ಕ್ರೀಡೆ

ಚಿನ್ನದ ಮೇಲೆ ನೀರಜ್​ ಕಣ್ಣು; ಜಾವೆಲಿನ್​ ಎಸೆತದಲ್ಲೂ ಇಂದು ಭಾರತ-ಪಾಕಿಸ್ತಾನ ಸೆಣಸಾಟ!

ಬುಡಾಪೆಸ್ಟ್​: ಇತ್ತೀಚೆಗೆ ಕ್ರೀಡಾಕ್ಷೇತ್ರದಲ್ಲಿ ಭಾರತ-ಪಾಕಿಸ್ತಾನದ ಮುಖಾಮುಖಿ ಹೆಚ್ಚಾಗಿದೆ. ಸ್ಯಾಫ್​ ಫುಟ್​ಬಾಲ್​, ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ, ಎಮರ್ಜಿಂಗ್​ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಸೆಣಸಾಟ ಏರ್ಪಟ್ಟಿತ್ತು. ಇದಲ್ಲದೆ ಮುಂಬರುವ ದಿನಗಳಲ್ಲಿ ಏಷ್ಯಾಕಪ್​-ವಿಶ್ವಕಪ್​ ಏಕದಿನ ಟೂರ್ನಿಗಳಲ್ಲೂ ಇಂಡೋ-ಪಾಕ್​ ಹೈ-ವೋಲ್ಟೇಜ್​ ಪಂದ್ಯಗಳು ನಡೆಯಲಿವೆ. ಇದರ ನಡುವೆ ಈಗ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲೂ ಭಾರತ-ಪಾಕಿಸ್ತಾನ ಸೆಣಸಾಟಕ್ಕೆ ವೇದಿಕೆ ಸಜ್ಜಾಗಿದೆ. ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ಭಾರತದ ಮೂವರು ತಾರೆಯರಾದ ನೀರಜ್​ ಚೋಪ್ರಾ, ಕನ್ನಡಿಗ ಮನು ಡಿ.ಪಿ. ಮತ್ತು ಕಿಶೋರ್​ ಜೆನಾ ಫೈನಲ್​ಗೇರಿದ್ದಾರೆ. ಭಾನುವಾರ ನಡೆಯಲಿರುವ ಪದಕ ಸ್ಪರ್ಧೆಯಲ್ಲಿ ಈ ಮೂವರಿಗೆ ಪಾಕಿಸ್ತಾನದ ಅರ್ಷದ್​ ನದೀಮ್​ ಪ್ರಮುಖ ಪ್ರತಿಸ್ಪರ್ಧಿ ಎನಿಸಿದ್ದಾರೆ.

ಅರ್ಹತಾ ಸುತ್ತಿನ ಮೊದಲ ಯತ್ನದಲ್ಲೇ 88.77 ಮೀ. ದೂರ ಎಸೆದು ಅಗ್ರಸ್ಥಾನದೊಂದಿಗೆ ಫೈನಲ್​ಗೇರಿದ ಟೋಕಿಯೊ ಒಲಿಂಪಿಕ್ಸ್​ ಚಾಂಪಿಯನ್​ ನೀರಜ್​ ಸಹಜವಾಗಿಯೇ ಸ್ವರ್ಣ ಗೆಲ್ಲುವ ಫೇವರಿಟ್​ ಎನಿಸಿದ್ದಾರೆ. ಮನು (81.31 ಮೀ.) ಮತ್ತು ಕಿಶೋರ್​ (80.55 ಮೀ) ಕೂಡ 80 ಮೀ. ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದರು. ಅರ್ಷದ್​ ನದೀಂ 86.79 ಮೀ. ದೂರ ಭರ್ಜಿ ಎಸೆದು ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಪಡೆದಿದ್ದರು. ನೀರಜ್​ ಇನ್ನೂ 90ರ ಗಡಿ ದಾಟಲು ಶಕ್ತರಾಗದಿರುವ ನಡುವೆ, ಅರ್ಷದ್​ ಕಳೆದ ವರ್ಷ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ 90.18 ಮೀ. ಎಸೆದು ಬೀಗಿದ್ದರು. 25 ವರ್ಷದ ನೀರಜ್ ಫೈನಲ್​ನಲ್ಲಿ ಮೊದಲ ಬಾರಿಗೆ 90 ಮೀ. ಗಡಿಯನ್ನೂ ದಾಟುವ ಹಂಬಲದಲ್ಲಿದ್ದಾರೆ.

ಹಾಲಿ ಚಾಂಪಿಯನ್​ ಗ್ರೇನೆಡಾದ ಆಂಡರ್​ಸನ್​ ಪೀಟರ್ಸ್​ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿರುವ ನಡುವೆ, ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತ ಜೇಕಬ್​ ವಡ್ಲೆಜ್​ ಮತ್ತು ಜರ್ಮನಿಯ ಜೂಲಿಯನ್​ ವೆಬರ್​ ಕೂಡ ನೀರಜ್​ಗೆ ಪ್ರಮುಖ ಪ್ರತಿಸ್ಪರ್ಧಿಗಳೆನಿಸಿದ್ದಾರೆ. ಒಲಿಂಪಿಕ್ಸ್​, ಏಷ್ಯನ್​ ಗೇಮ್ಸ್​, ಕಾಮನ್ವೆಲ್ತ್​ ಗೇಮ್ಸ್​ ಚಿನ್ನ, ಡೈಮಂಡ್​ ಲೀಗ್​ ಪ್ರಶಸ್ತಿ ಸಹಿತ ಅಥ್ಲೆಟಿಕ್ಸ್​ನಲ್ಲಿ ಬಹುತೇಕ ಕಿರೀಟ ಗೆದ್ದಿರುವ ನೀರಜ್​ಗೆ ಈ ಬಾರಿ, ಏಕೈಕ ಕೊರತೆ ಎನಿಸಿರುವ ವಿಶ್ವ ಚಾಂಪಿಯನ್​ ಪಟ್ಟವೂ ಒಲಿದುಬರುವ ನಿರೀಕ್ಷೆ ಹರಡಿದೆ.

ನೀರಜ್​ ಚೋಪ್ರಾ ಚಿನ್ನದ ಪದಕ ಗೆದ್ದರೆ, ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ಷಿಪ್​ ಎರಡರಲ್ಲೂ ಚಿನ್ನ ಗೆದ್ದ 2ನೇ ಭಾರತೀಯ ಎನಿಸಲಿದ್ದಾರೆ. ಶೂಟರ್​ ಅಭಿನವ್​ ಬಿಂದ್ರಾ ಮೊದಲ ಸಾಧಕ.

ಫೈನಲ್​ ಸ್ಪರ್ಧೆ

ಆರಂಭ: ರಾತ್ರಿ 11.50

ನೇರಪ್ರಸಾರ: ಜಿಯೋಸಿನಿಮಾ, ಸ್ಪೋರ್ಟ್ಸ್​18

ನಾನು ಬೇರಾರೊಂದಿಗೂ ಸ್ಪರ್ಧಿಸುವುದಿಲ್ಲ. ಯಾವಾಗಲೂ ನನ್ನೊಂದಿಗೆ ಸ್ಪರ್ಧಿಸುತ್ತೇನೆ. ನೀರಜ್​ ಜತೆಗೆ ಯಾವುದೇ ವೈರತ್ವವಿಲ್ಲ. ನೀರಜ್​ ಕೂಡ ಉತ್ತಮ ನಿರ್ವಹಣೆ ತೋರಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದು ಅರ್ಷದ್​ ನದೀಮ್​ ಹೇಳಿದ್ದಾರೆ.