Virat Kohli : ಪ್ರಸಕ್ತ ಐಪಿಎಲ್ ಸೀಸನ್ ಭಾಗವಾಗಿ ಭಾನುವಾರ (ಏಪ್ರಿಲ್ 20) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ಪ್ರತೀಕಾರದ ಪಂದ್ಯ ನಡೆಯಿತು. ಇದರಲ್ಲಿ ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ, ಈ ಹಿಂದಿನ ಪಂದ್ಯದಲ್ಲಿ ತವರಿನಲ್ಲೇ ಪಂಜಾಬ್ ವಿರುದ್ಧದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿತು. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಆಟಗಾರರು ಭಾರಿ ಸಂಭ್ರಮಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರಭ್ಸಿಮ್ರಾನ್ (33) ಮತ್ತು ಶಶಾಂಕ್ ಸಿಂಗ್ (ಅಜೇಯ 31) ಮಾತ್ರ ಗಮನಾರ್ಹ ರನ್ಗಳನ್ನು ಗಳಿಸಿದರು. 158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ (ಅಜೇಯ 73) ಆಸರೆಯಾದರು. ದೇವದತ್ ಪಡಿಕ್ಕಲ್ (61) ಅವರು ಉತ್ತಮ ಇನ್ನಿಂಗ್ಸ್ ಮೂಲಕ ತಂಡಕ್ಕೆ ಸುಲಭ ಗೆಲುವಿನ ಅವಕಾಶ ಮಾಡಿಕೊಟ್ಟರು.
ಚೇಸಿಂಗ್‌ನಲ್ಲಿ ನಿಪುಣರಾಗಿದ್ದ ಕೊಹ್ಲಿ ತಮ್ಮ ಆಕರ್ಷಕ ಹೊಡೆತಗಳಿಂದ ಅಭಿಮಾನಿಗಳಿಗೆ ಮನರಂಜನೆ ನೀಡಿದರು. ಮತ್ತೊಂದೆಡೆ, ಪಡಿಕ್ಕಲ್ ಕೊಹ್ಲಿಗಿಂತಲೂ ಹೆಚ್ಚು ಅದ್ಭುತವಾಗಿ ಆಡಿದರು. ಅವರು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ ತ್ವರಿತವಾಗಿ ರನ್ ಗಳಿಸಿದರು. ಮತ್ತೊಂದೆಡೆ, ಕೊಹ್ಲಿ ಅಗತ್ಯಕ್ಕೆ ತಕ್ಕಂತೆ ಆಡಿದರು.
ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ತವರು ನೆಲದಲ್ಲಿ ಸೋಲಿಸಿದ ನಂತರ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಸ್ವಲ್ಪ ಜೋರಾಗಿ ಆಚರಿಸಿದರು. ಕಿಕ್ಕಿರಿದ ಮೈದಾನತ್ತ ನೋಡುತ್ತಾ ತಮ್ಮ ಕಿವಿಯ ಮೇಲೆ ಕೈ ಇಟ್ಟು, ಏನು ಕೇಳಿಸುತ್ತಿಲ್ಲ ಎನ್ನುವಂತೆ ಆರ್‌ಸಿಬಿ ಅಭಿಮಾನಿಗಳನ್ನು ಕಿಚಾಯಿಸಿದರು. ಆದರೆ, ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಗೆಲುವಿನ ನಂತರ ಕೊಹ್ಲಿ ಕೂಡ ಶ್ರೇಯಸ್ ಅಯ್ಯರ್ಗಿಂತ ಹೆಚ್ಚು ಸಂಭ್ರಮಿಸಿದರು. ಆರ್‌ಸಿಬಿ ಗೆಲುವಿನ ನಂತರ, ಕೊಹ್ಲಿ ಅವರು ಶ್ರೇಯಸ್ ಅವರನ್ನು ನೋಡಿ ಜೋರಾಗಿ ಕೂಗುವ ಮೂಲಕ ಆಚರಿಸಿದರು. ಈ ವೇಳೆ ಶ್ರೇಯಸ್ ತಲೆಯಾಡಿಸಿ ಕೊಹ್ಲಿಯ ಕಡೆಗೆ ಬಂದರು. ಬಳಿಕ ಕೊಹ್ಲಿ ನಗುತ್ತಾ ಅವರೊಂದಿಗೆ ಕೈ ಕುಲುಕಿದರು. ಆದಾಗ್ಯೂ, ಕೊಹ್ಲಿಯ ಸಂಭ್ರಮಾಚರಣೆಯಿಂದ ಶ್ರೇಯಸ್ ಅಯ್ಯರ್ ಸ್ವಲ್ಪ ನೋವಾದಂತೆ ತೋರುತ್ತಿತ್ತು. ಇದು ಕೊಹ್ಲಿ ಮತ್ತು ಶ್ರೇಯಸ್ ನಡುವೆ ಬಿಸಿ ಸಂಭಾಷಣೆಗೂ ಕಾರಣವಾಯಿತು.
ಅದಾದ ನಂತರ, ಕೊಹ್ಲಿ ಪಂಜಾಬ್ ಕಿಂಗ್ಸ್ ತಂಡದ ಆಟಗಾರರನ್ನು ಸ್ವಾಗತಿಸುತ್ತಾ ನಗುತ್ತಾ ಸ್ಥಳದಿಂದ ನಿರ್ಗಮಿಸಿದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಂದಹಾಗೆ, ಈ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿಯವರೆಗೆ ಎಂಟು ಪಂದ್ಯಗಳನ್ನು ಆಡಿದೆ. ಅದರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಮೂರು ಪಂದ್ಯಗಳನ್ನು ಸೋತಿದೆ.
ಅಚ್ಚರಿಯ ಸಂಗತಿ ಏನೆಂದರೆ, ಸೋತ ಮೂರು ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದವು ಎಂಬುದು ಗಮನಾರ್ಹ. ಅವರು ಗೆದ್ದ ಎಲ್ಲ ಪಂದ್ಯಗಳು ಹೊರಗಿನ ಮೈದಾನದಲ್ಲಿ ನಡೆದಿವೆ. ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ, ಕೋಲ್ಕತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹಾಗೂ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮತ್ತು ಮುಲ್ಲನ್ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದೆ. (ಏಜೆನ್ಸೀಸ್)