ಬೆಂಗಳೂರು: ಬಹುನಿರೀತ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಎರಡೂವರೆ ವಾರವಷ್ಟೇ ಬಾಕಿ ಉಳಿದಿದೆ. ಆದರೆ ಟೂರ್ನಿಯಲ್ಲಿ ಆಡುತ್ತಿರುವ ಹೆಚ್ಚಿನ ತಂಡಗಳಿಗೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ತಲೆನೋವು ತರಲಾರಂಭಿಸಿದೆ.
ಆಸ್ಟ್ರೆಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ದಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎಡಗೈ ಮೂಳೆಮುರಿತಕ್ಕೀಡಾಗಿದ್ದು, ವಿಶ್ವಕಪ್ಗೆ ಲಭ್ಯರಾಗುವುದು ಅನುಮಾನವೆನಿಸಿದೆ. ಇನ್ನು ಪ್ಯಾಟ್ ಕಮ್ಮಿನ್ಸ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರಾನ್ ಗ್ರೀನ್ ಮೊದಲೇ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಲಗೈ ಹೆಬ್ಬೆರಳಿನ ಮೂಳೆ ಮುರಿತದಿಂದಾಗಿ ವಿಶ್ವಕಪ್ನಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಪಾಕಿಸ್ತಾನ ತಂಡದ ಯುವ ವೇಗಿ ನಸೀಮ್ ಷಾ ಏಷ್ಯಾಕಪ್ನಲ್ಲಿ ಭಾರತ ವಿರುದ್ಧದ ಪಂಧ್ಯದ ವೇಳೆ ಬಲಭುಜದ ಸ್ನಾಯು ನೋವು ಎದುರಿಸಿದ್ದು, ವಿಶ್ವಕಪ್ ಆಡುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಕಾಣಿಸಿದೆ. ಪಾಕಿಸ್ತಾನದ ಇತರ ಆಟಗಾರರಾದ ಇಮಾಮ್ ಉಲ್ ಹಕ್, ಹ್ಯಾರಿಸ್ ರೌಫ್, ಅಘಾ ಸಲ್ಮಾನ್ ಕೂಡ ಏಷ್ಯಾಕಪ್ ವೇಳೆ ಗಾಯಗೊಂಡಿದ್ದಾರೆ.
ಶ್ರೀಲಂಕಾ ತಂಡದ ಗಾಯಾಳುಗಳ ಪಟ್ಟಿಗೆ ಮಹೀಶ್ ತೀಕ್ಷಣ ಹೊಸ ಸೇರ್ಪಡೆಯಾಗಿದ್ದಾರೆ. ಈ ಮುನ್ನ ಲಂಕಾದ ವನಿಂದು ಹಸರಂಗ, ದಿಲ್ಶನ್ ಮಧುಶಂಕ, ದುಶ್ಮಂತ ಚಮೀರ ಗಾಯಗೊಂಡಿದ್ದರು. ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ಮತ್ತೆ ಫಿಟ್ನೆಸ್ ಸಮಸ್ಯೆ ಎದುರಿಸಿದ್ದರೆ, ಅಕ್ಷರ್ ಪಟೇಲ್ ಕೂಡ ಅದೇ ಚಿಂತೆ ಹುಟ್ಟುಹಾಕಿದ್ದಾರೆ. ದಣ ಆಫ್ರಿಕಾ ತಂಡದಲ್ಲಿ ನಾಯಕ ಟೆಂಬಾ ಬವುಮಾ, ಅನ್ರಿಚ್ ನೋಕಿಯ ಮತ್ತು ಸಿಸಾಂಡ ಮಗಲ ಗಾಯದಿಂದ ಬಳಲುತ್ತಿದ್ದು, ಆಸೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಬಾಂಗ್ಲಾ ತಂಡದಲ್ಲಿ ತಮೀಮ್ ಇಕ್ಬಾಲ್, ನಜ್ಮುಲ್ ಹೊಸೈನ್ ಶಾಂಟೊ, ಇಬಾದತ್ ಹುಸೇನ್ ಗಾಯಾಳುಗಳಾಗಿದ್ದಾರೆ.