More

    ಕಮಲ ಪಡೆಗೆ ಖುಷಿ ತಂದ ಆಂತರಿಕ ವರದಿ: ಬಿಜೆಪಿಯನ್ನು ಮೇಲೆತ್ತಿದ ಬಿ.ವೈ. ವಿಜಯೆಂದ್ರ

    ಬೆಂಗಳೂರು: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಅಖಾಡದಲ್ಲಿ ಪ್ರಚಾರದ ಭರಾಟೆಯು ಕರೊನಾತಂಕವನ್ನು ಹಿಮ್ಮೆಟ್ಟಿಸಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಮುಂಚೂಣಿ ನಾಯಕರು ಜಿದ್ದಿಗೆ ಬಿದ್ದ ಪರಿಣಾಮ ಪಕ್ಷಾಂತರ ಪರ್ವ ಏರುಮುಖವಾಗಿದೆ. ಈ ಮಧ್ಯೆ, ಸರ್ಕಾರ ತರಿಸಿಕೊಂಡ ಆಂತರಿಕ ಮೌಲ್ಯಮಾಪನ ವರದಿಯಲ್ಲಿ ಕಮಲ ಪಡೆಯ ಖುಷಿ ಇನ್ನಷ್ಟು ಹೆಚ್ಚಿಸಿ, ಹುರಿದುಂಬಿಸುವ ಅಂಶಗಳಿವೆ ಎಂದು ಮೂಲಗಳು ತಿಳಿಸಿವೆ. ಆರ್​ಆರ್ ನಗರ ಕ್ಷೇತ್ರದ ವಸ್ತುಸ್ಥಿತಿ ಬಿಜೆಪಿಗೆ ಆಶಾದಾಯಕವಾಗಿದ್ದರೆ, ಗಟ್ಟಿ ನೆಲೆಯಿಲ್ಲದ ಶಿರಾ ಕ್ಷೇತ್ರದಲ್ಲಿ ನೇರ ಪೈಪೋಟಿ ಒಡ್ಡುವಷ್ಟು ಬಲ ವೃದ್ಧಿಸಿಕೊಂಡಿದೆ.

    ವರ್ಚಸ್ಸು + ನಿಕಟತೆ: ಅಧಿಕಾರದಲ್ಲಿರುವ ಪಕ್ಷವೆಂಬ ಪ್ರಭಾವ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಪೂರಕ ವಾತಾವರಣ ಸೃಷ್ಟಿಸಿದೆ. ಹಾಗೆಯೇ ಆರ್​ಆರ್ ನಗರವನ್ನು 2 ಬಾರಿ ಪ್ರತಿನಿಧಿಸಿದ್ದ ಪಕ್ಷದ ಅಭ್ಯರ್ಥಿ ಮುನಿರತ್ನ ಸಾಧಿಸಿರುವ ನಿಕಟ ಸಂಪರ್ಕ, ಕರೊನಾ ಕಷ್ಟ ಕಾಲದಲ್ಲಿ ಸ್ಪಂದಿಸಿದ ಬಗೆಯು ನೆರವಾಗಲಿದೆ. ಪ್ರತಿಯೊಂದು ಬೂತ್​ನಲ್ಲಿ ಸಕ್ರಿಯ ಕಾರ್ಯಕರ್ತರ ಪಡೆ ಇದೆ. ಮನೆ ಮನೆಗೆ ತೆರಳಿ ಭೇಟಿ ಮಾಡುವಂತಹ ಕ್ರಿಯಾಶೀಲತೆಯೂ ಅನುಕೂಲಕರ ಅಂಶಗಳಾಗಿವೆ. ಹಾಗಂತ ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪಕ್ಷದ ಘಟಾನುಘಟಿ ನಾಯಕರ ರಣತಂತ್ರವು ಸ್ಪರ್ಧೆಯ ತುರುಸು ಹೆಚ್ಚಲು ಕಾರಣವಾಗಿದೆ. ಕರೊನಾ ಎಫೆಕ್ಟ್​ನಿಂದಾಗಿ ಮತದಾನ ಪ್ರಮಾಣ ಇಳಿಮುಖವಾದರೆ ಮುನಿರತ್ನ ಮತಗಳಿಕೆ ತಗ್ಗಲಿದೆ ಎಂಬ ಅಂಶವು ವರದಿಯಲ್ಲಿ ಪ್ರಸ್ತಾಪವಾಗಿದೆ ಎಂದು ಮೂಲಗಳು ಹೇಳಿವೆ.

    ಬಿಜೆಪಿಯನ್ನು ಮೇಲೆತ್ತಿದ ಬಿ.ವೈ. ವಿಜಯೆಂದ್ರ

    ಶಿರಾದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದ್ದುದು ರಹಸ್ಯವೇನಲ್ಲ. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿರಾ ಅಖಾಡಕ್ಕಿಳಿಯುತ್ತಿದ್ದಂತೆ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಅಸಮಾಧಾನ ತಣಿಸಿ ಪಕ್ಷದ ಎಲ್ಲ ಮುಖಂಡರನ್ನು ಒಟ್ಟಿಗೆ ಕರೆದೊಯ್ಯುವ ವಿಜಯೇಂದ್ರ ಪ್ರಯತ್ನ ಫಲ ನೀಡುತ್ತಿದೆ. ಹಾಗೆಯೇ ಪ್ರತಿಪಕ್ಷಗಳ ಪ್ರಭಾವಿಗಳನ್ನು ಸೆಳೆದುಕೊಳ್ಳಲು ವರ್ಕೌಟ್ ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದ್ದು, ಸ್ಪರ್ಧೆಗೆ ಬಲ ತುಂಬಿದೆ ಎಂಬ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎನ್ನಲಾಗಿದೆ.

    6 ನಾಮಪತ್ರ ವಾಪಸ್

    ಬೆಂಗಳೂರು: ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಉಪಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಶಿರಾದಲ್ಲಿ ಇಬ್ಬರು ಮತ್ತು ಆರ್.ಆರ್.ನಗರದಲ್ಲಿ 4 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ. ಶಿರಾದಲ್ಲಿ ನಿಸಾರ್ ಅಹಮದ್ ಮತ್ತು ತಿಮ್ಮರಾಜ್ ಗೌಡ ಹಾಗೂ ಆರ್.ಆರ್.ನಗರದಲ್ಲಿ ಸಿ.ಆನಂದನ್, ಆರ್.ಕುಮಾರ್, ಮುನಿರತ್ನ ಹಾಗೂ ಮುನಿರತ್ನಮ್ಮ ಕಣದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಶಿರಾದಲ್ಲಿ 15 ಹಾಗೂ ಆರ್.ಆರ್. ನಗರದಲ್ಲಿ 16 ಮಂದಿ ಕಣದಲ್ಲಿ ಉಳಿದಿದ್ದಾರೆ.

    ಭರ್ಜರಿ ಯಶಸ್ಸಿನ ಉತ್ಸಾಹ

    ಕಾಂಗ್ರೆಸ್​ನ ಹಿರಿಯ ಧುರೀಣ ಟಿ.ಬಿ.ಜಯಚಂದ್ರ ಎದುರಿಗೆ ಬಿಜೆಪಿಯು ಹೊಸ ಮುಖ ಡಾ.ರಾಜೇಶ ಗೌಡರನ್ನು ಕಣಕ್ಕಿಳಿಸಿದ್ದು, ನೇರ ಹಣಾಹಣಿ ಸಾಧ್ಯತೆಗಳಿವೆ. ಕ್ಷೇತ್ರದಲ್ಲಿ ಕಮಲ ಪಕ್ಷಕ್ಕೆ ಭದ್ರ ನೆಲೆಯಿಲ್ಲದ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ 17,000 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಈ ಬಾರಿ ಚೇತೋಹಾರಿ ಅಲೆ ಇದೆ. ವಿಧಾನಸಭೆಯಲ್ಲಿ ಸಂಖ್ಯಾ ಬಲ ವೃದ್ಧಿಸಿಕೊಳ್ಳುವ ಛಲ, ಇತ್ತೀಚಿನ ಉಪ ಚುನಾವಣೆ ಗಳಲ್ಲಿ ಭರ್ಜರಿ ಯಶಸ್ಸಿನ ಉತ್ಸಾಹದೊಂದಿಗೆ ಮುಖಂಡರು ಭೂಮಿಕೆ ಸಿದ್ಧಪಡಿಸಿದ್ದಾರೆ. ಶಿರಾದಲ್ಲಿ ವಿಲೀನಕ್ಕೆ ಮುನ್ನ ಕಳ್ಳಂಬೆಳ್ಳ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿದ್ದ ಕಾಂಗ್ರೆಸ್​ನ ಜಯಚಂದ್ರ ಸಾಕಷ್ಟು ಬೆವರಿಳಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಅಗಲಿದ ಶಾಸಕ ಬಿ.ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಪ್ರಚಾರದಲ್ಲಿ ಹಿಂದೆ ಬಿದ್ದಿರುವ ಕಾರಣ ಜೆಡಿಎಸ್ ಮತಗಳನ್ನು ರಾಜೇಶಗೌಡ ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts