ನವದೆಹಲಿ: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ನೋಂದಣಿ ಮಾಡಿಕೊಳ್ಳಲು ಇಂದು (ನ.30) ಕೊನೆಯ ದಿನವಾಗಿದೆ. ಡಿ.19ರಂದು ಇದೇ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ದೂರದ ದುಬೈನಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದ್ದು, ತಮ್ಮ ದೇಶದ ಕ್ರಿಕೆಟ್ ಮಂಡಳಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ)ಗಳನ್ನು ಪಡೆದವರು ಹರಾಜಿಗೆ ನೋಂದಣಿ ಮಾಡಿಕೊಳ್ಳಲು ಇಂದು ಕೊನೆಯ ದಿನವಾಗಿದೆ.
ಈ ಬಾರಿಯ ನಿರೀಕ್ಷೆ ಏನು?
ಐಪಿಎಲ್ 17ನೇ ಆವೃತ್ತಿಯ ಹರಾಜಿಗೆ ಸುಮಾರು 700 ಆಟಗಾರರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ.
ದೊಡ್ಡ ಆಟಗಾರರು ಯಾರ್ಯಾರು?
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮಣಿಸಿ, 6ನೇ ಬಾರಿ ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯಾ ಆಟಗಾರರು 10 ಐಪಿಎಲ್ ಫ್ರಾಂಚೈಸಿಗಳ ನಡುವೆ ಹರಾಜಿನಲ್ಲಿ ಭಾರಿ ಪೈಪೋಟಿಯನ್ನು ಹುಟ್ಟು ಹಾಕುವ ಲಕ್ಷಣಗಳಿವೆ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್, ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮತ್ತು ಭಾರತದ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿದ ಟ್ರಾವಿಸ್ ಹೆಡ್ ಅವರಂತಹ ದೊಡ್ಡ ಹೆಸರುಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೆ, ನ್ಯೂಜಿಲೆಂಡ್ ಬ್ಯಾಟರ್ಗಳಾದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ ಹೆಸರು ಕೂಡ ಮುಂಚೂಣಿಯಲ್ಲಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಮೂಲಗಳನ್ನು ಉಲ್ಲೇಖಿಸಿರುವ ಕ್ರಿಕ್‌ಬಜ್ ಪ್ರಕಾರ, ಸ್ಟಾರ್ಕ್ ಅವರನ್ನು ಈಗಾಗಲೇ ಐದು ಐಪಿಎಲ್ ಫ್ರಾಂಚೈಸಿಗಳು ಸಂಪರ್ಕಿಸಿವೆ. ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹರಾಜಿನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ನೋಂದಣಿ ನಂತರದ ಪ್ರಕ್ರಿಯೆ ಏನು?
ನೋಂದಣಿ ಗಡುವು ಮುಗಿಯುತ್ತಿದ್ದಂತೆ ಎಲ್ಲ 10 ಫ್ರಾಂಚೈಸಿಗಳು ಆಟಗಾರರ ಶಾರ್ಟ್ ಲೀಸ್ಟ್ ತಯಾರಿಸಲು ಒಟ್ಟಿಗೆ ಕೂರುತ್ತಾರೆ. ಅಂತಿಮವಾಗಿ ಸುಮಾರು 70 ಆಟಗಾರರು ತಮ್ಮ ಹೆಸರಿನ ಪಕ್ಕದಲ್ಲಿ 'ಸೇಲ್ (ಮಾರಾಟ)' ಟ್ಯಾಗ್ ಹೊಂದಿರುತ್ತಾರೆ. ವಿದೇಶಿ ಆಟಗಾರರಿಗೆ 30 ಸೇರಿದಂತೆ 10 ತಂಡಗಳಲ್ಲಿ 77 ಆಟಗಾರರ ಅವಶ್ಯಕತೆ ಇದೆ. (ಏಜೆನ್ಸೀಸ್)