ವಿಶಾಖಪಟ್ಟಣ: ಕಳೆದ ಆವೃತ್ತಿಯಲ್ಲಿ ನಾಯಕರೂ ಆಗಿದ್ದ ಇಬ್ಬರು ಪ್ರಮುಖ ಆಟಗಾರರನ್ನು ಅದಲು-ಬದಲು ಮಾಡಿಕೊಂಡಿರುವ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್, ಐಪಿಎಲ್ 18ನೇ ಆವೃತ್ತಿಯಲ್ಲಿ ಸೋಮವಾರ ಮುಖಾಮುಖಿ ಆಗಲಿವೆ. ಈ ಬಾರಿ ಹೊಸ ನಾಯಕರೊಂದಿಗೆ ಅಭಿಯಾನ ಆರಂಭಿಸಲಿರುವ ಉಭಯ ತಂಡಗಳು ಶುಭಾರಂಭ ಕಾಣಲು ಪೈಪೋಟಿ ನಡೆಸಲಿವೆ.
ಇದು ಡೆಲ್ಲಿ ತಂಡದ ತವರು ಪಂದ್ಯವಾಗಿದ್ದು, ಎಂದಿನ ನವದೆಹಲಿ ಮೈದಾನಕ್ಕೆ ಬದಲಾಗಿ ವಿಶಾಖಪಟ್ಟಣದ ಡಾ.ವೈಎಸ್ಆರ್ ಸ್ಟೇಡಿಯಂನಲ್ಲಿ ಪಂದ್ಯ ನಿಗದಿಯಾಗಿದೆ. ಡೆಲ್ಲಿ ತಂಡ ತನ್ನ ಆರಂಭಿಕ 2 ತವರು ಪಂದ್ಯಗಳನ್ನು ಇಲ್ಲೇ ಆಡಲಿದೆ. ಡೆಲ್ಲಿ ತಂಡದ ಹೊಸ ನಾಯಕ ಅಕ್ಷರ್ ಪಟೇಲ್ ನಾಯಕತ್ವ ಗುಣವನ್ನು ನಿರೂಪಿಸುವ ಹಂಬಲದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಡುವೆಯೂ ಕೆಎಲ್ ರಾಹುಲ್ ಕೊನೇಕ್ಷಣದಲ್ಲಿ ಡೆಲ್ಲಿ ತಂಡ ಸೇರಿಕೊಂಡಿದ್ದರೂ, ಮೊದಲ ಪಂದ್ಯ ಆಡುವ ಖಚಿತತೆ ಇಲ್ಲ ಎನ್ನಲಾಗಿದೆ.
ಕಳೆದ ಬಾರಿ ಕೆಕೆಆರ್ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಆರ್ಸಿಬಿ ನಾಯಕ ್ಾ ಡು ಪ್ಲೆಸಿಸ್ ಈ ಸಲ ಡೆಲ್ಲಿ ತಂಡ ಸೇರಿದ್ದಾರೆ. ಆಸೀಸ್ ಯುವ ಆರಂಭಿಕ ಮೆಕ್ಗುರ್ಕ್ ಡೆಲ್ಲಿ ತಂಡದಲ್ಲಿ ಉಳಿದುಕೊಂಡಿದ್ದರೆ, ದೇಶೀಯ ಕ್ರಿಕೆಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕನ್ನಡಿಗ ಕರುಣ್ ನಾಯರ್, ಸಮೀರ್ ರಿಜ್ವಿ, ಆಶುತೋಷ್ ಶರ್ಮರಂಥ ಭಾರತೀಯರೂ ಡೆಲ್ಲಿ ಬ್ಯಾಟಿಂಗ್ಗೆ ಬಲ ತುಂಬಲಿದ್ದಾರೆ. ಡೆಲ್ಲಿ ಬೌಲಿಂಗ್ನಲ್ಲಿ ನಾಯಕ ಅಕ್ಷರ್, ಕುಲದೀಪ್, ಟಿ. ನಟರಾಜನ್, ಮೋಹಿತ್ ಶರ್ಮ, ಮುಕೇಶ್ ಶರ್ಮರಂಥ ಭಾರತೀಯ ಬೌಲರ್ಗಳನ್ನು ನೆಚ್ಚಿಕೊಂಡಿದೆ.
ಪಂತ್, ಕೆಎಲ್ಗೆ ಪ್ರತಿಷ್ಠೆಯ ಪ್ರಶ್ನೆ!
ಐಪಿಎಲ್ನಲ್ಲಿ ತವರಿನ ಡೆಲ್ಲಿ ತಂಡದ ಪರವಾಗಿಯೇ ಮೊದಲಿನಿಂದಲೂ ಆಡುತ್ತ ಬಂದಿದ್ದ ರಿಷಭ್ ಪಂತ್ ಈ ಬಾರಿ ನಿಷ್ಠೆ ಬದಲಾಯಿಸಿಕೊಂಡಿದ್ದಾರೆ. ಡೆಲ್ಲಿ ಫ್ರಾಂಚೈಸಿ ಮಾಲೀಕರ ಜತೆಗಿನ ಕೆಲ ಭಿನ್ನಮತಗಳಿಂದಾಗಿ ತಂಡ ತ್ಯಜಿಸಿದ್ದ ಪಂತ್ ಈ ಬಾರಿ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ.ಗೆ ಲಖನೌ ತಂಡ ಸೇರಿದ್ದಾರೆ. ಜತೆಗೆ ನಾಯಕತ್ವದ ಜವಾಬ್ದಾರಿಯನ್ನೂ ಪಡೆದಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್ ಕಳೆದ ಬಾರಿ ಲಖನೌ ತಂಡದ ಮಾಲೀಕರಿಂದ ಆದ ಅವಮಾನದಿಂದ ನೊಂದು ತಂಡ ತ್ಯಜಿಸಿದ್ದರು ಮತ್ತು ಹರಾಜಿನಲ್ಲಿ 14 ಕೋಟಿ ರೂ.ಗೆ ಡೆಲ್ಲಿ ಪಾಲಾಗಿದ್ದರು. ಆದರೆ ನಾಯಕತ್ವ ನಿರಾಕರಿಸಿ ಬ್ಯಾಟಿಂಗ್-ಕೀಪಿಂಗ್ನತ್ತ ಗಮನಹರಿಸಲಿದ್ದಾರೆ. ಈ ಬದಲಾವಣೆ ಮತ್ತು ಮೊದಲ ಪಂದ್ಯದಲ್ಲೇ ತಮ್ಮ ಮಾಜಿ ತಂಡದ ಸವಾಲು ಎದುರಿಸಲಿರುವುದರಿಂದ ಪಂತ್&ರಾಹುಲ್ಗೆ ಇದು ಪ್ರತಿಷ್ಠೆಯ ಕಾದಾಟವೆನಿಸಿದೆ.
ಈ ಸಲ ಲಖನೌ ಆಕ್ರಮಣ...
ಕೆಎಲ್ ರಾಹುಲ್ ನಾಯಕರಾಗಿದ್ದಾಗ ಲಖನೌ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ಆಟದ ಕೊರತೆ ಕಾಡಿತ್ತು. ಆದರೆ ರಿಷಭ್ ಪಂತ್ ಸಾರಥ್ಯದಲ್ಲಿ ಲಖನೌ ಹೆಚ್ಚಿನ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸುವ ಸೂಚನೆ ಈಗಾಗಲೆ ಲಭಿಸಿದೆ. ಈ ನಿಟ್ಟಿನಲ್ಲಿ ಪಂತ್ಗೆ ಉಪನಾಯಕ ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ಅಬ್ದುಲ್ ಸಮದ್ ಸಾಥ್ ನೀಡಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಲಖನೌಗೆ ಮಿಂಚಿನ ವೇಗಿ ಮಯಾಂಕ್ ಯಾದವ್ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದರೆ, ಆವೇಶ್ ಖಾನ್, ಆಕಾಶ್ದೀಪ್ ಕೂಡ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಹ್ಸಿನ್ ಖಾನ್ ಬದಲಿಗೆ ಶಾರ್ದೂಲ್ ಠಾಕೂರ್ ಸೇರಿದ್ದು, ಅವರ ಆಲ್ರೌಂಡ್ ಸಾಮರ್ಥ್ಯ ಲಖನೌಗೆ ಬಲ ತುಂಬಲಿದೆ. ಸ್ಪಿನ್ ವಿಭಾಗವನ್ನು ರವಿ ಬಿಷ್ಣೋಯಿ ಮುನ್ನಡೆಸಲಿದ್ದು, ಎಂ ಸಿದ್ಧಾರ್ಥ್ ಸಾಥ್ ನೀಡಲಿದ್ದಾರೆ.
*ಮುಖಾಮುಖಿ: 5
ಡೆಲ್ಲಿ: 2
ಲಖನೌ: 3
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.