ಕ್ರೀಡೆ

ಐಪಿಎಲ್-13 ನಡೆಯೋದೇ ಅನುಮಾನ!

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್​ನ 13ನೇ ಆವೃತ್ತಿಯನ್ನು ಏಪ್ರಿಲ್ 15ರವರೆಗೆ ಮುಂದೂಡಿರುವ ಬಿಸಿಸಿಐ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಪೂರ್ಣ ಟೂರ್ನಿಯನ್ನೇ ರದ್ದುಗೊಳಿಸುವ ಸಾಧ್ಯತೆ ಅಧಿಕವಾಗಿದೆ. ಬಿಸಿಸಿಐ ಪದಾಧಿಕಾರಿಗಳು ಮತ್ತು 8 ಫ್ರಾಂಚೈಸಿಗಳ ಮಾಲೀಕರ ನಡುವೆ ಶನಿವಾರ ಒಂದೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಇನ್ನೂ ಕೆಲದಿನಗಳಷ್ಟು ತಡವಾಗಬಹುದು ಎನ್ನಲಾಗಿದೆ.

ಸದ್ಯಕ್ಕೆ ದೇಶದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಕಾದು ನೋಡಲು ಬಿಸಿಸಿಐ ನಿರ್ಧರಿಸಿದೆ. ಐಪಿಎಲ್ ಟೂರ್ನಿಯನ್ನೇ ಮೊಟಕುಗೊಳಿಸುವ ಆಯ್ಕೆಯನ್ನು ಫ್ರಾಂಚೈಸಿ ಮಾಲೀಕರು ಬಿಸಿಸಿಐಗೆ ನೀಡಿದ್ದಾರೆ. ಐಪಿಎಲ್ ಟೂರ್ನಿ ಮುಂಬರುವ ದಿನಗಳಲ್ಲಿ ಯಾವಾಗ ಆರಂಭಗೊಳ್ಳಬಹುದು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕ ನೆಸ್ ವಾಡಿಯಾ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಕೂಡ ಸಭೆಯಲ್ಲಿ ಹಾಜರಿದ್ದರು. ಮೂಲ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಮಾಚ್ 29ರಂದು ಮುಂಬೈನಲ್ಲಿ ಆರಂಭಗೊಳ್ಳಬೇಕಾಗಿತ್ತು. ಆದರೆ ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ವೀಸಾ ನಿರ್ಬಂಧ ಹೇರಿದ್ದು, ಕೆಲವು ರಾಜ್ಯ ಸರ್ಕಾರಗಳೂ ಟೂರ್ನಿಯ ಆತಿಥ್ಯಕ್ಕೆ ಹಿಂದೇಟು ಹಾಕಿವೆ. ಇದರಿಂದಾಗಿ ಬಿಸಿಸಿಐ, ಏಪ್ರಿಲ್ 15ರವರೆಗೆ ಟೂರ್ನಿಯನ್ನು ನಡೆಸದಿರುವ ನಿರ್ಧಾರವನ್ನು ಶುಕ್ರವಾರ ಪ್ರಕಟಿಸಿತ್ತು.

ಬಿಸಿಸಿಐ ನಿರ್ಧಾರಕ್ಕೆ ಫ್ರಾಂಚೈಸಿಗಳ ಸಮ್ಮತಿ: ಕ್ರಿಕೆಟಿಗರು, ಸಿಬ್ಬಂದಿ ಮತ್ತು ಕ್ರಿಕೆಟ್ ಪ್ರೇಮಿಗಳ ಹಿತದೃಷ್ಟಿಯಿಂದ ಐಪಿಎಲ್ ಟೂರ್ನಿಯನ್ನು ಸದ್ಯಕ್ಕೆ ಮುಂದೂಡಿರುವ ಬಿಸಿಸಿಐ ನಿರ್ಧಾರವನ್ನು ಸಭೆಯಲ್ಲಿ ಎಲ್ಲ ಫ್ರಾಂಚೈಸಿಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ‘ಮನುಷ್ಯರ ಆರೋಗ್ಯವೇ ಎಲ್ಲಕ್ಕಿಂತ ಪ್ರಮುಖವಾದುದು. ಹಣಕಾಸಿನ ವಿಚಾರ ಎರಡನೆಯದು. ಆರ್ಥಿಕ ನಷ್ಟದ ಬಗ್ಗೆ ಬಿಸಿಸಿಐ, ಫ್ರಾಂಚೈಸಿಗಳು ಮತ್ತು ನೇರಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ತಲೆಕೆಡಿಸಿಕೊಂಡಿಲ್ಲ. ಸರ್ಕಾರದ ನಿರ್ದೇಶನಗಳನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಈ ತಿಂಗಳ ಅಂತ್ಯದೊಳಗೆ ಯಾವುದೇ ನಿರ್ಧಾರ ಕಷ್ಟಸಾಧ್ಯವಾಗಿದೆ. ಪರಿಸ್ಥಿತಿ ಸುಧಾರಿಸುವುದನ್ನು ಕಾದುನೋಡಬೇಕಿದೆ’ ಎಂದು ನೆಸ್ ವಾಡಿಯಾ ವಿವರಿಸಿದ್ದಾರೆ.

ಸಭೆಯಲ್ಲಿ ಐಪಿಎಲ್ ಬಗ್ಗೆ 6-7 ರೀತಿಯ ಆಯ್ಕೆಗಳನ್ನು ಬಿಸಿಸಿಐ ಮತ್ತು ಫ್ರಾಂಚೈಸಿ ಮಾಲೀಕರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ಮುಂದಿನ ಆಯ್ಕೆಗಳ ಬಗ್ಗೆ ರ್ಚಚಿಸಲು ಬಿಸಿಸಿಐ ಮತ್ತೊಮ್ಮೆ ಸಭೆ ಕರೆಯಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕ ಪಾರ್ಥ ಜಿಂದಾಲ್ ತಿಳಿಸಿದ್ದಾರೆ. ಎಲ್ಲರ ಸುರಕ್ಷತೆಗೆ ಮೊದಲ ಆದ್ಯತೆ. ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಕೋಲ್ಕತ ನೈಟ್​ರೈಡರ್ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ ಕೂಡ ಸಭೆಯಲ್ಲಿ ಹಾಜರಿದ್ದರು.

ವಿದೇಶಕ್ಕೆ ಸ್ಥಳಾಂತರದ ಬಗ್ಗೆ ಚರ್ಚೆ ಇಲ್ಲ: ಪಂದ್ಯಗಳನ್ನು ವಿದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಸಭೆಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗಿದೆ. ಈ ಹಿಂದೆ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ವಿದೇಶಕ್ಕೆ ಸ್ಥಳಾಂತರಿಸಿದ ದೃಷ್ಟಾಂತಗಳಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲ ದೇಶಗಳನ್ನು ಕರೊನಾ ಕಳವಳ ಕಾಡುತ್ತಿರುವ ಕಾರಣ ಈ ಆಯ್ಕೆಯ ಪ್ರಶ್ನೆಯೇ ಬರುವುದಿಲ್ಲ.

ಸದ್ಯಕ್ಕೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆವು. ಪ್ರತಿ ವಾರವೂ ಪರಿಸ್ಥಿತಿ ಪರಿಶೀಲಿಸಲಿದ್ದೇವೆ. ಟೂರ್ನಿ ಭವಿಷ್ಯ ನಿರ್ಧರಿಸಲು ಯಾವುದೇ ಸಮಯ ಮಿತಿ ಹಾಕಿಕೊಂಡಿಲ್ಲ. ಐಪಿಎಲ್ ಆಯೋಜಿಸುವ ಹಂಬಲವಿದ್ದರೂ, ಸುರಕ್ಷತೆ ಬಗ್ಗೆಯೇ ಹೆಚ್ಚಿನ ಗಮನಹರಿಸಿದ್ದೇವೆ. | ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ
ಪಂದ್ಯ ಕಡಿತಗೊಳ್ಳಲಿವೆ ಎಂದ ದಾದಾ

ಏಪ್ರಿಲ್ 15ರ ನಂತರ ಐಪಿಎಲ್ 13ನೇ ಆವೃತ್ತಿ ನಡೆದರೂ ಪಂದ್ಯಗಳ ಸಂಖ್ಯೆ ಕಡಿತಗೊಳ್ಳಲಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ‘ಏಪ್ರಿಲ್ 15ರ ನಂತರ ಟೂರ್ನಿ ಆರಂಭಗೊಂಡರೆ ನಮಗೆ 15 ದಿನ ನಷ್ಟವಾಗಿರುತ್ತದೆ. ಆಗ ಟೂರ್ನಿಯನ್ನು ಕಿರಿದು ಮಾಡುವುದು ಅನಿವಾರ್ಯವಾಗುತ್ತದೆ. ಟೂರ್ನಿಯಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂದು ನಾನು ಈಗ ಹೇಳುವುದು ಕಷ್ಟಸಾಧ್ಯ’ ಎಂದು ಗಂಗೂಲಿ ತಿಳಿಸಿದ್ದಾರೆ.