More

    ಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ ಆಗಲಿ

    ಬಸವಕಲ್ಯಾಣ: ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ನೂತನ ಅನುಭವ ಮಂಟಪಕ್ಕೆ ಚೈತನ್ಯ ಶಕ್ತಿ ತುಂಬಬೇಕಾದರೆ ಅನುಭವ ಮಂಟಪ ಪರಿಸರದಲ್ಲಿ ರಾಜ್ಯ ಸರ್ಕಾರವೇ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಬಸವ ತತ್ವ ಜಾಗತಿಕ ಮಟ್ಟದಲ್ಲಿ ಪ್ರಚಾರ-ಪ್ರಸಾರಕ್ಕೆ ಇದು ಅವಶ್ಯಕ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರತಿಪಾದಿಸಿದರು.

    ನಿರಗುಡಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ನವತರುಣ ಟ್ರಸ್ಟ್ ಹಾಗೂ ಸಮಸ್ತ ಸದ್ಭಕ್ತರಿಂದ ಭಾನುವಾರ ಆಯೋಜಿಸಿದ್ದ ಇಷ್ಟಲಿಂಗಪೂಜಿತ ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿಎಂ ಘೋಷಿಸಿದ್ದಾರೆ. ಸಮಾನತೆ ಸಂದೇಶ ಸಾರಿದ ನೆಲದಲ್ಲಿ ವಚನ ವಿವಿ ಸ್ಥಾಪಿಸಿದರೆ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದರು.

    ವಚನ ವಿವಿ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿ ಅವಶ್ಯಕತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್ ಸಿಎಂ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.

    ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ ಮಾತನಾಡಿ, ಇಷ್ಟಲಿಂಗ ಪೂಜೆನಿರತ ಬಸವಣ್ಣನವರ ಮೂರ್ತಿ ಅನಾವರಣದಿಂದ ನಿರಗುಡಿ ಬಸವ ಮಹಾಮಯವಾಗಿದೆ. ಗ್ರಾಮಸ್ಥರು ನಿತ್ಯ ಬಸವ ತತ್ವ ಆಚರಣೆಯಲ್ಲಿ ತೊಡಗಿಕೊಂಡರೆ ಮನಸ್ಸು ಪರಿವರ್ತನೆ ಆಗಲಿದೆ ಎಂದರು.

    ಮಾಜಿ ಸಚಿವ ರಾಜಶೇಖರ್ ಪಾಟೀಲ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ, ಗ್ರಾಮಸ್ಥರ ಮನವಿ ಮೇರೆಗೆ ಕಳೆದ ನನ್ನ ಅವಧಿಯಲ್ಲಿ ಐದು ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಜತೆಗೆ ವೈಯಕ್ತಿಕವಾಗಿಯೂ ಧನಸಹಾಯ ಮಾಡಿರುವೆ ಎಂದು ತಿಳಿಸಿದರು.‘

    ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಗುಣತೀರ್ಥ ವಾಡಿಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು.

    ಬಸವ ಮಹಾಮನೆ ಜಗದ್ಗುರು ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಮಂಠಾಳದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸಸ್ತಾಪುರದ ಶ್ರೀ ಸದಾನಂದ ಸ್ವಾಮೀಜಿ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಗ್ರಾಪಂ ಅಧ್ಯಕ್ಷೆ ಸಂಧ್ಯಾ ಶಿವರಾಜ ಪಾಟೀಲ್, ಸದಾನಂದ ಹಳ್ಳೆ, ದಿಲೀಪ ಸೂರ್ಯವಂಶಿ, ವಿಠಲರಡ್ಡಿ ಪಾಟೀಲ್, ವಿಶ್ವನಾಥ ಸಂಗನಬಟ್ಟೆ, ನಾಮದೇವ ರೆಡ್ಡಿ, ಅಶೋಕ ಖೇಲಜಿ, ಗುರುನಾಥ ಮೂಲಗೆ, ನಾಗಯ್ಯ ಸ್ವಾಮಿ, ಯುವರಾಜ ಪಾಟೀಲ್, ಉಮಾಕಾಂತ ಮೂಲಗೆ, ಸಂತೋಷ ಸ್ವಾಮಿ, ಹಣಮಂತ ಮೂಲಗೆ, ವನಿತಾ ಕಾಂಬಳೆ, ರಾಜಕುಮಾರ ಧನಮಲ್ಲೆ ಇತರರಿದ್ದರು.

    ಹೊಸ ಅಧ್ಯಾಯ ಆರಂಭ: ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ.ಆದರೆ ಹಾಲಿ ಹುಮನಾಬಾದ್ ಶಾಸಕರು ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ರಾಜಶೇಖರ ಪಾಟೀಲ್ ಅವರನ್ನು ಕರೆದರೆ ನಾನು ಬರಲ್ಲ ಎಂದು ಅಹಂಕಾರದ ಮಾತುಗಳನ್ನಾಡಿರುವುದಕ್ಕೆ ರಾಜಶೇಖರ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಮಹಾತ್ಮರ ಕಾರ್ಯಕ್ರಮಗಳಲ್ಲಿ ರಾಜಕೀಯ ಮಾಡಬಾರದು, ರಾಜಕೀಯಕ್ಕೆ ಬೇರೆ ವೇದಿಕೆಗಳಿವೆ. ಅವರು ಈಗಷ್ಟೇ ರಾಜಕೀಯದಲ್ಲಿ ಕಣ್ಣು ತೆರೆದಿದ್ದಾರೆ. ಕ್ಷೇತ್ರ ಅಭಿವೃದ್ಧಿಪಡಿಸಲಿ. ನಾನು ಜನ್ಮದಿಂದಲೂ ರಾಜಕೀಯವನ್ನು ಹತ್ತಿರದಿಂದ ನೋಡಿರುವೆ ಎಂದು ತಿರುಗೇಟು ನೀಡಿದರು. ಬಸವಕಲ್ಯಾಣದಲ್ಲಿ ಕಾರ್ಯಕ್ರಮ ನಡೆದರೆ ಶಾಸಕ ಶರಣು ಸಲಗರ ಕರೆದು ಆತ್ಮೀಯವಾಗಿ ಮಾತನಾಡಿಸುತ್ತಾರೆ. ಆದರೆ ಹುಮನಾಬಾದ್ ಶಾಸಕರು ನನ್ನನ್ನು ಕಡೆಗಣಿಸಿದರೆ ನಾನು ಸಹ ಇಂದಿನಿಂದ ಅವರನ್ನು ಕಡೆಗಣಿಸುವೆ. ಇಂದಿನಿಂದ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ವೇದಿಕೆಯಲ್ಲಿ ಹೇಳುವ ಮೂಲಕ ಟಾಂಗ್ ನೀಡಿದರು.

    ದೇಶದಲ್ಲಿ ಸಂಪೂರ್ಣವಾಗಿ ಜಾತಿ ನಿರ್ಮೂಲನೆಯಾಗಬೇಕು. ಸಮಾನತೆ, ಸಾಮರಸ್ಯ ನೆಲೆಸಬೇಕು. ಶರಣರ ಸಂಕಲ್ಪವೂ ಇದೇ ಆಗಿತ್ತು. ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ, ಅವರು ಮನುಕುಲದ ಉದ್ಧಾರಕರು. ನಿರಗುಡಿ ೧೨ನೇ ಶತಮಾನದಲ್ಲಿ ನೀರು ಕುಡಿಸಿ ದಾಸೋಹಗೈದ ಗ್ರಾಮ. ಇಂದು ಇಲ್ಲಿ ಮೂರ್ತಿ ಅನಾವರಣಗೊಂಡಿದ್ದು ಸಂತಸ ತಂದಿದೆ.
    | ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಹುಲಸೂರು

    ಗುರು ಬಸವಣ್ಣನವರು ಶೋಷಿತರ ಉದ್ಧಾರಕರಾಗಿದ್ದಾರೆ. ಸಮಾನತೆಗಾಗಿ ಶ್ರಮಿಸಿ ಸಮ-ಸಮಾಜ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ನಿರಗುಡಿಯಲ್ಲಿ ಭವ್ಯ ಮೂರ್ತಿ ಅನಾವರಣಗೊಳಿಸಲಾಗಿದೆ. ಪ್ರತಿವರ್ಷ ಬಸವ ಜಯಂತಿಯಂದು ಗ್ರಾಮಸ್ಥರು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಬೇಕು.
    | ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಗುಣತೀರ್ಥ ವಾಡಿ

    ಇಂದು ಯುವ ಸಮೂಹ ದಾರಿ ತಪ್ಪುತ್ತಿದೆ. ಅಂತ್ಯಸಂಸ್ಕಾರದಲ್ಲಿ ವೃದ್ಧರು ಭಾಗವಹಿಸುತ್ತಿರುವುದು ದುಃಖಕರ ಸಂಗತಿ. ಮಕ್ಕಳಿಗಾಗಿ ಆಸ್ತಿ ಮಾಡದೆ ಅವರಿಗೆ ಒಳ್ಳೆಯ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ರೂಪಿಸುವ ಅಗತ್ಯವಿದೆ.
    | ಶ್ರೀ ರಾಜೇಶ್ವರ ಶಿವಾಚಾರ್ಯ ತಡೋಳಾ

    ಅನುಭವ ಮಂಟಪ ಮೂಲಕ ಬಸವಣ್ಣನವರು ವಚನ ಸಾಹಿತ್ಯದಿಂದ ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದ್ದಾರೆ. ಅನುಭವ ಮಂಟಪದಲ್ಲಿ ೭೭೦ ಶರಣರು ಮಾಡಿದ ಕ್ರಾಂತಿ ಐತಿಹಾಸಿಕ. ಜತೆಗೆ ವಿಶ್ವಕ್ಕೆ ಪ್ರಪ್ರಥಮ ಪಾರ್ಲಿಮೆಂಟ್ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
    | ಬಸವರಾಜ ಧನ್ನೂರ ಜಿಲ್ಲಾಧ್ಯಕ್ಷ, ಜಾಗತಿಕ ಲಿಂಗಾಯತ ಮಹಾಸಭಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts