ನವದೆಹಲಿ: ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಶರಣಾದ ಬೆನ್ನಲ್ಲೇ ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ. ಎಸ್. ಧೋನಿ ವಿರುದ್ಧ ಟೀಂ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಧೋನಿ ಹೇಳಿಕೆಗೆ ತಿರುಗೇಟು ನೀಡಿರುವ ಕ್ರಿಸ್ ಶ್ರೀಕಾಂತ್, ಧೋನಿ ಓರ್ವ ಅತ್ಯುತ್ತಮ ಕ್ರಿಕೆಟಿಗ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಬಳಿಕ ಆಡಿದ ಮಾತುಗಳನ್ನು ಒಪ್ಪಲಾಗದು. ನೀವು ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ನಿಮ್ಮ ಆಯ್ಕೆಯ ಪ್ರಕ್ರಿಯೆಯೇ ತಪ್ಪಾಗಿದೆ ಎಂದು ಧೋನಿಯನ್ನು ಟೀಕಿಸಿದ್ದಾರೆ.
ಕೇದರ್ ಜಾಧವ್ ನಿರಂತರ ವೈಫಲ್ಯ ಕಾಣುತ್ತಿದ್ದಾರೆ. 8 ಪಂದ್ಯಗಳಿಂದ ಕೇವಲ 62 ರನ್ಗಳನ್ನು ಮಾತ್ರ ಗಳಿಸಿದ್ದಾರೆ. 24 ವರ್ಷದ ಎನ್ ಜಗದೀಶನ್ಗೆ ಆರ್ಸಿಬಿ ವಿರುದ್ಧ ಒಂದು ಅವಕಾಶ ನೀಡಲಾಯಿತು. ಮೊದಲ ಪಂದ್ಯದಲ್ಲೇ 28 ಎಸೆತದಲ್ಲಿ 33 ರನ್ ಗಳಿಸಿದ್ದರು. ಅವರಿಗೆ ಈ ಪಂದ್ಯದಲ್ಲೂ ಅವಕಾಶ ನೀಡಬಹುದಾಗಿತ್ತು. ಯುವಕರಲ್ಲಿ ತುಡಿತ ಇಲ್ಲ ಎನ್ನುತ್ತೀರಿ, ಹಾಗಾದರೆ ಜಾಧವ್ರಲ್ಲಿ ತುಡಿತವಿದೆಯೇ? ಪಿಯುಷ್ ಚಾವ್ಲಾರಲ್ಲಿ ಇದೆಯಾ? ಧೋನಿ ಮಾತು ಇದೆಲ್ಲ ಹಾಸ್ಯಸ್ಪದವಾಗಿದ್ದು, ಅವರು ನೀಡಿದ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈಗಲಾದರೂ ಯುವಕರಿಗೆ ಅವಕಾಶ ನೀಡಿ ಎಂದರು. (ಏಜೆನ್ಸೀಸ್)