ಲಂಡನ್: ಅಫ್ಘಾನಿಸ್ತಾನ ತಂಡ ವಿಶ್ವಕಪ್ನಲ್ಲಿ ತೋರಿದ ಅಮೋಘ ನಿರ್ವಹಣೆಯಿಂದ 2025ರ ಚಾಂಪಿಯನ್ಸ್ ಟ್ರೋಫಿಗೆ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಈಗಾಗಲೆ ಟಿ20 ಕ್ರಿಕೆಟ್ ಸೇರ್ಪಡೆಗೊಂಡಿರುವ ನಡುವೆ, ಅಫ್ಘಾನಿಸ್ತಾನಕ್ಕೆ ಅದರಲ್ಲಿ ಸ್ಪರ್ಧಿಸುವ ಅವಕಾಶ ಲಭಿಸುವುದು ಅನುಮಾನವೆನಿಸಿದೆ.
ಆಫ್ಘನ್ ತಾಲಿಬಾನ್ ಆಡಳಿತಕ್ಕೆ ಒಳಪಟ್ಟ ಬಳಿಕ ಮಹಿಳೆಯರಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ನಿರ್ಬಂಧ ಹೇರಲಾಗಿದೆ. ಇದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಲಿಂಗ ಸಮಾನತೆಯ ಧ್ಯೇಯದ ಉಲ್ಲಂನೆಯಾಗಿದೆ. ಆದರೆ ಈ ಸಂಬಂಧ ಆಫ್ಘನ್ಗೆ ಒಲಿಂಪಿಕ್ಸ್ನಿಂದ ನಿಷೇಧ ಹೇರುವಲ್ಲಿ ಐಸಿಸಿಗೆ ಯಾವುದೇ ಪಾತ್ರ ಇರುವುದಿಲ್ಲ. ಒಲಿಂಪಿಕ್ಸ್ನಿಂದ ಅಫ್ಘಾನಿಸ್ತಾನವನ್ನು ದೂರವಿಡುವ ಬಗ್ಗೆ ಐಒಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡೈಸ್ ತಿಳಿಸಿದ್ದಾರೆ.
2028ಕ್ಕೆ ಮುನ್ನ 2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದಲೂ ಅಫ್ಘಾನಿಸ್ತಾನಕ್ಕೆ ಐಒಸಿ ನಿಷೇಧ ಹೇರುವ ಸಾಧ್ಯತೆಗಳಿವೆ. ಮಹಿಳೆಯರನ್ನು ಕ್ರೀಡೆಯಿಂದ ರ್ನಿಬಂಧಿಸಿರುವುದನ್ನು ವಿರೋಧಿಸಿ ಆಸ್ಟ್ರೆಲಿಯಾವೂ ಸದ್ಯ ಆಫ್ಘನ್ ವಿರುದ್ಧ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ.