ನವದೆಹಲಿ: ಭಾರತೀಯ ಕ್ರಿಕೆಟ್ ಪ್ರಿಯರಿಗೆ ಒಳ್ಳೆಯ ಸುದ್ದಿ ಬಂದಿದೆ. ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ತಂಡದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟಿ20 ಮತ್ತು ಏಕದಿನ ಸರಣಿಗಳಲ್ಲಿ ಭಾಗವಹಿಸಲಿದೆ.
ಭಾರತ ತಂಡ ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿದೆ. ಇದರ ನಂತರ, ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಟಿ20 ಸರಣಿ ಜುಲೈ 26ರಿಂದ ಆರಂಭವಾಗಲಿದೆ. ಎರಡನೇ ಪಂದ್ಯ ಇದೇ 27ರಂದು ನಡೆಯಲಿದ್ದು, ಮೂರನೇ ಪಂದ್ಯ ಜುಲೈ 29ರಂದು ನಡೆಯಲಿದೆ. ಅದೇ ಸಮಯದಲ್ಲಿ, ಏಕದಿನ ಸರಣಿಯು ಆಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು, ಎರಡನೇ ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಆಗಸ್ಟ್ 4 ಮತ್ತು 7 ರಂದು ನಡೆಯಲಿವೆ.
ಈ ಸರಣಿಯ ಅಧಿಕೃತ ಪ್ರಸಾರಕರಾದ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಟ್ವೀಟ್ ಮೂಲಕ ಎಲ್ಲಾ ಪಂದ್ಯಗಳ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಟಿ20 ಪಂದ್ಯಗಳು ಶ್ರೀಲಂಕಾದ ಪಲ್ಲೆಕೆಲೆ ಹಾಗೂ ಏಕದಿನ ಪಂದ್ಯಗಳು ರಾಜಧಾನಿ ಕೊಲಂಬೊ ಮೈದಾನದಲ್ಲಿ ನಡೆಯಲಿವೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಶುರುವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2:30ರಿಂದ ಆರಂಭವಾಗಲಿದೆ.
ಮುಖ್ಯ ಕೋಚ್ ಅಭಿಯಾನ ಶುರು: ಇತ್ತೀಚೆಗೆ ನೂತನ ಮುಖ್ಯಕೋಚ್ ಆಗಿ ನೇಮಕಗೊಂಡ ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ ಭಾರತ ಮೊದಲ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಈ ಸರಣಿಯೊಂದಿಗೆ ಗಂಭೀರ್ ತಮ್ಮ ಮುಖ್ಯಕೋಚ್ ಕೋಚ್ ಅಭಿಯಾನವನ್ನು ಶುರುಮಾಡಲಿದ್ದಾರೆ. ಮುಖ್ಯವಾಗಿ ಇದು ಮುಖ್ಯ ಕೋಚ್ ಆಗಿರುವ ಗಂಭೀರ್ ಅವರ ಮೊದಲ ವಿದೇಶಿ ಪ್ರವಾಸವಾಗಿದೆ.