ಬೆಂಗಳೂರು: ಕರೊನಾ ಹಾವಳಿಯ ನಡುವೆ ಐಪಿಎಲ್ ಆಯೋಜನೆಗಾಗಿ ಬಿಸಿಸಿಐ ಅರಬ್ ರಾಷ್ಟ್ರ ಯುಎಇಯನ್ನು ಆಯ್ಕೆ ಮಾಡಿಕೊಂಡಿದೆ. ಯುಎಇಯಲ್ಲಿ ಸೆಪ್ಟೆಂಬರ್ 19ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ ಮತ್ತು ನವೆಂಬರ್ 8 ಅಥವಾ 10ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಶುಕ್ರವಾರ ಖಚಿತಪಡಿಸಿದ್ದಾರೆ. ಹಾಗಾದರೆ, ಕರೊನಾ ಭೀತಿಯ ನಡುವೆ ಶ್ರೀಮಂತ ಟಿ20 ಟೂರ್ನಿಯ ಆಯೋಜನೆಗಾಗಿ ಬಿಸಿಸಿಐ, ಅರಬ್ ದೇಶವನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತೇ? ಅದಕ್ಕೆ ಸಂಕ್ಷಿಪ್ತವಾದ ವಿವರಗಳು ಇಲ್ಲಿವೆ.
*ಯುಎಇಯಲ್ಲಿ 3 ಸುಸಜ್ಜಿತ ಕ್ರಿಕೆಟ್ ಮೈದಾನಗಳಿವೆ. ದುಬೈನಲ್ಲಿ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ, ಅಬುಧಾಬಿಯಲ್ಲಿ ಶೇಕ್ ಜಯೆದ್ ಸ್ಟೇಡಿಯಂ ಮತ್ತು ಶಾರ್ಜಾದಲ್ಲಿ ಶಾರ್ಜಾ ಗ್ರೌಂಡ್ ಇದೆ. ಇದಲ್ಲದೆ ಈ 3 ಮೈದಾನ ಅಥವಾ ನಗರಗಳ ನಡುವೆ ಹೆಚ್ಚಿನ ಅಂತರವಿಲ್ಲ.
*ದುಬೈನ ಹಾಲಿ ನಿಯಮಾವಳಿ ಪ್ರಕಾರ ಅಲ್ಲಿ, ಕೋವಿಡ್-19 ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವ ವಿದೇಶಿ ಪ್ರವಾಸಿಗರು ಕ್ವಾರಂಟೈನ್ಗೆ ಒಳಪಡುವ ಅಗತ್ಯವಿಲ್ಲ. ಕ್ರಿಕೆಟಿಗರು ಭಾರತದಲ್ಲೇ ಕರೊನಾ ಪರೀಕ್ಷೆಗೆ ಒಳಪಟ್ಟು ಯುಎಇಗೆ ತೆರಳುವ ಕಾರಣ ಕ್ವಾರಂಟೈನ್ ತೊಂದರೆ ಇರುವುದಿಲ್ಲ.
*ಶ್ರೀಲಂಕಾದಿಂದಲೂ ಐಪಿಎಲ್ ಆತಿಥ್ಯಕ್ಕೆ ಆಹ್ವಾನ ಬಂದಿದ್ದರೂ, ಯುಎಇಗೆ ಈ ಹಿಂದೆ ಐಪಿಎಲ್ ಆತಿಥ್ಯ ವಹಿಸಿದ ಅನುಭವವಿದೆ. 2014ರ ಐಪಿಎಲ್ ಟೂರ್ನಿಯ ಮೊದಲ 20 ಪಂದ್ಯಗಳು ಯುಎಇಯಲ್ಲೇ ನಡೆದಿದ್ದವು.
*ಯುಎಇಗೆ ವಿಮಾನ ಪ್ರಯಾಣ ಸುಲಭವಾಗಿದೆ. ವಿದೇಶಿ ಆಟಗಾರರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿಯಲು ಅವಕಾಶವಿದೆ. ಅಲ್ಲಿನ ಎಮಿರೇಟ್ ಏರ್ಲೈನ್ಸ್ ಮತ್ತು ಇತಿಹಾದ್ ಏರ್ವೇಸ್ಗಳು ಈಗಾಗಲೆ ದೈನಂದಿನ ಪ್ರಯಾಣಗಳನ್ನು ಆರಂಭಿಸಿವೆ.
*ದುಬೈನಲ್ಲಿ ಐಸಿಸಿ ಅಕಾಡೆಮಿ ಕೂಡ ಇರುವುದರಿಂದ ಅಲ್ಲಿ ಎಲ್ಲ 8 ತಂಡಗಳಿಗೆ ಅಭ್ಯಾಸ ನಡೆಸಲು ಬೇಕಾಗುವಷ್ಟು ಪಿಚ್ ವ್ಯವಸ್ಥೆಗಳಿವೆ. ಬಿಸಿಲಿನ ಭಯವಿದ್ದರೆ ಒಳಾಂಗಣದಲ್ಲೂ ಅಭ್ಯಾಸ ನಡೆಸಬಹುದಾಗಿದೆ.
*ಯುಎಇಯಲ್ಲಿ 57,988 ಕರೊನಾ ಪ್ರಕರಣ ದಾಖಲಾಗಿದ್ದು, 342 ಮಂದಿ ಮೃತಪಟ್ಟಿದ್ದಾರೆ ಮತ್ತು 50,848 ಸಾವಿರ ಮಂದಿ ಗುಣಮುಖರಾಗಿದ್ದಾರೆ. 7 ಸಾವಿರದಷ್ಟು ಸಕ್ರಿಯ ಪ್ರಕರಣಗಳಿದ್ದರೂ, ಯುಎಇಯಲ್ಲಿ ಸದ್ಯ ಕರೊನಾ ನಿಯಂತ್ರಣದಲ್ಲಿದೆ.
*ಕರೊನಾ ನಿಯಂತ್ರಣದಲ್ಲಿರುವ ಕಾರಣ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಇದು ಫ್ರಾಂಚೈಸಿಗಳಿಗೆ ಟಿಕೆಟ್ ಮಾರಾಟದ ಆದಾಯದಿಂದ ಹೆಚ್ಚಿನ ನಷ್ಟವಾಗದಂತೆ ತಪ್ಪಿಸುತ್ತದೆ.