ಕ್ರೀಡೆ

ಇಂಥಾ ಮಾತು ಯಾರಿಂದಲೂ ಬರಬಾರದು! ದಿಗ್ಗಜರ ವಿರುದ್ಧ ಕಿಡಿಕಾರಿದವರಿಗೆ ಇಂಜಮಾಮ್​ ಎಚ್ಚರಿಕೆ | Legendary Cricketers

Legendary Cricketers: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿ, ಎರಡು ವರ್ಷದ ಅವಧಿಯಲ್ಲಿ ಎರಡನೇ ಐಸಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಟೂರ್ನಿಯಲ್ಲಿ ಬಹು ವರ್ಷಗಳ ಬಳಿಕ ಆತಿಥೇಯರಾಗಿ ಚಾಂಪಿಯನ್ಸ್ ಟ್ರೋಫಿ ಅಖಾಡಕ್ಕಿಳಿದಿದ್ದ ಪಾಕಿಸ್ತಾನ, ಆತಿಥಿಯಾಗಿ ಹೊರನಡೆದಿದ್ದು ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ದೊಡ್ಡ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಹಿರಿಯ ಕ್ರಿಕೆಟಿಗರ ನಡುವೆಯೇ ತೀವ್ರ ಮನಸ್ತಾಪಗಳು ಭುಗಿಲೆದ್ದಿವೆ. ಈ ವಿಚಾರಗಳು ಸದ್ಯ ಪಾಕ್​ ತಂಡದಲ್ಲಿ ಯಾವುದೂ ಸರಿಯಿಲ್ಲ ಅನ್ನೋದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆತಿಥೇಯರಾಗಿ ಅಖಾಡಕ್ಕಿಳಿದ ಪಾಕಿಸ್ತಾನ ತಂಡ, ಮೊದಲೆರೆಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ತಮ್ಮ ಚಾಂಪಿಯನ್ಸ್​ ಕನಸನ್ನು ನುಚ್ಚುನೂರು ಮಾಡಿಕೊಂಡಿತು. ಇದೇ ಪಾಕ್​ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ತಮ್ಮದೇ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಮಾಜಿ ಆಟಗಾರರು ಮೊಹಮ್ಮದ್ ರಿಜ್ವಾನ್ ತಂಡವನ್ನು ವ್ಯಾಪಕವಾಗಿ ಟೀಕಿಸಿದ್ದರು. ಆತಿಥೇಯರಾಗಿ ಸೋತಿದ್ದಕ್ಕೆ ಪಾಕ್ ತಂಡವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗ ಇಂಜಮಾಮ್​ ಉಲ್​-ಹಕ್​ ಮತ್ತು ಮೊಹಮ್ಮದ್​ ಹಫೀಜ್​ ನಡುವೆ ಸದ್ಯ ದೊಡ್ಡ ಮಾತಿನ ಸಮರವೇ ನಡೆಯುತ್ತಿದೆ.

ಮೊಹಮ್ಮದ್​ ರಿಜ್ವಾನ್ ತಂಡ ಚಾಂಪಿಯನ್ಸ್​ ಟ್ರೋಫಿಯಲ್ಲಿ ಗೆಲುವು ಸಾಧಿಸಲಿಲ್ಲ ಎಂದು ಕಿಡಿಕಾರಿದ್ದ ಇಂಜಮಾಮ್​ಗೆ ತಿರುಗೇಟು ನೀಡಿದ್ದ ಹಫೀಜ್​, "90ರ ದಶಕದಲ್ಲಿ ಆಡಿದ ದಿಗ್ಗಜರು ನಮಗೆ ತಂದುಕೊಟ್ಟಿದ್ದೇನು? ಯಾವ ಪ್ರತಿಷ್ಠಿತ ಪ್ರಶಸ್ತಿಗಳನ್ನು ದೇಶಕ್ಕೆ ಗೆದ್ದು ಕೊಟ್ಟಿದ್ದಾರೆ? ಹೇಳಲಿ" ಎಂದು ತಮ್ಮ ಆಕ್ರೋಶ ಹೊರಹಾಕಿದ್ದರು. ಇದೀಗ ಹಫೀಜ್​ ಮಾತಿನಿಂದ ಕೆರಳಿರುವ ಇಂಜಮಾಮ್​, "ದಿಗ್ಗಜರಾದ ವಾಸಿಮ್ ಅಕ್ರಂ ಮತ್ತು ವಾಖರ್​ ಯೂನಿಸ್​ರಂತಹ ಆಟಗಾರರು ಪಾಕಿಸ್ತಾನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಲ್ಲದೆ ಹೋಗಿದ್ದರೆ ಪಾಕಿಸ್ತಾನ ತಂಡಕ್ಕೆ ಬಲವೇ ಇರುತ್ತಿರಲಿಲ್ಲ" ಎಂದು ಹೇಳಿದ್ದಾರೆ.

"90ರ ದಶಕದ ದಿಗ್ಗಜರು ಇಲ್ಲದಿದ್ದರೆ, ಪಾಕಿಸ್ತಾನ ಕ್ರಿಕೆಟ್​ಗೆ ತೂಕವೇ ಇರುತ್ತಿರಲಿಲ್ಲ. 1990ರ ನಂತರ, ವಿಶ್ವಕಪ್​ ಗೆದ್ದ ಆಟಗಾರ ಮತ್ತು ತಂಡಕ್ಕೆ ಅತ್ಯುನ್ನತ ಕೊಡುಗೆ ನೀಡಿದವರು ಇದೇ ದಶಕದ ಕ್ರಿಕೆಟಿಗರು ಎಂಬುದು ನಿಮ್ಮ ನೆನಪಿನಲ್ಲಿರಲಿ ಹಫೀಜ್​. 90ರ ದಂತಕಥೆಗಳು ಪಾಕ್ ಕ್ರಿಕೆಟ್​ಗೆ ಅತಿ ಮುಖ್ಯ. ಇಂತಹ ಹೇಳಿಕೆಗಳನ್ನು ಕೊಡುವ ಮುನ್ನ ಹತ್ತು ಬಾರಿ ಯೋಚಿಸಿ. ಇಲ್ಲಿ ನಾನು ಹಫೀಜ್​ ಅವರ ಹೇಳಿಕೆಗಳನ್ನು ನೇರವಾಗಿ ಕೇಳಿಲ್ಲ. ಹಾಗಾಗಿ, ಅವರ ಮಾತಿನ ಆಳವೇನು ಎಂಬುದು ನನಗೆ ಸ್ಪಷ್ಟವಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).