ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 50ನೇ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಮಡವು ರಾಜಸ್ಥಾನ ರಾಯಲ್ಸ್ ವಿರುದ್ಧ 1 ರನ್ಗಳ ರೋಚಕ ಜಯ ಸಾಧಿಸಿದೆ. ಈ ಬಾರಿಯ ಐಪಿಎಲ್ನಲ್ಲಿ ಅಂಪೈರಿಂಗ್ ಹಾಗೂ ಟಾಸ್ ವಿವಾದ ಸಾಕಷ್ಟು ಸದ್ದು ಮಾಡುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ನಡೆದಿದೆ.
ಘಟನೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ರನ್ಔಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರ್ ಸಂಗಕ್ಕರ ಹಾಗೂ ಅಂಪೈರ್ಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ವೈರಲ್ ಆಗಿರುವ ಫೋಟೋ-ವಿಡಿಯೋ ನೋಡುವುದಾದರೆ 15ನೇ ಓವರ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಆವೇಶ್ ಖಾನ್ ಎಸೆದ ಚೆಂಡನ್ನು ಎಸ್ಆರ್ಎಚ್ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಮುನ್ನುಗಿ ಬಾರಿಸಲು ಹೋಗಿ ವಿಫಲರಾಗುತ್ತಾರೆ. ಈ ವೇಳೆ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟಿರುವುದನ್ನು ಗಮನಿಸಿದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡಲೇ ಚೆಂಡನ್ನು ವಿಕೆಟ್ನತ್ತ ಎಸೆಯುತ್ತಾರೆ.
ಕೂಡಲೇ ಬಾಲ್ ವಿಕೆಟ್ಗೆ ಬೀಳುತ್ತದೆ ಮತ್ತು ರಾಜಸ್ಥಾನ ರಾಯಲ್ಸ್ ಆಟಗಾರರು ರನ್ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡುತ್ತಾರೆ. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡುತ್ತಾರೆ. ಇದಕ್ಕೆ ಒಪ್ಪದ ಆಟಗಾರರು ಹಾಗೂ ಕೋಚ್ ಕುಮಾರ್ ಸಂಗಕ್ಕರ ಅಂಪಯರ್ ಬಳಿ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡುತ್ತಾರೆ. ಆದರೆ, ಇದಕ್ಕೆ ಅಂಪೈರ್ ಒಪ್ಪುವುದಿಲ್ಲ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಂಪೈರ್ ನಡೆಗೆ ಕಿಡಿಕಾರಿದ್ದು, ಕೂಡಲೇ ಅವರನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸುತ್ತಿದ್ದಾರೆ.