ಕ್ರೀಡೆ

IPL-2025: ಇಂದು ಈಡನ್​ನಲ್ಲಿ ಕೆಕೆಆರ್​ಗೆ ಎಲ್​ಎಸ್​ಜಿ ಸವಾಲು

ಕೋಲ್ಕತ: ಅಸ್ಥಿರ ನಿರ್ವಹಣೆಯೊಂದಿಗೆ ಐಪಿಎಲ್​ 18ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ನೆಲೆಸಿರುವ ತಂಡಗಳಾದ ಹಾಲಿ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ಮತ್ತು ಲಖನೌ ಸೂಪರ್​ಜೈಂಟ್ಸ್​ ತಂಡಗಳು ಮಂಗಳವಾರ ಮುಖಾಮುಖಿ ಆಗಲಿವೆ. ಈಡನ್​ ಗಾರ್ಡನ್ಸ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಲಯ ಕಾಯ್ದುಕೊಳ್ಳಲು ಹೋರಾಡಲಿವೆ.

ಕೆಕೆಆರ್​, ಲಖನೌ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಒಂದೇ ರೀತಿಯ ಲಿತಾಂಶ ಕಂಡಿವೆ. ಅಂದರೆ ತಲಾ 2ರಲ್ಲಿ ಗೆದ್ದು, ತಲಾ 2ರಲ್ಲಿ ಸೋತಿವೆ. ಸೋಲಿನೊಂದಿಗೆ ಟೂರ್ನಿ ಆರಂಭಿಸಿದ್ದ ಉಭಯ ತಂಡಗಳು ಕೊನೇ ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿವೆ. ಕೆಕೆಆರ್​ ಕಳೆದ ಪಂದ್ಯದಲ್ಲಿ ಈಡನ್​ನಲ್ಲೇ ಸನ್​ರೈಸರ್ಸ್​ ಎದುರು 80 ರನ್​ಗಳ ಭಾರಿ ಅಂತರದಿಂದ ಗೆದ್ದು ಬೀಗಿದ್ದರೆ, ಎಲ್​ಎಸ್​ಜಿ ತಂಡ ಮುಂಬೈ ಇಂಡಿಯನ್ಸ್​ ಎದುರು 12 ರನ್​ಗಳಿಂದ ರೋಚಕ ಗೆಲುವು ಸಾಧಿಸಿತ್ತು.

ಕಳೆದ ಭಾನುವಾರವೇ ನಡೆಯಬೇಕಾಗಿದ್ದ ಈ ಪಂದ್ಯ, ಭದ್ರತಾ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಕೋಲ್ಕತ ಪೊಲೀಸರು ಭಾನುವಾರ ನಿಗದಿಯಾಗಿದ್ದ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಅಸಹಾಯಕತೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಿಸಿಸಿಐ ಪಂದ್ಯದ ಸ್ಥಳ ಬದಲಾವಣೆಯ ಬದಲಾಗಿ 2 ದಿನಗಳ ಮಟ್ಟಿಗೆ ಮುಂದೂಡಿತ್ತು.

ಸ್ಪಿನ್ನರ್ಸ್​ ಮುಖಾಮುಖಿ ಕುತೂಹಲ

ಕೆಕೆಆರ್​ ತಂಡದ ಅನುಭವಿ ಸ್ಪಿನ್ನರ್​ ಸುನೀಲ್​ ನಾರಾಯಣ್​ ಮತ್ತು ಅವರಂತೆಯೇ ಬೌಲಿಂಗ್​ ಶೈಲಿ ಹೊಂದಿರುವ ದೆಹಲಿಯ ಯುವ ಸ್ಪಿನ್ನರ್​ ದಿಗ್ವೇಶ್​ ರಾಥಿ ಮೊದಲ ಬಾರಿ ಒಂದೇ ಪಂದ್ಯದಲ್ಲಿ ಆಡಲಿದ್ದಾರೆ. ನಾರಾಯಣ್​ ಅವರನ್ನೇ ಆದರ್ಶವಾಗಿಟ್ಟುಕೊಂಡು ಬೌಲಿಂಗ್​ ಮಾಡುತ್ತ ಯಶಸ್ಸು ಕಂಡಿರುವ ದಿಗ್ವೇಶ್​ ರಾಥಿ ಇದೀಗ ತನ್ನ ನೆಚ್ಚಿನ ತಾರೆಯ ವಿರುದ್ಧವೂ ಯಶಸ್ಸು ಸಾಧಿಸಿ ಗಮನಸೆಳೆಯುವ ನಿರೀೆಯಲ್ಲಿದ್ದಾರೆ. ಪಂದ್ಯಕ್ಕೆ ಪೂರ್ವಭಾವಿಯಾಗಿ ನಾರಾಯಣ್​ರನ್ನು ಭೇಟಿಯಾಗಿ ರಾಥಿ ಸಂಭ್ರಮಿಸಿದ್ದಾರೆ. ನೋಟ್​ಬುಕ್​ ಸಂಭ್ರಮಾಚರಣೆಯಿಂದ ದಂಡ ಶಿೆಗೆ ಗುರಿಯಾಗುತ್ತಿರುವ ನಡುವೆ ರಾಥಿ, ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿ ಗಮನಸೆಳೆದಿದ್ದಾರೆ.

ವಿಶ್ವಾಸದಲ್ಲಿ ಕೆಕೆಆರ್​

ಸನ್​ರೈಸರ್ಸ್​ ವಿರುದ್ಧದ ಕಳೆದ ಪಂದ್ಯದಲ್ಲಿ ಕೆಕೆಆರ್​ ಸರ್ವಾಂಗೀಣ ನಿರ್ವಹಣೆ ತೋರಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ತಂಡದ ದುಬಾರಿ ಆಟಗಾರ ವೆಂಕಟೇಶ್​ ಅಯ್ಯರ್​ ಬ್ಯಾಟಿಂಗ್​ ಲಯ ಕಂಡುಕೊಂಡಿದ್ದರೆ, ರಿಂಕು ಸಿಂಗ್​, ನಾಯಕ ಅಜಿಂಕ್ಯ ರಹಾನೆ, ಅಂಗಕೃಷ್​ ರುವಂಶಿ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ಆರಂಭಿಕರಾಗಿ ಕ್ವಿಂಟನ್​ ಡಿಕಾಕ್​&ಸುನೀಲ್​ ನಾರಾಯಣ್​ ಇನ್ನಷ್ಟು ಸ್ಥಿರ ನಿರ್ವಹಣೆ ತೋರಬೇಕಾಗಿದೆ. ಈ ಬಾರಿ ನಾರಾಯಣ್​ಗೆ ಹಿಂಬಡ್ತಿ ನೀಡಿ ರುವಂಶಿ ಅವರನ್ನು ಆರಂಭಿಕರಾಗಿ ಆಡಿಸುವ ಸಾಧ್ಯತೆಯೂ ಇದೆ. ಇನ್ನು ಬೌಲಿಂಗ್​ನಲ್ಲಿ ಯುವ ವೇಗಿಗಳಾದ ವೈಭವ್​ ಅರೋರ, ಹರ್ಷಿತ್​ ರಾಣಾ ಜತೆಗೆ ಸ್ಪಿನ್ನರ್​ ವರುಣ್​ ಚಕ್ರವರ್ತಿ ನಿರೀತ ನಿರ್ವಹಣೆಯನ್ನೇ ತೋರಿಸುತ್ತಿದ್ದಾರೆ. ಜತೆಗೆ ಅನುಭವಿಗಳಾದ ಆಂಡ್ರೆ ರಸೆಲ್​ ಮತ್ತು ಸುನೀಲ್​ ನಾರಾಯಣ್​ ಉತ್ತಮ ಲಯದಲ್ಲಿದ್ದಾರೆ.

ಪಂತ್​ ಬ್ಯಾಟಿಂಗ್​ ಫಾರ್ಮ್​ ಚಿಂತೆ

ಆರಂಭಿಕರಾಗಿ ಮಿಚೆಲ್​ ಮಾರ್ಷ್​ ಆಡಿದ 4 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿದ್ದರೆ, ನಿಕೋಲಸ್​ ಪೂರನ್​, ಏಡನ್​ ಮಾರ್ಕ್ರಮ್​, ಆಯುಷ್​ ಬಡೋನಿ, ಡೇವಿಡ್​ ಮಿಲ್ಲರ್​ ಕೂಡ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ ನಾಯಕ ರಿಷಭ್​ ಪಂತ್​ ಬ್ಯಾಟಿಂಗ್​ ಫಾರ್ಮ್ ಒಂದೇ ಲಖನೌಗೆ ಪ್ರಮುಖ ಚಿಂತೆ ಎನಿಸಿದೆ. 27 ಕೋಟಿ ರೂ. ಸಂಭಾವನೆಯೊಂದಿಗೆ ಟೂರ್ನಿಯ ದುಬಾರಿ ಆಟಗಾರ ಎನಿಸಿರುವ ಪಂತ್​, ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಕೇವಲ 19 ರನ್​ (0, 15, 2, 2) ಗಳಿಸಿದ್ದಾರೆ. ಪಂತ್​ ಶ್ರೀ ಲಯಕ್ಕೆ ಮರಳಿದರೆ ಲಖನೌ ಬ್ಯಾಟಿಂಗ್​ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಬೌಲಿಂಗ್​ನಲ್ಲಿ ಭಾರತೀಯರನ್ನೇ ನೆಚ್ಚಿಕೊಂಡಿರುವ ಲಖನೌಗೆ ಶಾರ್ದೂಲ್​, ದಿಗ್ವೇಶ್​, ಬಿಷ್ಣೋಯಿ, ಆವೇಶ್​ ಖಾನ್​, ಆಕಾಶ್​ದೀಪ್​ ಬಲ ತುಂಬಿದ್ದಾರೆ.

ಮುಖಾಮುಖಿ: 5

ಕೆಕೆಆರ್​: 2

ಲಖನೌ: 3

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.