RCB : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025 ) ಒಂದು ವಾರಗಳ ಕಾಲ ಮುಂಡೂಡಲ್ಪಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ. ಮೇ 16ರಿಂದ ಮತ್ತೆ ಶುರುವಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಒಂದು ಒಳ್ಳೆಯ ಸುದ್ದಿಯ ಜೊತೆಗೆ ಕೆಟ್ಟ ಸುದ್ದಿಯೂ ಸಿಕ್ಕಿದೆ.
ಒಳ್ಳೆಯ ಸುದ್ದಿ ಏನೆಂದರೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮೇ 3ರಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯವಾದ ನಂತರ ಎರಡು ಪಂದ್ಯಗಳಿಂದ ಹೊರಗುಳಿಯುವ ನಿರೀಕ್ಷೆಯಿತ್ತು. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ಅನ್ನು ಒಂದು ವಾರ ಮುಂದೂಡಲಾಗಿದೆ. ಒಂದು ವೇಳೆ ಪಂದ್ಯಗಳು ನಡೆದಿದ್ದರೆ, ರಜತ್ ಪಾಟಿದಾರ್ ಈ ಸಮಯದಲ್ಲಿ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ಒಂದು ವಾರ ಸಮಯ ಸಿಕ್ಕಿರುವುದರಿಂದ ಗಾಯದಿಂದ ಚೇತರಿಸಿಕೊಳ್ಳಲು ಉಪಯುಕ್ತವಾಗಿದೆ. ಐಪಿಎಲ್ ಪುನರಾರಂಭವಾದಾಗ ರಜತ್ ಪಾಟಿದಾರ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಕೆಟ್ಟ ಸುದ್ದಿ ಏನೆಂದರೆ, ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮತ್ತು ಆರ್‌ಸಿಬಿ ಪ್ರಮುಖ ಬೌಲರ್ ಜೋಶ್ ಹ್ಯಾಜಲ್‌ವುಡ್ ಪ್ರಸ್ತುತ ಐಪಿಎಲ್ ಋತುವಿನ ಉಳಿದ ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ಭುಜದ ಗಾಯದಿಂದಾಗಿ ಅವರು ಈಗಾಗಲೇ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಮೇ 3 ರಂದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ಆಡಲಿಲ್ಲ.
ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಹ್ಯಾಜಲ್‌ವುಡ್ ಫಿಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಅದರ ಪರಿಣಾಮವಾಗಿ, ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇಲ್ಲ. ಆದರೆ, ಕೆಲವು ಮೂಲಗಳ ಪ್ರಕಾರ ಹ್ಯಾಜಲ್‌ವುಡ್ ಇನ್ನುಳಿದ ಪಂದ್ಯಗಳಿಗೂ ಲಭ್ಯವಾಗುತ್ತಾರಂತೆ. ಮುಂದಿನ ಪಂದ್ಯಗಳನ್ನು ಆಡುತ್ತಾರಾ? ಇಲ್ಲವಾ? ಎಂದು ಖಚಿತಪಡಿಸಿಕೊಳ್ಳಲು ಐಪಿಎಲ್ ಪುನಾರಂಭದವರೆಗೂ ಕಾಯಬೇಕಾಗಿದೆ.
ಅಂದಹಾಗೆ, ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಇದುವರೆಗೂ 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 3ರಲ್ಲಿ ಸೋಲುಂಡಿ 8 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಈ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 16 ಅಂಕಗಳನ್ನು ಗಳಿಸಿರುವ ಗುಜರಾತ್ ಟೈಟಾನ್ಸ್, ಹೆಚ್ಚಿನ ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. (ಏಜೆನ್ಸೀಸ್)