ದುಬೈ: ಟೀಮ್ ಇಂಡಿಯಾದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿಯ ಜನವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ 19 ವಯೋಮಿತಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿ ಗೊಂಗಡಿ ತ್ರಿಷಾ ರೇಸ್ನಲ್ಲಿದ್ದಾರೆ.
ವರುಣ್ ಚಕ್ರವರ್ತಿ ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ವೆಸ್ಟ್ ಇಂಡೀಸ್ ಸ್ಪಿನ್ನರ್ ಜೊಮೆಲ್ ವಾರಿಕನ್ ಮತ್ತು ಪಾಕಿಸ್ತಾನದ ಸ್ಪಿನ್ನರ್ ನೋಮನ್ ಅಲಿ ಪ್ರಶಸ್ತಿ ರೇಸ್ನಲ್ಲಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ. ವಾರಿಕನ್ ಪಾಕ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 19 ವಿಕೆಟ್ ಕಬಳಿಸಿ ಮಿಂಚಿದ್ದರೆ, ನೋಮನ್ ಅಲಿ 16 ವಿಕೆಟ್ ಗಳಿಸಿದ್ದರು.
ಮಹಿಳಾ ವಿಭಾಗದಲ್ಲಿ ತ್ರಿಷಾ, ವೆಸ್ಟ್ ಇಂಡೀಸ್ನ ಕರಿಶ್ಮಾ ರಾಮ್ಹರಾಕ್ ಮತ್ತು ಆಸ್ಟ್ರೆಲಿಯಾದ ಬೆತ್ ಮೂನಿ ಜತೆ ಪೈಪೋಟಿ ನಡೆಸಲಿದ್ದಾರೆ.