Rishabh Pant : ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್-2025 ಸೀಸನ್ ಅನ್ನು ಸೋಲಿನೊಂದಿಗೆ ಕೊನೆಗೊಳಿಸಿದೆ. ಮಂಗಳವಾರ (ಮೇ 27) ಏಕಾನಾ ಕ್ರೀಡಾಂಗಣದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ ಸೋಲುಂಡಿತು. ಇದರ ಬೆನ್ನಲ್ಲೇ ಲಖನೌ ನಾಯಕ ರಿಷಭ್ ಪಂತ್‌ಗೆ ದೊಡ್ಡ ಆಘಾತ ಎದುರಾಗಿದೆ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಐಪಿಎಲ್ ಸಲಹಾ ಸಮಿತಿಯು ಪಂತ್‌ಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಂಪ್ಯಾಕ್ಟ್ ಆಟಗಾರ ಸೇರಿದಂತೆ ತಂಡದ ಪ್ರತಿಯೊಬ್ಬರೂ 12 ಲಕ್ಷ ರೂಪಾಯಿ ಅಥವಾ ಅವರ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡವನ್ನು ಪಾವತಿಸಲು ಸಮಿತಿ ಆದೇಶಿಸಿದೆ.
ಈ ಋತುವಿನಲ್ಲಿ ಲಖನೌ ತಂಡ ನಿಧಾನಗತಿಯ ಓವರ್ ದರವನ್ನು ದಾಖಲಿಸುತ್ತಿರುವುದು ಇದು ಮೂರನೇ ಬಾರಿ. ಅದಕ್ಕಾಗಿಯೇ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ಪಂತ್ ಅವರಿಗೆ 30 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಸಲಹಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಮತ್ತೆ ತಮ್ಮ ಬ್ಯಾಟಿಂಗ್ನಲ್ಲಿ ಲಯ ಕೊಂಡುಕೊಂಡಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಎಲ್ಎಸ್ಜಿ ತಂಡಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರನೆಂಬ ದಾಖಲೆಗೆ ಪಂತ್ ಪಾತ್ರರಾಗಿದ್ದರು. ಆದರೆ, ಕಳಪೆ ಬ್ಯಾಟಿಂಗ್ನಿಂದಾಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, ನಿನ್ನೆ (ಮೇ 27) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಸ್ಫೋಟಕ ಸೆಂಚುರಿ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಎಲ್ಎಸ್ಜಿ ಪರ ರಿಷಭ್ ಪಂತ್ ಅಬ್ಬರಿಸಿ ಬೊಬ್ಬಿರಿದರು. ಕೇವಲ 61 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ 118 ರನ್ ಕಲೆಹಾಕಿದರು. ಬರೋಬ್ಬರಿ 193.44ರ ಸ್ಟ್ರೈಕ್ರೇಟ್ನಲ್ಲಿ ಪಂತ್ ಬ್ಯಾಟ್ ಬೀಸಿದರು. ಟೂರ್ನಿಯ ಆರಂಭದಿಂದಲೂ ನೀರಸ ಪ್ರದರ್ಶನ ತೋರಿದ್ದ ಪಂತ್ ಕೊನೆಯ ಲೀಗ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದರು. ಈ ವೇಳೆ ಅವರು ಸಂಭ್ರಮಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಶತಕ ಬಾರಿಸಿದ ಬೆನ್ನಲ್ಲೇ ಹೆಲ್ಮೆಟ್ ಮತ್ತು ಕೈಗಳಿಂದ ಗ್ಲೌಸ್ ತೆಗೆದಿಟ್ಟು ಮೈದಾನದಲ್ಲಿ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದನ್ನು ನೋಡಿದ ಲಖನೌ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಎದ್ದು ನಿಂತು, ಚಪ್ಪಾಳೆ ತಟ್ಟಿ ಸಂಭ್ರಮಾಚರಣೆ ಮಾಡಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಾಯಕ ರಿಷಭ್ ಪಂತ್ (ಅಜೇಯ 118 ರನ್, 61 ಎಸೆತ, 11 ಬೌಂಡರಿ, 8 ಸಿಕ್ಸರ್) ಭರ್ಜರಿ ಶತಕ, ಮಿಚೆಲ್ ಮಾರ್ಷ್ (67 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಅವರ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 227 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ ನುವಾನ್ ತುಷಾರ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ, ಜಿತೇಶ್ ಶರ್ಮಾ (ಅಜೇಯ 85 ರನ್, 33 ಎಸೆತ 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ (54 ರನ್, 30 ಎಸೆತ, 10 ಬೌಂಡರಿ) ಮತ್ತು ಮಾಯಾಂಕ್ ಅಗರ್ವಾಲ್ (ಅಜೇಯ 41 ರನ್, 23 ಎಸೆತಗಳಲ್ಲಿ 5 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಲಖನೌ ಬೌಲರ್‌ಗಳಲ್ಲಿ ವಿಲಿಯಂ ಒ ರೂರ್ಕ್ ಎರಡು ವಿಕೆಟ್ ಪಡೆದರೆ, ಆಕಾಶ್ ಮಹಾರಾಜ್ ಸಿಂಗ್ ಮತ್ತು ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರಿದೆ. ಕ್ವಾಲಿಫೈಯರ್-1 ರಲ್ಲಿ ಸ್ಥಾನ ಪಡೆದುಕೊಂಡಿದ್ದು, ಮೇ 29 ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ರಲ್ಲಿ ಟೇಬಲ್-ಟಾಪರ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್)