ಕ್ರೀಡೆ

ಒಂದು ಕಾಲದಲ್ಲಿ ಟೀಮ್​ ಇಂಡಿಯಾ ಬೌಲರ್​ ಆಗಿದ್ದ ಈತ ಇಂದು ಕೆಕೆಆರ್​ ತಂಡದ ನೆಟ್​ ಬೌಲರ್! IPL 2025 ​

IPL 2025 : ಐಪಿಎಲ್-2025 ಮೆಗಾ ಹರಾಜಿನಲ್ಲಿ ಟೀಮ್ ಇಂಡಿಯಾ ವೇಗಿ ಚೇತನ್ ಸಕಾರಿಯಾ ಮಾರಾಟವಾಗದೆ ಉಳಿದಿದ್ದಾರೆ. 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಸಕಾರಿಯಾ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಸಿಲ್ಲ. ಆದಾಗ್ಯೂ, ಸಕಾರಿಯಾ ಅವರು ಹರಾಜಿನಲ್ಲಿ ಮಾರಾಟವಾಗದಿದ್ದರೂ, ಅವರು ಈ ವರ್ಷದ ಐಪಿಎಲ್ ಸೀಸನ್​ನ ಭಾಗವಾಗಿರುತ್ತಾರೆ.

ಸಕಾರಿಯಾ ಅವರು 18ನೇ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಪರ ನೆಟ್ ಬೌಲರ್ ಆಗಿ ತಮ್ಮ ಸೇವೆಯನ್ನು ಒದಗಿಸಲಿದ್ದಾರೆ. ಸಕಾರಿಯಾ ಕಳೆದ ಸೀಸನ್‌ನಲ್ಲಿ ಕೆಕೆಆರ್‌ಕೆ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿಲ್ಲ. ಇದಾದ ಬಳಿಕ, ಕೆಕೆಆರ್ ಅವರನ್ನು ಐಪಿಎಲ್-2025 ಮೆಗಾ ಹರಾಜಿನ ಮೊದಲು ಬಿಡುಗಡೆ ಮಾಡಿತು.

ಸಕಾರಿಯಾ ಈಗ ಅದೇ ತಂಡದಲ್ಲಿ ನೆಟ್ ಬೌಲರ್ ಆಗಿ ಮುಂದುವರಿಯಲಿದ್ದಾರೆ. ಇದೇ ಸಂದರ್ಭದಲ್ಲಿ ಚೇತನ್ ಸಕಾರಿಯಾ ಇತ್ತೀಚೆಗೆ ಮಣಿಕಟ್ಟಿನ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಟಿ20 ಟೂರ್ನಮೆಂಟ್‌ನಲ್ಲಿ ಸಕಾರಿಯಾ ಉತ್ತಮ ಪ್ರದರ್ಶನ ನೀಡಿ, ಕೆಕೆಆರ್ ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಗಮನ ಸೆಳೆದರು. ಈ ಹಿನ್ನೆಲೆಯಲ್ಲಿ ಕೆಕೆಆರ್, ಅವರನ್ನು ನೆಟ್ ಬೌಲರ್ ಆಗಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಭರತ್ ಅರುಣ್ ಅವರ ಮೇಲ್ವಿಚಾರಣೆಯಲ್ಲಿ ಚೇತನ್ ತಮ್ಮ ಕೌಶಲ್ಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಇದು ಉತ್ತಮ ಅವಕಾಶ. ಅದೇ ರೀತಿ, ಸಕಾರಿಯಾ ಅವರು ರಹಾನೆ ಮತ್ತು ರಸೆಲ್ ಅವರಂತಹ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ.

ಚೇತನ್ ಸಕಾರಿಯಾ 2021ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಎರಡು ಅಂತಾರಾಷ್ಟ್ರೀಯ ಟಿ20 ಮತ್ತು ಒಂದು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದೇ ರೀತಿ, ಸಕಾರಿಯಾ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.

2021 ರ ಸೀಸನ್​ನಲ್ಲಿ ಸಕಾರಿಯಾ ರಾಜಸ್ಥಾನ ಪರ 14 ವಿಕೆಟ್‌ಗಳನ್ನು ಕಬಳಿಸಿದರು. ಈ ಅವಧಿಯಲ್ಲಿ ಸಕಾರಿಯಾಗೆ ಭಾರತೀಯ ಆಯ್ಕೆದಾರರಿಂದ ಕರೆ ಬಂದಿತು. ಆದರೆ, ಸಕಾರಿಯಾ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಐಪಿಎಲ್‌ನಲ್ಲಿ 19 ಪಂದ್ಯಗಳನ್ನು ಆಡಿದ ಚೇತನ್ 20 ವಿಕೆಟ್‌ಗಳನ್ನು ಕಬಳಿಸಿದರು. (ಏಜೆನ್ಸೀಸ್​)