುಖ್ಯಕಚೇರಿಯಲ್ಲಿ ನಡೆದ ಎಲ್ಲ 10 ತಂಡಗಳ ನಾಯಕರ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಚೆಂಡಿಗೆ ಎಂಜಲು ಹಚ್ಚುವುದಕ್ಕೆ ನಿಷೇಧ ಹೇರಿರುವುದನ್ನು ತೆರವುಗೊಳಿಸಲು ಬಹುತೇಕ ನಾಯಕರು ಸಮ್ಮತಿ ಸೂಚಿಸಿದರು. ಇದರಿಂದ ಐಪಿಎಲ್​, ಕರೊನಾ ಕಾಲದ ಈ ರ್ನಿಬಂಧ ತೆರವುಗೊಳಿಸಿದ ಮೊದಲ ಪ್ರಮುಖ ಕ್ರಿಕೆಟ್​ ಟೂರ್ನಿ ಎನಿಸಿತು.

ಕರೊನಾ ಹರಡುವುದನ್ನು ತಡೆಯಲು ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಐಸಿಸಿ 2020ರಲ್ಲಿ ಚೆಂಡಿಗೆ ಎಂಜಲು ಹಚ್ಚಿ ಶೈನ್​ ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. 2022ರಲ್ಲಿ ಇದನ್ನು ಶಾಶ್ವತಗೊಳಿಸಲಾಗಿತ್ತು. ಇದೀಗ ಐಪಿಎಲ್​ನಲ್ಲಿ ನಿಷೇಧ ತೆರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಐಸಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಇದನ್ನು ಹಿಂಪಡೆಯಲು ಚಿಂತಿಸಬಹುದೆನಿಸಿದೆ.

ಕಳೆದ ಚಾಂಪಿಯನ್ಸ್​ ಟ್ರೋಫಿಯ ವೇಳೆ ಭಾರತೀಯ ವೇಗಿ ಮೊಹಮದ್​ ಶಮಿ, ಚೆಂಡಿಗೆ ಎಂಜಲು ಹಚ್ಚುವುದನ್ನು ರ್ನಿಬಂಧಿಸಿರುವುದರಿಂದ ಕ್ರಿಕೆಟ್​ ಈಗ ಸಂಪೂರ್ಣವಾಗಿ ಬ್ಯಾಟರ್​ಗಳ ಆಟವೆನಿಸಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇತರ ಕೆಲ ವೇಗಿಗಳಾದ ವೆರ್ನಾನ್​ ಫಿಲಾಂಡರ್​, ಟಿಮ್​ ಸೌಥಿ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದರು.

ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಮುಂದುವರಿಕೆ: ರೋಹಿತ್​ ಶರ್ಮ, ಹಾರ್ದಿಕ್​ ಪಾಂಡ್ಯ ಸಹಿತ ಕೆಲವರು ಇಂಪ್ಯಾಕ್ಟ್​ ಪ್ಲೇಯರ್​ ನಿಯಮದಿಂದ "ಆಲ್ರೌಂಡರ್​ಗಳ ಮಹತ್ವ ಕಡಿಮೆಯಾಗುತ್ತದೆ' ಎಂದು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹೊರತಾಗಿಯೂ, ಈ ಸಲದ ಐಪಿಎಲ್​ನಲ್ಲೂ ಈ ನಿಯಮ ಮುಂದುವರಿಸಲು ನಾಯಕರ ಸಭೆಯಲ್ಲಿ ನಿರ್ಧರಿಸಲಾಯಿತು. ಬಿಸಿಸಿಐ ಈಗಾಗಲೆ 2027ರ ಐಪಿಎಲ್​ವರೆಗೆ ಇದನ್ನು ವಿಸ್ತರಿಸಲು ನಿರ್ಧರಿಸಿತ್ತು. "ಇಂಪ್ಯಾಕ್ಟ್​ ಪ್ಲೇರ್​ ನಿಯಮದಿಂದಾಗಿ ಕೆಲ ಯುವ ಬ್ಯಾಟರ್​&ಬೌಲರ್​ಗಳಿಗೂ ಆಡುವ ಅವಕಾಶ ಲಭಿಸುತ್ತದೆ' ಎಂಬುದು ಬಿಸಿಸಿಐ ಸಮರ್ಥನೆಯಾಗಿದೆ.

ಡಿಆರ್​ಎಸ್​ ವಿಸ್ತರಣೆ

ಅಂಪೈರ್​ ತೀರ್ಪು ಪರಾಮರ್ಶೆ ಪದ್ಧತಿಯ (ಡಿಆರ್​ಎಸ್​) ಬಳಕೆಯನ್ನು ಈ ಬಾರಿ ಎತ್ತರ ಮತ್ತು ಆ್​ಸ್ಟಂಪ್​ ಹೊರಗಿನ ವೈಡ್​ ಎಸೆತಗಳಿಗೂ ಬಳಸಲು ಬಿಸಿಸಿಐ ಅನುಮತಿ ನೀಡಿದೆ. ಇಂಥ ಎಸೆತಗಳ ವೈಡ್​ ತೀರ್ಪಿನ ನಿರ್ಧಾರದ ವೇಳೆ ಹ್ವಾಕ್​&ಐ ಮತ್ತು ಬಾಲ್​ ಟ್ರಾ$್ಯಕಿಂಗ್​ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

2ನೇ ಹೊಸ ಚೆಂಡು, ಅಂಪೈರ್​ ನಿರ್ಧಾರ

ರಾತ್ರಿ 7.30ರಿಂದ ಶುರುವಾಗುವ ಪಂದ್ಯಗಳ 2ನೇ ಇನಿಂಗ್ಸ್​ ವೇಳೆ 11ನೇ ಓವರ್​ ನಂತರ 2ನೇ ಹೊಸ ಚೆಂಡು ಬಳಸುವ ಮೂಲಕ, ಬೌಲರ್​ಗಳ ಪರದಾಟ ಮತ್ತು ಚೇಸಿಂಗ್​ ತಂಡದ ಲಾಭ ತಪ್ಪಿಸಲು ನಿರ್ಧರಿಸಲಾಗಿದೆ. ಆದರೆ ಈ 2ನೇ ಹೊಸ ಚೆಂಡಿನ ಬಳಕೆಯ ಬಗ್ಗೆ ಮೈದಾನದ ಅಂಪೈರ್​ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 2ನೇ ಹೊಸಚೆಂಡು ಬಳಕೆ ಕಡ್ಡಾಯವಲ್ಲ. ಇಬ್ಬನಿಯಿಂದ ಚೆಂಡಿನ ಸ್ಥಿತಿ ತೀರಾ ಹದಗೆಟ್ಟಾಗ ಮಾತ್ರ 2ನೇ ಹೊಸಚೆಂಡು ಬಳಕೆಯಾಗಲಿದೆ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನು ಮಧ್ಯಾಹ್ನ 3.30ರಿಂದ ನಡೆಯುವ ಪಂದ್ಯಗಳಲ್ಲಿ 2ನೇ ಇನಿಂಗ್ಸ್​ ವೇಳೆಯೂ ಹೊಸ ಚೆಂಡಿನ ಬಳಕೆಗೆ ಅವಕಾಶ ನೀಡಲಾಗುವುದಿಲ್ಲ.

ನಾಯಕರಿಗೆ ನಿಷೇಧದಿಂದ ವಿನಾಯಿತಿ

ಕಳೆದ ಆವೃತ್ತಿಯ ಕಡೇ ಪಂದ್ಯದಲ್ಲಿ ನಿಧಾನಗತಿ ಓವರ್​ ತಪ್ಪಿಗಾಗಿ ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್​ ಪಾಂಡ್ಯ ಒಂದು ನಿಷೇಧ ಶಿೆಗೆ ಗುರಿಯಾಗಿದ್ದರು. ಇದರಿಂದಾಗಿ ಅವರು ಈ ಬಾರಿ ತಮ್ಮ ತಂಡದ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದರೆ ಮುಂದೆ ಹೀಗಾಗದು. ಯಾಕೆಂದರೆ, ನಿಧಾನಗತಿ ಓವರ್​ಗಾಗಿ ತಂಡಗಳಿಗೆ ನಾಯಕರಿಗೆ ನಿಷೇಧ ಹೇರುವುದರಿಂದ ವಿನಾಯಿತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಬದಲಾಗಿ ನಾಯಕರಿಗೆ ಡಿಮೆರಿಟ್​ ಅಂಕಗಳನ್ನು ನೀಡಲಾಗುತ್ತದೆ ಮತ್ತು ಈ ಡಿಮೆರಿಟ್​ ಅಂಕಗಳು 3 ವರ್ಷಗಳ ಕಾಲ ಇರುತ್ತವೆ. ಸತತವಾಗಿ ಇಂಥ ತಪು$್ಪ ಪುನರಾವರ್ತನೆಯಾದಾಗ ಮಾತ್ರ ನಿಷೇಧ ಹೇರಲಾಗುತ್ತದೆ. ನಿಧಾನಗತಿ ಓವರ್​ಗಾಗಿ ಪಂದ್ಯ ಸಂಭಾವನೆಯ ಶೇ. 25ರಿಂದ 75ರಷ್ಟು ದಂಡ ವಿಧಿಸುವುದನ್ನು ಈ ಸಲವೂ ಮುಂದುವರಿಸಲಾಗುತ್ತದೆ. ಡಿಮೆರಿಟ್​ ಅಂಕ 4ಕ್ಕೇರಿದಾಗ ಮ್ಯಾಚ್​ ರೆಫ್ರಿ ಶೇ. 100 ದಂಡ ವಿಧಿಸಬಹುದಾಗಿರುತ್ತದೆ.

*ಚೆಂಡಿಗೆ ಎಂಜಲು ಹಚ್ಚುವುದರ ಮೇಲಿನ ನಿಷೇಧ ಹಿಂಪಡೆದಿರುವುದು ಸ್ವಾಗತಾರ್ಹ. ಇದರಿಂದ ಬೌಲರ್​ಗಳಿಗೆ ಅನುಕೂಲವಾಗಲಿದೆ. ಇದರಿಂದ ರಿವರ್ಸ್​ ಸ್ವಿಂಗ್​ ಮಾಡಲು ನೆರವಾಗಲಿದೆ. ಚೆಂಡಿನ ಒಂದು ಬದಿಯನ್ನು ಶೈನ್​ ಆಗಿಡಲು ಎಂಜಲಿನ ಬಳಕೆಯೇ ಉತ್ತಮ ಹಾದಿ.

| ಮೊಹಮದ್​ ಸಿರಾಜ್​, ಗುಜರಾತ್​ ಟೈಟಾನ್ಸ್​ ವೇಗಿ