ಬೆಂಗಳೂರು: ಮನುಷ್ಯನಿಗೂ ಶ್ವಾನಗಳಿಗೂ ಎಲ್ಲಿಲ್ಲದ ನಂಟು. ದೈನಂದಿನ ಜೀವನದ ಭಾಗವಾಗಿರುತ್ತವೆ ಈ ಶ್ವಾನಗಳು. ಪ್ರೀತಿ ಪಾತ್ರರಿಗೆ ಅಷ್ಟೇ ಭಾವನಾತ್ಮಕ ನಂಟು ಹೊಂದಿರುತ್ತವೆ. ಶ್ವಾನವನ್ನು ಪ್ರೀತಿಸದ, ಸಾಕದ ಮನುಷ್ಯ ಸಿಗಲಾರ. ಹೀಗೆ ಶ್ವಾನಗಳಿಗೂ ಒಂದು ದಿನ ಉಂಟು. ಇಂದು (ಆ.26) ಅಂತಾರಾಷ್ಟ್ರೀಯ ಶ್ವಾನಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕ್ರಿಕೆಟಿಗರು ವೃತ್ತೀಜಿವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಶ್ವಾನಗಳೊಂದಿಗೆ ಕಾಲ ಕಳೆಯುವುದನ್ನು ಮಾತ್ರ ಮರೆಯುವುದಿಲ್ಲ..
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರ ಶ್ವಾನ ಪ್ರೀತಿ ನಮಗೆಲ್ಲರಿಗೂ ಗೊತ್ತೇ ಇದೆ. ದಿನಪೂರ್ತಿ ಕ್ರಿಕೆಟ್ನಲ್ಲಿ ಮುಳುಗಿದರೂ ಶ್ವಾನಗಳೊಂದಿಗೆ ಆಟವಾಡುವ ಸಲುವಾಗಿಯೇ ಸ್ವಲ್ಪ ಸಮಯ ನಿಗದಿಪಡಿಸಿಕೊಂಡಿರುತ್ತಾರೆ ಈ ಕ್ರಿಕೆಟಿಗರು. ಕೇವಲ ಕೊಹ್ಲಿ, ರಾಹುಲ್ ಕಥೆಯಲ್ಲೇ ಬಹುತೇಕ ಕ್ರಿಕೆಟಿಗರು ವಿವಿಧ ತಳಿಯ ಶ್ವಾನಗಳನ್ನು ಹೊಂದಿದ್ದಾರೆ. ಇಂದು ಅಂತಾರಾಷ್ಟ್ರೀಯ ಶ್ವಾನಗಳ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಶ್ವಾನಗಳೊಂದಿಗೆ ಪೋಸ್ ನೀಡಿದ್ದಾರೆ ಕ್ರಿಕೆಟಿಗರು..
ಐಪಿಎಲ್ನಲ್ಲಿ ಆಡಲು ಯುಎಇಯಲ್ಲಿರುವ ಆಟಗಾರರು ತಮ್ಮ ಶ್ವಾನಗಳೊಂದಿಗಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಜತೆಗೆ ಫ್ರಾಂಚೈಸಿಗಳಾದ ಆರ್ಸಿಬಿ, ಡೆಲ್ಲಿ, ಮುಂಬೈ, ಸನ್ರೈಸರ್ಸ್ ಹಾಗು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಆಟಗಾರರು ಶ್ವಾನಗಳೊಂದಿಗೆ ಇರುವ ಚಿತ್ರಗಳನ್ನು ಪ್ರಕಟಿಸಿವೆ. ಅಲ್ಲದೆ, ಟೆನಿಸ್ ಆಟಗಾರ್ತಿ ಸೆರೇನಾ ವಿಲಿಯಮ್ಸ್, ಫುಟ್ ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕೂಡ ಶ್ವಾನ ಪ್ರೀತಿಯನ್ನು ಅನಾವರಣಗೊಳಿಸಿದ್ದಾರೆ.