ಕ್ರೀಡೆ

IPL-2025: ಐಪಿಎಲ್​ ಅಂಪೈರ್​ ಅನಿಲ್​ ಚೌಧರಿ ಈ ಬಾರಿ ವೀಕ್ಷಕ ವಿವರಣೆಕಾರ!

ನವದೆಹಲಿ: ಐಪಿಎಲ್​ನ ಕಳೆದ 17 ಆವೃತ್ತಿಗಳಿಂದ ಅಂಪೈರ್​ ಆಗಿದ್ದ ಅನಿಲ್​ ಚೌಧರಿ ಈ ಬಾರಿ ವೀಕ್ಷಕ ವಿವರಣೆಕಾರರಾಗಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 12 ಟೆಸ್ಟ್​, 49 ಏಕದಿನ ಮತ್ತು 64 ಟಿ20 ಪಂದ್ಯಗಳಲ್ಲೂ ಅಂಪೈರ್​ ಆಗಿ ಕಾರ್ಯನಿರ್ವಹಿಸಿರುವ ಅನಿಲ್​ ಚೌಧರಿ ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ಕೇರಳ&ವಿದರ್ಭ ನಡುವಿನ ರಣಜಿ ಟ್ರೋಫಿ ಫೈನಲ್​ ಬಳಿಕ ಅಂಪೈರಿಂಗ್​ನಿಂದ ನಿವೃತ್ತಿ ಹೊಂದಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಹರಿಯಾಣ್ವಿ ಮತ್ತು ಹಿಂದಿ ಭಾಷೆಯ ವೀಕ್ಷಕ ವಿವರಣೆಕಾರರಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಏ.6ರ ಕೋಲ್ಕತ ಪಂದ್ಯ ಗುವಾಹಟಿಗೆ ಸ್ಥಳಾಂತರ

ಕೋಲ್ಕತ: ಹಾಲಿ ಚಾಂಪಿಯನ್​ ಕೆಕೆಆರ್​ ತಂಡ ಏಪ್ರಿಲ್​ 6ರಂದು ಲಖನೌ ಸೂಪರ್​ಜೈಂಟ್ಸ್​ ವಿರುದ್ಧ ಕೋಲ್ಕತದಲ್ಲಿ ಆಡಬೇಕಾಗಿದ್ದ ಪಂದ್ಯವನ್ನು ಭದ್ರತಾ ಕಾರಣಗಳಿಂದಾಗಿ ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ರಾಮನವಮಿ ಹಬ್ಬದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಏ.6ರಂದು ಕೋಲ್ಕತದಲ್ಲಿ ಐಪಿಎಲ್​ ಪಂದ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಾಗದು ಎಂದು ಕೋಲ್ಕತ ಪೊಲೀಸರು ತಿಳಿಸಿದ್ದರು. ಇದರಿಂದಾಗಿ ಪಂದ್ಯವನ್ನು ಗುವಾಹಟಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಬಂಗಾಳ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷ ಸ್ನೇಹಾಶಿಶ್​ ಗಂಗೂಲಿ ತಿಳಿಸಿದ್ದಾರೆ. ರಾಮನವಮಿಯಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ 20 ಸಾವಿರಕ್ಕೂ ಅಧಿಕ ಮೆರವಣಿಗೆಗಳನ್ನು ಹಮ್ಮಿಕೊಂಡಿದೆ. ಪಂದ್ಯ ಸ್ಥಳಾಂತರದ ಬಗ್ಗೆ ಬಿಸಿಸಿಐನಿಂದಲೂ ಶ್ರೀವೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.