ಕ್ರೀಡೆ

"ಅದು ಯಾವಾಗಲೂ ಖುಷಿ ನೀಡಲ್ಲ"... ಕಡೆಗೂ ಗೊಂದಲಗಳಿಗೆ ತೆರೆ ಎಳೆದ 'ಕ್ಯಾಪ್ಟನ್ ಕೂಲ್​' | IPL 2025

ನವದೆಹಲಿ: 2025ರ ಐಪಿಎಲ್​ 18ನೇ ಆವೃತ್ತಿ ಶುರುವಾಗುವ ಮುನ್ನವೇ ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿರುವ ಚೆನ್ನೈ ಸೂಪರ್ ಕಿಂಗ್ಸ್​ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಹಾಗೂ ಸುದ್ದಿ ಮಾಡುತ್ತಿದೆ. ಈ ಕುರಿತು ವ್ಯಾಪಕ ಚರ್ಚೆಗಳು ಭುಗಿಲೆದ್ದಿವೆ. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ತೀವ್ರ ಕುತೂಹಲ ಹಾಗೂ ಕಾತರ ವ್ಯಕ್ತಪಡಿಸಿದ್ದು, ನವೆಂಬರ್​ನಲ್ಲಿ ನಡೆಯಲಿರುವ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ (IPL 2025) ಯಾವ ಸ್ಟಾರ್​ ಆಟಗಾರರು ಯಾವ ತಂಡಕ್ಕೆ ಸೇರುತ್ತಾರೆ? ಈಗಿರುವ ಯಾವ ಆಟಗಾರರನ್ನು ಆಯಾ ಫ್ರಾಂಚೈಸಿಗಳು ಕೈಬಿಡಲು ಲೆಕ್ಕಾಚಾರಗಳನ್ನು ಹಾಕಿಕೊಂಡಿವೆ ಎಂಬ ಗೊಂದಲ ಸದ್ಯ ಕ್ರೀಡಾಭಿಮಾನಿಗಳಲ್ಲಿ ಕಾಡುತ್ತಿದೆ. ಈ ಪೈಕಿ ಮೊದಲ ಹೆಸರೇ ಧೋನಿ ಅವರದ್ದು ಎಂಬುದೇ ಇದೀಗ ಹಲವರಲ್ಲಿ ಅಚ್ಚರಿ ಹಾಗೂ ಕೌತುಕ ಹೆಚ್ಚಿಸಿದೆ.

ಮೊದಲ ಹಂತದ ಸ್ಪಷ್ಟನೆ

2025ರಲ್ಲಿ ತಮ್ಮ ನೆಚ್ಚಿನ ಆಟಗಾರ, ಕ್ಯಾಪ್ಟನ್ ಕೂಲ್​ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೋ ಅಥವಾ ಐಪಿಎಲ್​ಗೆ ನಿವೃತ್ತಿ ಘೋಷಿಸಿ, ಕ್ರಿಕೆಟ್​ಗೆ ಗುಡ್​ಬೈ ಹೇಳಲಿದ್ದಾರೋ ಎಂಬ ಕುತೂಹಲ, ಗೊಂದಲ ಕಳೆದ ಐಪಿಎಲ್​ ಸೀಸನ್​ ಮುಕ್ತಾಯಗೊಂಡ ದಿನದಿಂದಲೂ ಕಾಡುತ್ತಿದೆ. ಒಂದೆಡೆ ಐಪಿಎಲ್​ 2025ರಲ್ಲಿ ಸಿಎಸ್​ಕೆ ಪರ ಧೋನಿ ಕಣಕ್ಕಿಳಿಯುತ್ತಾರಾ ಎಂದು ಫ್ಯಾನ್ಸ್​ ಪ್ರಶ್ನಿಸಿದರೆ, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇಲ್ಲಿಯವರೆಗೂ ಧೋನಿಯಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಹೇಳಿದ ಟೀಮ್ ಮ್ಯಾನೇಜ್​ಮೆಂಟ್​, ವದಂತಿಗಳಿಂದ ದೂರ ಉಳಿದಿತ್ತು. ಸದ್ಯ ಈ ಎಲ್ಲಾ ಗೊಂದಲಗಳಿಗೆ ಇದೀಗ ಮೊದಲ ಹಂತದ ಸ್ಪಷ್ಟನೆ ಸಿಕ್ಕಂತಾಗಿದೆ.

ಭಾವನೆ ಮತ್ತು ಜವಾಬ್ದಾರಿ

ರಿಗಿ ಈವೆಂಟ್​ಗೆ ಅತಿಥಿಯಾಗಿ ಆಗಮಿಸಿದ್ದ ಎಂ.ಎಸ್​. ಧೋನಿ, "ನನ್ನ ಕ್ರಿಕೆಟ್​ನ ಕಡೆಯ ವರ್ಷಗಳನ್ನು ಆನಂದಿಸಲು ಎದುರುನೋಡ್ತಿದ್ದೀನಿ. ಬಾಲ್ಯದಲ್ಲಿ ಕ್ರಿಕೆಟ್​ ಆಡುವುದು ಬಹಳ ಸುಲಭವಾಗಿತ್ತು. ಆದರೆ, ವೃತ್ತಿಯಲ್ಲಿ ಆಡುವ ಕ್ರಿಕೆಟ್ ಯಾವಾಗಲೂ ಖುಷಿ ನೀಡುವುದಿಲ್ಲ. ಏಕೆಂದರೆ, ಅಲ್ಲಿನ ಪರಿಸ್ಥಿತಿ, ಭಾವನೆ ಮತ್ತು ಜವಾಬ್ದಾರಿ ನಮ್ಮ ಹೆಗಲ ಮೇಲಿರುತ್ತದೆ. ಇದ್ಯಾವುದನ್ನು ನಿಭಾಯಿಸುವುದು ಅಷ್ಟು ಸುಲಭವಿಲ್ಲ. ಮುಂದಿನ ಕೆಲವು ವರ್ಷಗಳ ಕಾಲ ಕ್ರೀಡೆಯ ಭಾಗವಾಗಲು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).